ADVERTISEMENT

ಶಹಾಪುರ: ₹3ಕೋಟಿ ವೆಚ್ಚದ ಎಪಿಎಂಸಿ ಕಾಮಗಾರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:09 IST
Last Updated 24 ಅಕ್ಟೋಬರ್ 2024, 16:09 IST
ಶಹಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗುರುವಾರ ವಿವಿಧ ಕಾಮಗಾರಿಗಳನ್ನು ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷೆ ಬಸಮ್ಮ ಊರುಕಾಯಿ, ಕಾರ್ಯದರ್ಶಿ ಸುಮಂಗಲಾದೇವಿ ಉಪಸ್ಥಿತರಿದ್ದರು
ಶಹಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗುರುವಾರ ವಿವಿಧ ಕಾಮಗಾರಿಗಳನ್ನು ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷೆ ಬಸಮ್ಮ ಊರುಕಾಯಿ, ಕಾರ್ಯದರ್ಶಿ ಸುಮಂಗಲಾದೇವಿ ಉಪಸ್ಥಿತರಿದ್ದರು   

ಶಹಾಪುರ: ‘ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತವಾದ ಮಾರಾಟ ವ್ಯವಸ್ಥೆ ಕಲ್ಪಿಸುವುದರ ಜತೆ ವರ್ತಕರಿಗೆ ಪೂರಕವಾಗುವ ನಿಟ್ಟಿನಲ್ಲಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಕೃಷಿ ಮಾರುಕಟ್ಟೆಯನ್ನು ವರ್ತಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ 2023-24ನೇ ಸಾಲಿನ ನಬಾರ್ಡ್ ಆರ್.ಐ.ಡಿ.ಎಫ್-29 ಯೋಜನೆ ಅಡಿಯಲ್ಲಿ ಬಿಡುಗಡೆಯಾದ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಸಿ.ಸಿ.ಪ್ಲಾಟ್ ಫಾರ್ಮ್ ಮತ್ತು ಸಿ.ಸಿ.ಚರಂಡಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.

ಮಾರುಕಟ್ಟೆಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ಮುಕ್ತ ಮತ್ತು ಪಾರದರ್ಶಕ ವ್ಯಾಪಾರ ವಾತಾವರಣ ಸೃಷ್ಟಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಕೃಷಿ ಮಾರುಕಟ್ಟೆಯಲ್ಲಿ 52 ಮಳಿಗೆಗಳು ಕೇವಲ ಬಾಗ್ವಾನ್ ಸಮುದಾಯದ ವ್ಯಾಪಾರಿಗಳಿಗಾಗಿ ಮೀಸಲಿಟ್ಟಿದ್ದು ಮತ್ತು ದಿನ ಸಗಟು ವ್ಯಾಪಾರ ನಡೆಯಲು ಸಕಲ ರೀತಿಯಲ್ಲಿ ಸಿದ್ಧಗೊಂಡಿದೆ. ಅಲ್ಲದೇ ಮುಖ್ಯರಸ್ತೆಗೆ ಹೊಂದಿಕೊಂಡಿರುವ 78 ಮಳಿಗೆಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೇ50 ಹಂಚಿಕೆ ಮಾಡಿಕೊಡಲಾಗಿದೆ ಎಂದರು.

ADVERTISEMENT

ಎಪಿಎಂಸಿ ಅಧೀನದಲ್ಲಿ 58 ಎಕರೆ ಜಮೀನು ಇದ್ದು, ಅದರ ಸುತ್ತಲು ಕಾಂಪೌಂಡ್ ಅವಶ್ಯಕತೆ ಇದೆ. ಬರುವ ದಿನಗಳಲ್ಲಿ ಕಂಪೌಂಡ್ ನಿರ್ಮಿಸಲಾಗುವುದು. ಕೃಷಿ ಮಾರುಕಟ್ಟೆ ಆವರಣದಲ್ಲಿ ಒಟ್ಟು 434ನಿವೇಶನಗಳಿದ್ದು, ಈಗಾಗಲೇ 118 ನಿವೇಶನಗಳ ವಿವಿಧ ವ್ಯಾಪಾರಕ್ಕಾಗಿ ವರ್ತಕರಿಗೆ ವಿತರಿಸಿದೆ. ಮಾರುಕಟ್ಟೆ ಅಭಿವೃದ್ಧಿ ದೃಷ್ಟಿಯಿಂದ ಇನ್ನೂ 100 ನಿವೇಶನಗಳನ್ನು ವ್ಯಾಪಾರಿಗಳಿಗಾಗಿ ಮೀಸಲಿಟ್ಟಿದ್ದು ಅಗತ್ಯ ಸೌಲಭ್ಯದೊಂದಿಗೆ ಹಂಚಿಕೆ ಪ್ರಕ್ರಿಯೆ ಮಾಡಲಾಗುವದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಮೆಹೆರುನ್ನೀಸಾ ಬೇಗಂ, ಎಪಿಎಂಸಿ ಅಧ್ಯಕ್ಷೆ ಬಸಮ್ಮ ಊರಕಾಯಿ, ಉಪಾಧ್ಯಕ್ಷ ಬಸವರಾಜ ದೇವಪ್ಪ, ಕಾರ್ಯದರ್ಶಿ ಸುಮಂಗಲದೇವಿ, ನಗರಸಭೆ ಸದಸ್ಯರಾದ ಅಶೋಕ ನಾಯಕ ಮುಖಂಡರಾದ ಲಿಯಾಖತ್ ಪಾಶಾ,ಸೈಯದ್ ಮುಸ್ತಫಾ ದರ್ಬಾನ್, ಎಪಿಎಂಸಿಎ ಸದಸ್ಯರಾದ ಗದಿಗೆಪ್ಪ ದೇಸಾಯಿ,ಸಣ್ಣ ನಿಂಗಪ್ಪ ನಾಯ್ಕೋಡಿ, ಈರಣ್ಣ ಸಾಹು ತಡಬಿಡಿ, ಅಯ್ಯಣ್ಣ ರೊಟ್ನಡಿಗೆ, ಮಲ್ಲಪ್ಪ ಗೋಗಿ, ಶರಣಪ್ಪಗೌಡ,ಸಂತೋಷ, ಗುತ್ತಿಗೆದಾರರಾದ ದೇವೇಂದ್ರಪ್ಪ ತೋಟಗೇರ,ವೆಂಕಟರೆಡ್ಡಿಗೌಡ ಪಾಟೀಲ ಹಳಿಸಗರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.