ADVERTISEMENT

ಯಾದಗಿರಿ: 12 ಜನರ ತಲೆದಂಡ ಪಡೆದ ಹಗರಣ

ನಗರಸಭೆಯ ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆ ಪ್ರಕರಣ; ಮತ್ತೆ 8 ಜನರ ಅಮಾನತು

ಬಿ.ಜಿ.ಪ್ರವೀಣಕುಮಾರ
Published 6 ಡಿಸೆಂಬರ್ 2023, 5:55 IST
Last Updated 6 ಡಿಸೆಂಬರ್ 2023, 5:55 IST
ಯಾದಗಿರಿ ನಗರಸಭೆ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿರುವುದು
ಯಾದಗಿರಿ ನಗರಸಭೆ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿರುವುದು   

ಯಾದಗಿರಿ: ನಗರಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಡೆದಿದ್ದ 1,310 ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೌರಾಡಳಿತ ನಿರ್ದೇಶನಾಲಯ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ. ಇದರೊಂದಿಗೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 12 ಅಧಿಕಾರಿ, ಸಿಬ್ಬಂದಿಗಳ ತಲೆದಂಡವಾಗಿದೆ.

ಒಬ್ಬ ಪೌರಾಯುಕ್ತ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ವಿಷಯ ನಿರ್ವಾಹಕ, ಕಿರಿಯ ಎಂಜಿನಿಯರ್‌, ಕಂದಾಯ ನಿರೀಕ್ಷಕ, ಕಂದಾಯ ಅಧಿಕಾರಿ, ಕರ ವಸೂಲಿಗಾರ, ಕಂಪ್ಯೂಟರ್‌ ಆಪರೇಟರ್‌ಗಳು ಅಮಾನತಾಗಿದ್ದಾರೆ.

ನಗರಸಭೆಯ ಸರ್ಕಾರಿ ಸರ್ವೆ ನಂ. 391/1,2ರಲ್ಲಿ ಮನೆ ಸಂಖ್ಯೆ 5-1- 408/23 ಎ ಹಾಗೂ 24 ಎ, 25ಎ, 26 ಎ, 27ಎ ಮತ್ತು 5-1-408/28ಎ ಎಂದು ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ಖಾತಾ ನಕಲು ನೀಡಿರುವ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಅಮಾನತು ಮಾಡುವ ಜೊತೆಗೆ ರಾಯಚೂರು, ಕಲಬುರಗಿ, ಬೀದರ್‌, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಅಧಿಕಾರಿಗಳಿಗೆ ನೋಟಿಸ್‌, ತನಿಖಾ ತಂಡ: ಅನಧಿಕೃತ ಖಾತಾ ನಕಲು, ಸರ್ಕಾರಿ ಜಾಗ ಪರಭಾರೆ ಕುರಿತು ನಗರಸಭೆಯ ಹಿಂದಿನ ನಾಲ್ವರು ಪೌರಾಯುಕ್ತರು, ನಗರಸಭೆ ಸಿಬ್ಬಂದಿಗೆ ನೋಟಿಸ್‌ ನೀಡಲಾಗಿತ್ತು. ಅಲ್ಲದೇ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಜಿಲ್ಲಾಡಳಿತವೂ ಎರಡು ತಂಡಗಳನ್ನು ರಚಿಸಿತ್ತು. ಗಡುವು ಮುಗಿದ ನಂತರ ತನಿಖಾ ತಂಡಗಳು ವರದಿ ನೀಡಿದ್ದವು.

ಮೂವರಲ್ಲಿ ಒಬ್ಬರು ಅಮಾನತು: ಹಿಂದಿನ ಮೂವರು ಪೌರಾಯುಕ್ತರಲ್ಲಿ ಸದ್ಯಕ್ಕೆ ಒಬ್ಬರು ಅಮಾನತು ಆಗಿದ್ದು, ಇನ್ನಿಬ್ಬರ ವಿರುದ್ಧ ತೂಗುಗತ್ತಿ ನೇತಾಡುತ್ತಿದೆ. ಹಿಂದಿನ ಪೌರಾಯುಕ್ತರಾಗಿದ್ದ ಬಕ್ಕ‍ಪ್ಪ ಎಚ್‌., ಬಿ.ಟಿ. ನಾಯಕ ವಿರುದ್ಧ ಕ್ರಮಕ್ಕೆ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಅಕ್ರಮ ಎಸಗಿದವರಿಗೆ ಪಾಠ: ‘ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಖಾತಾ, ಸರ್ಕಾರಿ ಆಸ್ತಿ ಪರಭಾರೆ ಮಾಡಿದ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡುವ ಮೂಲಕ ಅಕ್ರಮ ಎಸೆಗಿದವರಿಗೆ ಸರ್ಕಾರ ತಕ್ಕ ಪಾಠ ಕಲಿಸಿದೆ. ಈ ಮೂಲಕ ಏನೂ ಆಗಲ್ಲ ಎನ್ನುವವರಿಗೆ ಶಿಕ್ಷೆ ಕೊಡಲಾಗಿದೆ. ಹೀಗಾಗಿ ಮುಂದೆಯಾದರೂ ಅಧಿಕಾರಿಗಳು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಹಿರಿಯ ವಕೀಲ ಭಾಸ್ಕರರಾವ ಮುಡಬೂಳ ಒತ್ತಾಯಿಸಿದ್ದಾರೆ.

ನಗರಸಭೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಅಧಿಕಾರಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಈಗ ಕೆಲವರು ಬೇರೆಡೆ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಪತ್ರ ತಲುಪಿಸಲಾಗುವುದು

-ಲಕ್ಷ್ಮೀಕಾಂತ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಯಾದಗಿರಿ

ಇಲಾಖೆ ವಿಚಾರಣೆ ಬಾಕಿ

ಪೌರಾಡಳಿತ ನಿರ್ದೇಶನಾಲಯ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಯಾದಗಿರಿ ನಗರಸಭೆ ಅಧಿಕಾರಿ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 9 (2)(ಸಿ) ರನ್ವಯ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10 (1) (ಡಿ) ರನ್ವಯ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅನಧಿಕೃತ ದಾಖಲೆಗಳನ್ನು ನೀಡಿ ಖಾತಾ ವರ್ಗಾವಣೆ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಅಧಿಕಾರಿ ನೌಕರರ ವಿರುದ್ಧ ನಿಯಮ ಅನುಸಾರ ಶಿಸ್ತು ಕ್ರಮ ವಹಿಸಲು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಕೋರಿದ್ದರು. ಜಿಲ್ಲಾಧಿಕಾರಿ ಶಿಫಾರಸಿನ ಮೇರೆಗೆ ನೌಕರರ ವಿರುದ್ಧ ಗಂಭೀರ ಆರೋಪಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇಲಾಖೆ ವಿಚಾರಣೆ ಮುಗಿದ ನಂತರ ಆಯಾ ಅಧಿಕಾರಿ ಸಿಬ್ಬಂದಿ ವಿರುದ್ಧ ಆರೋಪಗಳಿಗೆ ತಕ್ಕಂತೆ ವಜಾ ಅಥವಾ ಶಿಕ್ಷೆ ಆಗಬಹುದು ಎನ್ನಲಾಗಿದೆ.

ಅನಧಿಕೃತ ಖಾತಾಗಳಿಂದ ₹18 ಕೋಟಿ ನಷ್ಟ

ಯಾದಗಿರಿ ನಗರಸಭೆಯಲ್ಲಿ 2019ರಿಂದ 2023ರವರೆಗೆ ಹಿಂದಿನ ನಾಲ್ವರು ಪೌರಾಯುಕ್ತರು ಸಿಬ್ಬಂದಿ ಸೇರಿ ಸತ್ತವರ ಹೆಸರಿನಲ್ಲಿ ಅಕ್ರಮ ಖಾತಾ ನಕಲು ಸೃಷ್ಟಿಸಿದ್ದರು. ಇದರಿಂದ ನಗರಸಭೆಗೆ ಕೋಟ್ಯಂತರ ನಷ್ಟ ಉಂಟಾಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ನಗರ ವ್ಯಾಪ್ತಿಯ ಕೃಷಿ (ಗ್ರೀನ್ ಬೆಲ್ಟ್ ಮತ್ತು ಎಲ್ಲೋ ಬೆಲ್ಟ್) ಜಮೀನಿನಲ್ಲಿ ಎನ್‌ಎ ಆಗದೆ ಯೋಜನಾ ಪ್ರಾಧಿಕಾರದ ಅನುಮೋದನೆ ಇಲ್ಲದೆ ಹಾಗೂ ಯಾವುದೇ ಅಭಿವೃದ್ಧಿ ಪಡಿಸದ ನಿವೇಶನಗಳಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ಇ–ಆಸ್ತಿ ತಂತ್ರಾಂಶದಲ್ಲಿ 1310 ಅನಧಿಕೃತ ಖಾತಾಗಳನ್ನು ನೀಡಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು ₹18.12 ಕೋಟಿ ನಷ್ಟ ಉಂಟಾಗಿರುವ ಬಗ್ಗೆ ದೂರು ಸಲ್ಲಿಕೆಯಾಗಿತ್ತು.

‘ಪ್ರಜಾವಾಣಿ’ಯಿಂದ ಸರಣಿ ವರದಿ

ನಗರಸಭೆಯಲ್ಲಿ ಕೋಟ್ಯಂತರ ಮೌಲ್ಯದ ಹಗರಣ ಬಯಲಿಗೆ ಬಂದ ದಿನದಿಂದ ‘ಪ್ರಜಾವಾಣಿ’ ಅನೇಕ ಸರಣಿ ವರದಿಗಳನ್ನು ಮಾಡುವ ಮೂಲಕ ಸಂಚಲನ ಸೃಷ್ಟಿಸಿತ್ತು. ತನಿಖಾ ತಂಡ ರಚನೆಯಾಗಿ ಒಂದೂವರೆ ತಿಂಗಳ ನಂತರ ಗಡುವು ಮುಗಿದರೂ ವರದಿ ನೀಡದ ಕುರಿತು ಆಡಳಿತವನ್ನು ಎಚ್ಚರಿಸಿತ್ತು. ನಂತರ ವರದಿ ಸಲ್ಲಿಕೆಯಾಗಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಈಗ ಹಿಂದಿನ ಪೌರಾಯುಕ್ತ ಸೇರಿ ನಗರಸಭೆಯ 8 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪೌರಾಯುಕ್ತರೇ ದೂರು ನೀಡಿದ್ದರು! ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೃಷಿ ಜಮೀನಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ಇ–ಆಸ್ತಿ ತಂತ್ರಾಂಶದಲ್ಲಿ ಇ–ಖಾತಾ ನೀಡಿರುವ 1310 ಅನಧಿಕೃತ ಖಾತೆಗಳನ್ನು ರದ್ದುಪಡಿಸುವಂತೆ ಹಿಂದಿನ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆ ಅವರು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಇದಾದ ನಂತರ ಉಪಾಸೆಯವರನ್ನು ಮೂಲ ಸ್ಥಾನಕ್ಕೆ ಬಿಡುಗಡೆಗೊಳಿಸಲಾಗಿತ್ತು.

ಅಮಾನತು ಆಗಿರುವವರ ವಿವರ

ಅಧಿಕಾರಿ/ಸಿಬ್ಬಂದಿ;ಲೀನ್‌ ವರ್ಗಾವಣೆ ಶರಣಪ್ಪ; ಮಾನ್ವಿ ಪುರಸಭೆ ನರಸಿಂಹರೆಡ್ಡಿ;ಅಫಜಲಪುರ ಪುರಸಭೆ ವಿಶ್ವ‍ಪ್ರತಾಪ ಅಲೆಕ್ಜಂಡರ್‌;ಕುರೇಕುಪ್ಪ ಪುರಸಭೆ ರಿಯಾಜುದ್ದೀನ್;ಹಳ್ಳಿಖೇಡ ಪುರಸಭೆ ಸುರೇಶ ವಿಭೂತೆ;ಯಲಬುರ್ಗಾ ಪಟ್ಟಣ ಪಂಚಾಯಿತಿ ರಾಕೇಶ ರೆಡ್ಡಿ:ಚಿಂಚೋಳಿ ಪುರಸಭೆ ಲಿಂಗಾರೆಡ್ಡಿ;ಕುಷ್ಟಗಿ ಪುರಸಭೆ ಪುಷ್ಪಾವತಿ;ಬಳಗನೂರು ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.