ADVERTISEMENT

ಯಾದಗಿರಿ | ಕಾಕಲವಾರ ಗ್ರಾಮದಲ್ಲಿ ವಾಂತಿ-ಭೇದಿ: 10ಕ್ಕೂ ಹೆಚ್ಚು ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 13:44 IST
Last Updated 13 ಜುಲೈ 2024, 13:44 IST
   

ಗುರುಮಠಕಲ್‌ (ಯಾದಗಿರಿ): ತಾಲ್ಲೂಕಿನ ಕಾಕಲವಾರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 10ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಕಲುಷಿತ ನೀರಿನಿಂದಲೇ ವಾಂತಿ-ಭೇದಿ ಉಂಟಾಗಿರುವ ಆರೋಪಗಳು ಕೇಳಿಬರುತ್ತಿವೆ.

ಕಾಕಲವಾರ ಗ್ರಾಮದ ನಾಲ್ಕು ನೀರಿನ ಮಾದರಿಗಳನ್ನು ಈಚೆಗೆ ಪರೀಕ್ಷಿಸಿದ್ದು, ಮೂರು ಮಾದರಿಗಳು ಕುಡಿಯಲು ಯೋಗ್ಯವಲ್ಲ ಎನ್ನುವ ವರದಿ ಬಂದಿತ್ತು.

ಈ ಕುರಿತು ಜುಲೈ 10 ರಂದು ಆರೋಗ್ಯ ಇಲಾಖೆಯಿಂದ ಪಂಚಾಯಿತಿಗೆ ಈ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡದಂತೆ ಪತ್ರವನ್ನೂ ನೀಡಲಾಗಿತ್ತು. ಆದರೂ ನೀರು ಸರಬರಾಜು ಮಾಡಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣ ಎನ್ನುವ ಮಾತುಗಳು ಗ್ರಾಮಸ್ಥರದು.

ADVERTISEMENT

‘ಗ್ರಾಮಕ್ಕೆ ನೀರು ಸರಬರಾಜು ಮಾಡುವ ನಾಲ್ಕು ಕೊಳವೆಬಾವಿಗಳಲ್ಲಿ ಚಪೆಟ್ಲಾ ರಸ್ತೆಯಲ್ಲಿನ ಕೊಳವೆಬಾವಿ ಮಾತ್ರ ಕುಡಿಯಲು ಯೋಗ್ಯ. ಮೌಲಾಲಿ ದರ್ಗಾದ ಹತ್ತಿರ, ಹರಿಜನವಾಡಾ ಹತ್ತಿರ, ರಾಂಪೋಳ ಹೊಲದ ಹತ್ತಿರದ ಈ ಮೂರೂ ಕೊಳವೆಬಾವಿಗಳಿಂದ ಸಂಗ್ರಹಿಸಿದ್ದ ನೀರಿನ ಮಾದರಿಯು ಕುಡಿಯಲು ಯೋಗ್ಯವಿರಲಿಲ್ಲ. ಆದರೆ, ಈ ಜಲಮೂಲಗಳ ಕ್ಲೋರಿನೇಶನ್‌ ಮತ್ತು ಸಂಪೂರ್ಣ ಯೋಗ್ಯವಾಗುವವರೆಗೂ ನೀರು ಸರಬರಾಜು ಮಾಡಬಾರದಿತ್ತು. ಜತೆಗೆ ಗ್ರಾಮದ ನೀರು ಸರಬರಾಜು ಪೈಪ್‌ಲೈನ್‌ ಅಲ್ಲಲ್ಲಿ ಸೋರಿಕೆಯಿದ್ದು, ದುರಸ್ತಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಅವರು ಮಾಡಬೇಕಿದ್ದ ಕೆಲಸ ಮಾಡದೇ ನಮ್ಮಂತ ಬಡವರಿಗೆ ರೋಗಬರುತ್ತಿವೆ’ ಎನ್ನುವುದು ಗ್ರಾಮದ ಮುದಕರೊಬ್ಬರ ಅಂಬೋಣ.

‘ಗ್ರಾಮದಲ್ಲಿ ಸರಬರಾಜಾಗುತ್ತಿರುವ ನಳದ ನೀರು ಕಲುಷಿತ ಮತ್ತು ವಾಸನೆ ಬರುತ್ತಿರುವ ಕುರಿತು ಪಂಚಾಯಿತಿಗೆ ತಿಳಿಸಿದರೂ ಸುಮ್ಮನಿದ್ದರು’ ಎಂದು ಶನಿವಾರ ವಾಂತಿ-ಬೇಧಿಯಿಂದ ಬಳಲಿದ ಬಸ್ಸಪ್ಪ ಅಳಲು ತೋಡಿಕೊಂಡರು.

‘ಗುರುಮಠಕಲ್‌ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ 5, ರಕ್ಷಾ ಆಸ್ಪತ್ರೆಯಲ್ಲಿ 7 ಜನ ವಾಂತಿ-ಬೇಧಿಗೆ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ಮತ್ತು ಶುಕ್ರವಾರ ಎರಡೂ ದಿನಗಳಲ್ಲೂ ಕೆಲವರು ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ’ ಎಂದು ಆಸ್ಪತ್ರೆಗಳ ಸಿಬ್ಬಂದಿ ಮಾಹಿತಿ ನೀಡಿದರು.

‘ಕಳೆದ ವರ್ಷ ಜರುಗಿದ ಪ್ರಕರಣಗಳಿಂದ ತಪ್ಪುಗಳನ್ನು ತಿದ್ದಿಕೊಂಡು, ಸಮಸ್ಯೆ ಮರುಕಳಿಸದಂತೆ ಎಚ್ಚರವಹಿಸುವ ನಿರೀಕ್ಷೆಯಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಮಾನ್ಯ ಜನರು ಬಳಲುವಂತೆ ಆಗುತ್ತಿರುವುದು ನಾಗರೀಕ ಸಮಾಜಕ್ಕೆ ನಾಚಿಕೆಯ ಸಂಗತಿ’ ಎಂದು ತಾಲ್ಲೂಕು ಡಿಎಸ್‌ಎಸ್‌ ಅಧ್ಯಕ್ಷ ಲಾಲಪ್ಪ ತಲಾರಿ ಆಕ್ರೋಶ ವ್ಯಕ್ತಪಡಿಸಿದರು.

ಬಡವರೇ ಇಂಥ ಸಮಸ್ಯೆಗಳಿಗೆ ಬಲಿಯಾಗುತ್ತೀವಿ. ಆದ್ದರಿಂದಲೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೇನೋ? ಆಸ್ಪತ್ರೆಗಳಿಗೆ ಖರ್ಚು ಮಾಡಲೂ ಸಾಲ ಮಾಡಬೇಕು. ನಮ್ಮ ಗೋಳು ಪರಿಹರಿಸಿ
- ಮೊಗುಲಪ್ಪ ಬುಡಂಪೋಳ, ಕಾಕಲವಾರ
ಇಂದು (ಶನಿವಾರ) ಬೆಳಿಗ್ಗೆಯಿಂದ ನಮ್ಮ ಅಕ್ಕ ಮೊಗುಲಮ್ಮ ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಆದರೆ, ನಮ್ಮ ಪರಿಸ್ಥಿತಿ ಹೀಗಾಗಲು ಯಾರು ಕಾರಣ?
- ಲಕ್ಷ್ಮಮ್ಮ ಕಾಮಂಚಿ, ಕಾಕಲವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.