ಹುಣಸಗಿ: ರಾಜ್ಯದೆಲ್ಲೆಡೆ ಬರದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಬೆಳೆಯಲಾಗಿರುವ ಭತ್ತದ ಮೇವಿಗೆ ಭಾರಿ ಬೇಡಿಕೆ ಬಂದಿದೆ.
ತಾಲ್ಲೂಕಿನ ಮುದನೂರು, ಅರಕೇರಾ ಜೆ., ವಜ್ಜಲ, ಬೆನಕನಹಳ್ಳಿ, ಹೆಬ್ಬಾಳ, ಚಿಕನಳ್ಳಿ, ಕೊಡೇಕಲ್ಲ, ಕಾಮನಟಗಿ, ರಾಜನಕೋಳುರ, ಗುಳಬಾಳ, ಮಾಳನೂರು ಸೇರಿದಂತೆ ಇತರ ಗ್ರಾಮಗಳಲ್ಲಿ ಯಂತ್ರಗಳ ಮೂಲಕ ಭತ್ತದ ರಾಶಿ ಮಾಡುತ್ತಲೇ ಅದರ ಬೆನ್ನಲ್ಲೇ ಸುತ್ತಮುತ್ತಲಿನ ಗ್ರಾಮಗಳ ರೈತರು ಮೇವನ್ನು ಶೇಖರಣೆ ಮಾಡಿಟ್ಟುಕೊಂಡು ಟ್ರ್ಯಾಕ್ಟರ್‌ಗಳಲ್ಲಿ ಕೊಂಡೊಯ್ಯುತ್ತಿದ್ದಾರೆ. ಆದರೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಭಾರ ಕಡಿಮೆ ಇರುವುದರಿಂದಾಗಿ ಹೆಚ್ಚಿನ ಗಾತ್ರದಲ್ಲಿ ಭತ್ತದ ಮೇವನ್ನು ತುಂಬಿಕೊಳ್ಳುತ್ತಿದ್ದು, ರಸ್ತೆಗಳಲ್ಲಿ ಸಂಚರಿಸುವಾಗ ಹಿಂದೆ ಬರುವ ವಾಹನಗಳು ಕಾಣುತ್ತಿಲ್ಲ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ ಎಂದು ಚಾಲಕರು ದೂರಿದ್ದಾರೆ.
ನಿಯಮ ಪಾಲನೆ ಮಾಡದೇ ಇರುವುದರಿಂದಾಗಿ ಎರಡು ದಿನಗಳ ಹಿಂದೆ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಭತ್ತದ ಮೇವು ತುಂಬಿದ್ದ ಟ್ರ್ಯಾಕ್ಟರ್‌ಗೆ ಬೆಂಕಿ ತಗುಲಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿದ್ದರಿಂದ ಹಾನಿ ಸಂಭವಿಸಿಲ್ಲ ಎಂದು ಬೆನಕನಹಳ್ಳಿ ಗ್ರಾಮದ ಯುವ ರೈತ ಸಿದ್ದನಗೌಡ ಹೇಳಿದರು.
ಸಧ್ಯ ಸುಧಾರಿತ ಕ್ರಮ ಬಂದಿದ್ದು, ಟ್ರ್ಯಾಕ್ಟರ್‌ಗೆ ಅಳವಡಿಸಲಾಗಿರುವ ಯಂತ್ರದಿಂದ ಭತ್ತದ ಪೆಂಡಿ ಕಟ್ಟಲಾಗುತ್ತಿದೆ. ಒಂದಕ್ಕೆ ಸುಮಾರು ₹30ರಿಂದ ₹40 ಖರ್ಚು ಬರುತ್ತದೆ. ಆದರೆ ಈ ಹುಲ್ಲಿನ ಪೆಂಡಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಸರಿಯಾಗಿ ಹೊಂದಿಸಿಟ್ಟುಕೊಂಡು ಹೋಗಬಹುದಾಗಿದೆ. ಹಣ ವ್ಯಯವಾಗುವುದರಿಂದ ರೈತರು ಆಸಕ್ತಿ ವಹಿಸುತ್ತಿಲ್ಲ.
ಸಂಚಾರಿ ನಿಯಮ ಪಾಲಿಸಿ: ರೈತರಾಗಲಿ, ಯಾರೇ ಆಗಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದಾಗಿ ಮುಂದಾಗುವ ಅನಾಹುತ ತಪ್ಪಿಸಬಹುದಾಗಿದೆ. ಹಿಂದೆ ಬರುವ ಹಾಗೂ ಮುಂದಿನ ವಾಹನಕ್ಕೆ ಅನುಕೂಲವಾಗುವಂತೆ ಮಾತ್ರ ಭತ್ತದ ಹುಲ್ಲನ್ನು ರೈತರು ಸಾಗಾಟ ಮಾಡಬೇಕು. ಸಾಧ್ಯವಾದಷ್ಟು ಹಗಲು ಹೊತ್ತಿನಲ್ಲಿಯೇ ಮೇವನ್ನು ಸಾಗಾಟ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹುಣಸಗಿ ಪಿ.ಎಸ್.ಐ ಚಂದ್ರಶೇಖರ ನಾರಾಯಣಪುರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ರೈತ ಸಂಘದ ವತಿಯಿಂದ ಮುದನೂರು ಗ್ರಾಮದಲ್ಲಿ ರೈತರಿಗೆ ಉಚಿತವಾಗಿ ಮೇವು ಕೊಡುವಂತಾಗಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲು ರೈತರಿಗೆ ಹೇಳಿದ್ದು, ವಿಜಯಪುರ ಜಿಲ್ಲೆಯ ಬೆಕಿನಾಳ, ಬಂಟನೂರು, ಪೀರಾಪುರ ಸೇರಿದಂತೆ ಇತರ ಗ್ರಾಮಗಳ ರೈತರು ಮೇವನ್ನು ಉಚಿತವಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ಮುದನೂರು ಗ್ರಾಮದ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ನಗನೂರ ‘ಪ್ರಜಾವಾಣಿ’ಗೆ ತಿಳಿಸಿದರು.
ಮುದನೂರು ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭತ್ತ ಬೆಳೆಗಾರರೊಂದಿಗೆ ಚರ್ಚಿಸಲಾಗಿದೆ. ವಿಜಯಪುರ ಜಿಲ್ಲೆಯ ಗಡಿ ಭಾಗದ ಗ್ರಾಮಗಳ ರೈತರಿಗೆ ಉಚಿತವಾಗಿ ಮೇವು ವ್ಯವಸ್ಥೆ ಮಾಡಲಾಗಿದೆಮಲ್ಲನಗೌಡ ನಗನೂರು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ
ಭತ್ತದ ಮೇವನ್ನು ಕೊಂಡೊಯ್ಯುವ ರೈತರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮೇವನ್ನು ಹಗಲು ಹೊತ್ತಿನಲ್ಲೇ ಸಾಗಾಣಿಕೆ ಮಾಡಬೇಕುಚಂದ್ರಶೇಖರ ನಾರಾಯಣಪುರ ಪಿ.ಎಸ್.ಐ ಹುಣಸಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.