ADVERTISEMENT

ಹುಣಸಗಿ: ಎರಡು ತಿಂಗಳು ಕಳೆದರೂ ಸಿಗದ ಅಧಿಕಾರ ಭಾಗ್ಯ

ಹುಣಸಗಿ ಪಟ್ಟಣ ಪಂಚಾಯಿತಿಗೆ ಘೋಷಣೆಯಾಗದ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 5:38 IST
Last Updated 24 ಫೆಬ್ರುವರಿ 2024, 5:38 IST
ಹುಣಸಗಿ ಪಟ್ಟಣ ಪಂಚಾಯಿತಿ
ಹುಣಸಗಿ ಪಟ್ಟಣ ಪಂಚಾಯಿತಿ   

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೃದಯ ಭಾಗ ಹಾಗೂ ಪ್ರತಿಷ್ಠಿತ ನೀರಾವರಿ ಕ್ಷೇತ್ರದಲ್ಲಿ ಪ್ರಮುಖವಾಗಿರುವ ನಾರಾಯಣಪುರ ಬಸವಸಾಗರ ಜಲಾಶಯ ಹೊಂದಿರುವ ಹುಣಸಗಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಎರಡು ತಿಂಗಳು ಸಮೀಪಿಸುತ್ತಾ ಬಂದರೂ ಕೂಡಾ ಇಂದಿಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಾಗಿಲ್ಲ. ಇದರಿಂದಾಗಿ ಚುನಾಯಿತ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಮೀಸಲಾಯಿತ ಘೋಷಣೆಯ ದಾರಿ ಕಾಯುತ್ತಿದ್ದಾರೆ.

ಹುಣಸಗಿ ಪಟ್ಟಣ ಪಂಚಾಯಿತಿಯಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ವಾಣಿಜ್ಯ ಕೇಂದ್ರವಾಗುತ್ತಿರುವ ಹುಣಸಗಿ ಪಟ್ಟಣ ಅತ್ಯಂತ ಹೆಚ್ಚು ಕರ ವಸೂಲಾತಿಯ ಮೂಲಕ 2023-24ನೇ ಸಾಲಿನಲ್ಲಿ ₹ 47 ಲಕ್ಷ ಕರ ಸಂಗ್ರಹವಾಗಿತ್ತು. ಆ ಮೂಲಕ ಶೇ 85ಕ್ಕೂ ಹೆಚ್ಚು ಕರ ಸಂಗ್ರಹ ಮಾಡಿರುವ ಪಂಚಾಯಿತಿ ಎಂಬ ಹೆಗ್ಗಳಿಗೆಕೆ ಪಾತ್ರವಾಗಿದೆ.

ಹುಣಸಗಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಮೂರು ವರ್ಷದ ನಂತರ ಪಟ್ಟಣ ಪಂಚಾಯಿತಿಗೆ ಮೊದಲ ಚುನಾವಣೆ ನಡೆಯಿತು. ಇದರಿಂದಾಗಿ ಪಕ್ಷದ ಮುಖಂಡರು, ಅಭ್ಯರ್ಥಿಗಳು ಹಾಗೂ ಇಲ್ಲಿನ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿತ್ತು.

ADVERTISEMENT

ಚುನಾವಣೆ ನಡೆದು ಫಲಿತಾಂಶ ಬಂದಿದ್ದರೂ ಇಂದಿಗೂ ಚುನಾಯಿತ ಸದಸ್ಯರಿಗೆ ಅಧ್ಯಕ್ಷ ಸ್ಥಾನಕ್ಕೇರು ಭಾಗ್ಯ ಒಲಿದು ಬಂದಿಲ್ಲ. 2023ರ ಡಿಸೆಂಬರ್ 27ರಂದು ಚುನಾವಣೆ ನಡೆದು, 30 ರಂದು ಫಲಿತಾಂಶ ಪ್ರಕಟವಾಯಿತು. ಒಟ್ಟು 16 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ನ 14 ಸದಸ್ಯರು ಜಯ ಸಾಧಿಸುವ ಮೂಲಕ ಪಟ್ಟಣ ಪಂಚಾಯಿತಿ ಚುಕ್ಕಾಣಿ ಹಿಡಿಯಲು ಸನ್ನದ್ಧರಾದರೆ, ಬಿಜೆಪಿ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಆದರೆ ಇಲ್ಲಿಯವರೆಗೂ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರದಿಂದ ಮೀಸಲಾತಿ ನಿಗದಿಯಾಗಿಲ್ಲ. ಸರ್ಕಾರ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಯಾವುದೇ ಸೂಚನೆ ಬಂದಿಲ್ಲ. ಅಲ್ಲಿಂದ ಬಂದ ನಂತರ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಯಾರು ಏನಂದರು?

ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದ್ದ ಸದಸ್ಯರು ಚುನಾಯಿತರಾದರೂ ಅಧ್ಯಕ್ಷರಾಗುವ ಯೋಗ ಕೂಡಿ ಬಂದಿಲ್ಲ. ಮೀಸಲಾತಿ ಪೋಷಣೆಯಾದ ಬಳಿಕ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಎಲ್ಲರೂ ಮುಂದಾಗುತ್ತೇವೆ – ಚಂದ್ರಶೇಖರ ದಂಡಿನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಪಟ್ಟಣ ಪಂಚಾಯಿತಿ ಮೀಸಲಾತಿಗಾಗಿ ಕಾಯುತ್ತಿದ್ದು ನಿಗದಿಯ ಬಳಿಕ ಪಟ್ಟಣ ಪಂಚಾಯಿತಿಗೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡಿ ಸುಸೂತ್ರ ಆಡಳಿತಕ್ಕೆ ಒತ್ತು ನೀಡಲಾಗುವದು– ಸಿದ್ದಣ್ಣ ಮಲಗಲದಿನ್ನಿ ಕೆಪಿಸಿಸಿ ಸದಸ್ಯ

ಹುಣಸಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ ವಿಚಾರ ಸರ್ಕಾರ ಹಂತದಲ್ಲಿದ್ದು ಅಲ್ಲಿಂದ ನಿರ್ದೇಶನ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು – ಲಕ್ಷ್ಮಿಕಾಂತ ನಿರ್ದೇಶಕ ಜಿಲ್ಲಾ ನಗರಾಭಿವೃದ್ಧಿ ಕೋಶ ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.