ADVERTISEMENT

ಗುರುಮಠಕಲ್: ವಾಂತಿ-ಭೇದಿ ಪ್ರಕರಣಗಳಿಗೆ ಮುಕ್ತಿ ಎಂದು?

ಗುರುಮಠಕಲ್‌ ತಾಲ್ಲೂಕಿನಲ್ಲಿ ಮರುಕಳಿಸುತ್ತಿರುವ ಪ್ರಕರಣ; ರೋಸಿ ಹೋದ ಜನ

ಎಂ.ಪಿ.ಚಪೆಟ್ಲಾ
Published 19 ಜುಲೈ 2024, 5:27 IST
Last Updated 19 ಜುಲೈ 2024, 5:27 IST
ಸದಾಶಿವರೆಡ್ಡಿ ಜಿ., ಕಾಕಲವಾರ
ಸದಾಶಿವರೆಡ್ಡಿ ಜಿ., ಕಾಕಲವಾರ   

ಗುರುಮಠಕಲ್: ತಾಲ್ಲೂಕನ್ನು ಬಿಟ್ಟು-ಬಿಡದೆ ಕಾಡುತ್ತಿರುವ ವಾಂತಿ-ಭೇದಿ ಪ್ರಕರಣ ಅಲ್ಲಲ್ಲಿ ಮರುಕಳಿಸುತ್ತಿರುವುದು ಸಾರ್ವಜನಿಕರನ್ನು ರೋಸಿಹೋಗುವಂತೆ ಮಾಡಿದೆ. ಕಾಕಲವಾರ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದ ಬಳಿಕ ಸಂಬಂಧಿಸಿದವರು ಎಚ್ಚೆತ್ತುಕೊಳ್ಳುವುದು ಯಾವಾಗ? ಮರುಕಳಿಸುತ್ತಿರುವ ವಾಂತಿ-ಭೇದಿ ಪ್ರಕರಣಗಳಿಗೆ ಮುಕ್ತಿ ಎಂಬ ಮಾತುಗಳು ತಾಲ್ಲೂಕಿನಾದ್ಯಂತ ಕೇಳಿ ಬರುತ್ತಿದೆ.

2023ರ ಫೆಬ್ರುವರಿಯಲ್ಲಿ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಉಂಟಾದ ವಾಂತಿಭೇದಿ ಪ್ರಕರಣದಲ್ಲಿ  ಮೂವರು ಗ್ರಾಮಸ್ಥರು ಮೃತಪಟ್ಟು, ಮುನ್ನೂರಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದರು.  ಅನಪುರ ಘಟನೆಯ ಬಳಿಕವೂ ಆಡಳಿತ ಇನ್ನೂ ಎಚ್ಚರಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಕಲುಷಿತ ನೀರಿನಿಂದ ಉಂಟಾಗುತ್ತಿರುವ ಸಾವು-ನೋವು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸೇರಿ ಸಂಬಂಧಿಸಿದ ಪಂಚಾಯಿತಿಗಳು ವಾಂತಿ ಭೇದಿ ಅವಘಡಗಳನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಒಂದೊಮ್ಮೆ ಅಧಿಕಾರಿಗಳಲ್ಲಿ ಸಾಮಾನ್ಯ ಜನರ ಜೀವದ ಕುರಿತು ನಿಜವಾಗಿಯೂ ಕಾಳಜಿಯಿದ್ದರೆ ನಮ್ಮೂರಿನಲ್ಲಿ ವಾಂತಿ-ಭೇದಿಯ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ ಎನ್ನುವ ಅಸಮಾಧಾನ ಕಾಕಲವಾರ ಗ್ರಾಮದ ಶರಣಪ್ಪ ಅವರದ್ದು.

‘ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದರೂ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಿಲ್ಲ. ಚರಂಡಿಯಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್‌ ಒಡೆದು ಸೋರಿಕೆಯಾಗುತ್ತಿದ್ದರೂ ದುರಸ್ತಿ ಮಾಡಲಿಲ್ಲ. ಇದರಿಂದಾಗಿ ಚರಂಡಿಯ ಕಲುಷಿತ ನೀರು ಪೈಪ್‌ಗಳಲ್ಲಿ ಸೇರಿ, ಮನೆಗಳ ಪೂರೈಕೆಯಾದ ಪರಿಣಾಮ ಅವಘಡ ಸಂಭವಿಸಿತು. ತಾಲ್ಲೂಕಿನಲ್ಲಿ ಪ್ರತಿ ಬಾರಿಯೂ ಸಹ ಅಧಿಕಾರಿಗಳು, ‘ಮುಂದೆ ಹೀಗಾಗದಂತೆ ಎಚ್ಚರಿಕೆ ಮತ್ತು ಅವಶ್ಯಕ ಕ್ರಮ ವಹಿಸುವ’ ಭರವಸೆ ನೀಡಿ ಹೋಗುತ್ತಾರೆ. ಮತ್ತೊಂದೆಡೆ ಸಮಸ್ಯೆ ಉಲ್ಬಣವಾದಗಲೇ ಕೊಟ್ಟ ಭರವಸೆ ನೆನಪಾಗುವುದು. ಇದು ಆಡಳಿತ ಯಂತ್ರದ ನಿರ್ಲಕ್ಷಕ್ಕೆ ಸಾಕ್ಷಿ’ ಎನ್ನುತ್ತಾರೆ ಗ್ರಾಮಸ್ಥರು.

23 ಗುಣಮುಖ, ಆರೈಕೆಯಲ್ಲಿ 6 ಜನ:  ಕಾಕಲವಾರ ಗ್ರಾಮದಲ್ಲಿ ಈವರೆಗೆ 24 ಜನರು ಚಿಕಿತ್ಸೆಗೆ ಬಂದಿದ್ದು, ಅವರಲ್ಲಿ 23 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 5 ಜನ ವಾಂತಿ-ಭೇದಿಗೆ ಆರೈಕೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆಯಿದೆ. ಬುಧವಾರ ಹೊಸ ಪ್ರಕರಣ ಬಂದಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

‘ಯಾದಗಿರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಒಬ್ಬರಿಗೆ ನಿರಂತರ ವಾಂತಿ-ಭೇದಿಯಿಂದ ನಿರ್ಜಲೀಕರಣ ಉಂಟಾಗಿ ರಕ್ತದೊತ್ತಡದಲ್ಲಿ ಭಾರಿ ಇಳಿಕೆಯಾಗಿತ್ತು. ಮೂತ್ರಪಿಂಡಗಳ ಮೇಲೂ ಸ್ವಲ್ಪ ಒತ್ತಡ ಉಂಟಾಗಿತ್ತು. ಆದರೆ, ವೈದ್ಯಕೀಯ ಆರೈಕೆಯಿಂದ ಸದ್ಯ ಆರೋಗ್ಯ ಸುಧಾರಿಸಿದ್ದು, ಯಾವ ಸಮಸ್ಯೆಯೂ ಇಲ್ಲ’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಬುಧವಾರ ಅಂಜಪ್ಪ ಎಂಬುವವರಿಗೆ ವಾಂತಿ ಭೇದಿಯಿಂದ ಮೂತ್ರಪಿಂಡದಲ್ಲಿ ಸೋಂಕು ಉಂಟಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಹೋಗಲು ವೈದ್ಯರು ತಿಳಿಸಿದ್ದು, ಅಂಜಪ್ಪ ಹಾಗೂ ಕುಟುಂಬದವರು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಸ್ ಮೂಲಕ ತೆರಳಿದ್ದಾರೆ.

ಗುರುಮಠಕಲ್ ಹತ್ತಿರದ ಕಾಕಲವಾರ ಗ್ರಾಮದ ಅಂಜಪ್ಪ ಅವರು ವಾಂತಿ ಭೇದಿಯಿಂದ ಉಂಟಾದ ತೊಂದರೆಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್‌ಗೆ ತೆರಳಲು ಗುರುಮಠಕಲ್‌ನಲ್ಲಿ ಬಸ್‌ಗಾಗಿ ಕಾದು ಕುಳಿತಿದ್ದ ಕುಟುಂಬ

ಕಳೆದ ವರ್ಷ ಸತತ ಐದಾರು ಗ್ರಾಮಗಳಲ್ಲಿ ಸಮಸ್ಯೆಯಾದ ನಂತರವೂ ಸಂಬಂಧಿಸಿದವರ ನಿರ್ಲಕ್ಷವೇ ಸಮಸ್ಯೆಗೆ ಕಾರಣ. ನಮ್ಮೂರಿನ ಈ ಪ್ರಕರಣವೇ ಕೊನೆಯಾಗಲಿ. ಇಲ್ಲವಾದರೆ ಸಾಮಾನ್ಯ ಜನರು ಬೀದಿಗೆ ಬಂದು ಹೋರಾಟಕ್ಕಿಳಿಯುವುದು ಅನಿವಾರ್ಯ.

- ಸದಾಶಿವರೆಡ್ಡಿ ಜಿ. ಕಾಕಲವಾರ

ಅಧಿಕಾರಿಗಳು ಕಾಗದ ಪತ್ರಗಳನ್ನು ನೋಡಿ ತೀರ್ಮಾನಿಸುವ ಬದಲು ಸ್ಥಳದಲ್ಲಿನ ನೈಜ ಸಮಸ್ಯೆ ಅರಿತು ಪರಿಹಾರ ಕಂಡುಕೊಂಡಿದ್ದರೆ ಸಮಸ್ಯೆಗಳು ಏಕೆ ಮರುಕಳಿಸುತ್ತವೆ? ಈಗಾದರೂ ಸಂಬಂಧಿತರು ಎಚ್ಚೆತ್ತುಕೊಳ್ಳಲಿ.

-ರಮೇಶ ಚಿಂಚಂಡ್ರಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.