ಸುರಪುರ: ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ದೇವಸ್ಥಾನದ ಜಾತ್ರೆ ಮಂಗಳವಾರ(ಆಗಸ್ಟ್ 27) ಆರಂಭವಾಗಲಿದ್ದು, ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಹಿನ್ನೆಲೆ: ಕ್ರಿ.ಶ 1710 ರಾಜಾ ಪಿತಾಂಬರ ಬಹಿರಿ ಪಿಡ್ಡನಾಯಕರು, ವಿಜಯನಗರ ಶೈಲಿಯಲ್ಲಿ ಆರಾಧ್ಯ ದೈವ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದರು.
ಪಶ್ಚಿಮ ದಿಕ್ಕಿಗೆ ಕಲ್ಯಾಣ ಮಂಟಪ, ನೈಋತ್ಯಕ್ಕೆ ಪಾಕಶಾಲೆ, ಉತ್ತರಕ್ಕೆ ಧಾನ್ಯ ಸಂಗ್ರಹಾಲಯವಿದೆ. ಪಕ್ಕದಲ್ಲೇ ದೇವರ ವಾಹನಗಳಿಗಾಗಿ ಕೊಠಡಿಗಳಿವೆ. ಕೆಳಗಿರುವ ಕಲ್ಯಾಣಿಯು ಆಕರ್ಷಕವಾಗಿದೆ. ಗಜಾಕೃತಿಯ ಮೇಲೆ ನಿರ್ಮಿಸಲಾಗಿರುವ 64 ಆಕರ್ಷಕ ಕೆತ್ತನೆಯ ಕಂಬಗಳಿರುವ ನವರಂಗವಿದೆ. ಗರ್ಭಗುಡಿಯ ಪ್ರವೇಶದ ಎರಡೂ ಬದಿಯಲ್ಲಿ ರಾಜ ಲಾಂಛನ ಗಂಡ ಭೇರುಂಡ ಕೆತ್ತನೆಯಿದೆ. ಮೂರ್ತಿಗಳು, ಗರ್ಭಗುಡಿ ಆಳ್ವಾರರ ಪುತ್ಥಳಿಗಳು ಗಮನ ಸೆಳೆಯುತ್ತಿವೆ. ದೇವಸ್ಥಾನದಲ್ಲಿ ನೆಲದಿಂದ 52 ಮೆಟ್ಟಿಲುಗಳಿವೆ.
ವೈಷ್ಣವ ಮತಾವಲಂಬಿ ಆಗಿರುವ ಅರಸರು, ಕೃಷ್ಣ ಜಯಂತಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಪ್ರತಿ ವರ್ಷ ಶ್ರಾವಣದ ರೋಹಿಣಿ ನಕ್ಷತ್ರದಂದು ಕೃಷ್ಣ ಜಯಂತಿ ಆಚರಿಸಲಾಗುತ್ತಿದೆ.
ಕಾರ್ಯಕ್ರಮಗಳು: ಆಗಸ್ಟ್ 27ರಂದು ಬೆಳಿಗ್ಗೆ ವಿಶೇಷ ಪೂಜೆ, ಸಂಜೆ 6 ಗಂಟೆಗೆ ಉಯ್ಯಾಲ ಸೇವೆ, ರಾತ್ರಿ 8 ಗಂಟೆಗೆ ತೀರ್ಥ ವಿನಿಯೋಗ. 28ರಂದು ಸಂಜೆ 5 ಗಂಟೆಗೆ ದೇವರ ಸ್ತಂಭಾರೋಹಣ, 29ರಂದು ಬೆಳಿಗ್ಗೆ 11 ಗಂಟೆಗೆ ಕುಸ್ತಿ ಪಂದ್ಯಗಳು, ಸಂಜೆ 5 ಗಂಟೆಗೆ ರಣಗಂಬಾರೋಹಣ ನಡೆಯಲಿದೆ.
ತಿರುಮಲ ವೆಂಕಟೇಶ್ವರಸ್ವಾಮಿ ನಮ್ಮ ಮನೆ ದೇವರು. ವೇಣುಗೋಪಾಲಸ್ವಾಮಿ ನಮ್ಮ ಆರಾಧ್ಯ ದೈವ. ನಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯದಂತೆ ಜಾತ್ರೆ ನಡೆಸಿಕೊಂಡು ಬರುತ್ತಿದ್ದೇವೆರಾಜಾ ಕೃಷ್ಣಪ್ಪನಾಯಕ ಸಂಸ್ಥಾನಿಕ
ಜಾತ್ರೆಗೆ ಎಲ್ಲ ವ್ಯವಸ್ಥೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಹೆಚ್ಚಿನ ಜನರು ಬರುವುದರಿಂದ ಭಕ್ತರು ಸಹಕರಿಸಬೇಕು. ಭಕ್ತರು ವ್ಯವಸ್ಥಿತವಾಗಿ ದರ್ಶನ ಪಡೆಯಬೇಕು. ಎಲ್ಲರಿಗೂ ಸ್ವಾಮಿ ಸನ್ಮಂಗಳ ಉಂಟು ಮಾಡಲಿಆಂಜನೇಯಚಾರ್ಯಲು ಪ್ರಧಾನ ಅರ್ಚಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.