ಹುಲಸೂರ: ತಾಲ್ಲೂಕಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ತಾಲ್ಲೂಕ ಆಡಳಿತದ ನಿರ್ಲಕ್ಷ್ಯದಿಂದ ಇದ್ದೂ ಇಲ್ಲದಂತಾಗಿವೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ಬದಿ ತ್ಯಾಜ್ಯ ತುಂಬಿ ತುಳುಕುತ್ತಿದೆ.
ತಾಲ್ಲೂಕಿನ ಹುಲಸೂರ, ಮಿರಖಲ, ಗಡಿಗೌಡಗಾಂವ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತವಾಗಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಅದು ಪಂಚಾಯಿತಿ ಕೇಂದ್ರದಿಂದ ದೂರವಿರುವುದರಿಂದ ಕಸ ಕೊಂಡೊಯ್ಯಲು ಹೆಣಗಾಡುವಂತಾಗಿದೆ. ಇದರಿಂದ ಎಲ್ಲೆಂದರಲ್ಲೇ ಕಸದ ರಾಶಿಗಳಿವೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಯೋಜನೆ ಇದ್ದರೂ ಬಹುತೇಕ ಕಡೆ ಘಟಕಗಳು ಪೂರ್ಣಗೊಂಡಿಲ್ಲ. ಪೂರ್ಣಗೊಂಡಿದ್ದರೂ ಹಸ್ತಾಂತರ ಮಾಡಿಲ್ಲ.
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸೇರಿದಂತೆ ವಾಹನ, ತ್ಯಾಜ್ಯ ಸಂಗ್ರಹ ಡಬ್ಬಿಗಳಿಗಾಗಿ ಪಂಚಾಯತ್ ರಾಜ್ ಇಲಾಖೆ ಹಣ ಬಿಡುಗಡೆ ಮಾಡಿದ್ದು ಹೆಚ್ಚಿನ ಅನುದಾನಕ್ಕೆ ನರೇಗಾ ಯೋಜನೆ ಬಳಸಿಕೊಂಡು ಘನ ತ್ಯಾಜ್ಯ ಘಟಕ ಸ್ಥಾಪನೆ ಮಾಡಲು ಆದೇಶಿಸಿದೆ. ಆದರೆ ತಾಲ್ಲೂಕಿನ 7 ಗ್ರಾ.ಪಂಗಳ ಪೈಕಿ ಗೋರಟಾ, ತೊಗಲುರ, ಗ್ರಾ.ಪಂಗಳಲ್ಲಿ ಘಟಕ ನಿರ್ಮಾಣವೇ ಆಗಿಲ್ಲ. ಮುಚಳಂಬ ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ಕಾರ್ಯ ವಿಳಂಬವಾಗುತ್ತಿದೆ.
ಪಟ್ಟಣ ಸೇರಿ ಗ್ರಾಮಗಳಲ್ಲಿರುವ ಹೋಟೆಲ್, ಟೀ ಅಂಗಡಿ ಹಾಗೂ ಸಣ್ಣಪುಟ್ಟ ಅಂಗಡಿಗಳ ಪ್ಲಾಸ್ಟಿಕ್, ಪೇಪರ್ ಹಾಗೂ ತ್ಯಾಜ್ಯ ಬೀಳುತ್ತಿದೆ. ದೂರದಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ತೆಗದುಕೊಂಡು ಹೋಗಲು ಸಮಸ್ಯೆಯಾಗುವುದರಿಂದ ಜನರು ಸಿಕ್ಕಸಿಕ್ಕಲ್ಲ ಸುರಿಯುತ್ತಿದ್ದಾರೆ.
ಬಹುತೇಕ ಕಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಬೀದಿ ನಾಯಿಗಳ ಹಾವಳಿ ಹೆಚ್ಚಿದೆ.
ತ್ಯಾಜ್ಯ ನಿರ್ವಹಣೆ ಹೇಗೆ: ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಘನ-ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಗುತ್ತಿಗೆ ತೆಗೆದುಕೊಳ್ಳಲು ಗ್ರಾಮ ಪಂಚಾಯಿತಿ ಮಟ್ಟದ ಸ್ವಸಹಾಯ ಸಂಘದ ಮಹಿಳೆಯರ ಒಕ್ಕೂಟಗಳ ರಚಿಸಿದೆ. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಮತ್ತು ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಒಳಗೊಂಡಿರುವ ಪ್ರಕ್ರಿಯೆಗಳ ಬಗ್ಗೆ ತರಬೇತಿ ನೀಡುತ್ತಿವೆ.
ಮಹಿಳೆಯರಿಗೆ ತ್ಯಾಜ್ಯ ನಿರ್ವಹಣೆಗಾಗಿ ವಾಹನ ಚಾಲನಾ ಕೌಶಲ ತರಬೇತಿ ನೀಡಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಿಸಲು ಬಳಸುವ ಸ್ವಚ್ಛತಾ ವಾಹಿನಿ ಚಾಲನೆ ಮಾಡಲು ಜಿ.ಪಂ ವತಿಯಿಂದ ತರಬೇತಿ ಮತ್ತು ಚಾಲನ ಪರವಾನಗಿ ನೀಡಿದೆ.
ತ್ಯಾಜ್ಯ ವಿಂಗಡಣಾ ಘಟಕ, ತ್ಯಾಜ್ಯ ವಿಲೇವಾರಿ ವಾಹನ ಖರೀದಿ, ತ್ಯಾಜ್ಯ ಸಂಗ್ರಹಿಸಲು ಒಂದು ಕುಟುಂಬಕ್ಕೆ ತಲಾ ಎರಡು ಡಬ್ಬ ವಿತರಣೆಯನ್ನು ಕೆಲವು ಗ್ರಾ.ಪಂಗಳಲ್ಲಿ ಮಾಡಲಾಗಿದೆ. ಆದರೆ ಯೋಜನೆಯ ನಿರ್ವಹಣೆ ಮಾತ್ರ ಇದುವರೆಗೂ ಯಾವ ಮುಂದುವರಿದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ತ್ಯಾಜ್ಯ ಸಂಗ್ರಹಣಾ ವಾಹನ ಕೆಲವು ಗ್ರಾ.ಪಂ ಅಂಗಳದಲ್ಲಿ ತುಕ್ಕು ಹಿಡಿದರೆ ಕೆಲವೆಡೆ ತ್ಯಾಜ್ಯ ಸಂಗ್ರಹಣ ಡಬ್ಬಿಗಳಿಗೆ ಗೋದಾಮಿನಲ್ಲಿ ತುಕ್ಕು ಹಿಡಿದಿವೆ.–ಸುರೇಶ ಕಾಣೆಕರ, ಸಾಮಾಜಿಕ ಕಾರ್ಯಕರ್ತ
ಸ್ವಚ್ಛ ಭಾರತ್ ಕೇವಲ ಗುತ್ತಿಗೆದಾರರಿಗೆ ಹಣ ಮಾಡುವ ಯೋಜನೆಯಾಗಿದೆ. ತ್ಯಾಜ್ಯ ಘಟಗಳು ಸ್ಥಗಿತವಾಗಿದೆ. ಮೇಲಧಿಕಾರಿಗಳ ನಿರ್ಲಕ್ಷದಿಂದ ಸರ್ಕಾರಿ ಅನುದಾನ ಸೋರಿಕೆಯಾಗಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು.–ಅಜಿತ ಸೂರ್ಯವಂಶಿ, ಲಹುಜಿ ಶಕ್ತಿ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ
ಗ್ರಾಮೀಣ ಭಾಗಗಳಲ್ಲಿ ಕಸವನ್ನು ತಿಪ್ಪೆಗೆ ಹಾಕುವ ರೂಡಿ ಇನ್ನೂ ತನಕ ಮುಂದುವರಿದಿರುವುದರಿಂದ ಕಸ ಸಂಗ್ರಹಣೆ ಅಭಿಯಾನಕ್ಕೆ ಹಿನ್ನಡೆಯಾಗಿದೆ.–ಸತೀಶ ಹಿರೇಮಠ, ಸಾಮಾಜಿಕ ಕಾರ್ಯಕರ್ತರು ಗಡಿಗೌಡಗಾಂವ
ಯೋಜನೆಯ ನಿರ್ವಹಣೆ ಪಿಡಿಒಗಳ ಜವಾಬ್ದಾರಿ. ನಾನು ಅಧಿಕಾರ ಸ್ವೀಕರಿಸಿ ಕಳೆದಿದೆ. ಸೂಕ್ತ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಗ್ರಾ.ಪಂಗೆ ಭೇಟಿ ನೀಡಿ ಯೋಜನೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಸೂಚನೆ ನೀಡಲಾಗುವುದು.–ವೈಜಣ್ಣ ಫೂಲೆ, ಇಒ ತಾಲ್ಲೂಕು ಪಂಚಾಯಿತಿ ಹುಲಸೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.