ADVERTISEMENT

ಹೆಚ್ಚಿದ ಬಿಸಿಲು; ಮಡಕೆ ಮೊರೆ ಹೋದ ಜನ

ಎಳನೀರು ಬೆಲೆ ₹50ಕ್ಕೆ ಏರಿಕೆ, ಕಲ್ಲಂಗಡಿ ಬೆಲೆಯೂ ಹೆಚ್ಚಳ, ಬಿಸಿಲಿಗೆ ಬಸವಳಿದ ಜನ

ಬಿ.ಜಿ.ಪ್ರವೀಣಕುಮಾರ
Published 8 ಏಪ್ರಿಲ್ 2022, 22:30 IST
Last Updated 8 ಏಪ್ರಿಲ್ 2022, 22:30 IST
ಯಾದಗಿರಿ ನಗರದ ಹಳೆ ಜಿಲ್ಲಾಸ್ಪತ್ರೆ ರಸ್ತೆ ಬದಿ ಮಾರಾಟಕ್ಕೆ ಇಡಲಾಡ ಮಣ್ಣಿನ ಮಡಕೆಗಳು –ಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ
ಯಾದಗಿರಿ ನಗರದ ಹಳೆ ಜಿಲ್ಲಾಸ್ಪತ್ರೆ ರಸ್ತೆ ಬದಿ ಮಾರಾಟಕ್ಕೆ ಇಡಲಾಡ ಮಣ್ಣಿನ ಮಡಕೆಗಳು –ಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ 40 ರಿಂದ 41 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪಮಾನ ದಾಖಲಾಗುತ್ತಿದ್ದು, ಮಣ್ಣಿನ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಬೆಲೆಯೂ ಅಧಿಕವಾಗಿದೆ.

ಇದರ ಜೊತೆಗೆ ಎಳನೀರು ಬೆಲೆ ₹50ಕ್ಕೆ ಏರಿಕೆಯಾಗಿದೆ. ಕಲ್ಲಂಗಡಿ ಬೆಲೆಯೂ ಹೆಚ್ಚಳಗೊಂಡಿದ್ದು, ಜನತೆ ಬಿಸಿಲಿಗೆ ಬಸವಳಿಯುವಂತೆ ಮಾಡಿದೆ.

ಜಿಲ್ಲೆಯಲ್ಲಿ 6 ಗಂಟೆಗೆ ಸೂರ್ಯೋದಯವಾದರೆ, ಸಂಜೆ 6:35ಕ್ಕೆ ಸೂರ್ಯಾಸ್ತವಾಗುತ್ತದೆ. ಇದರ ಮಧ್ಯೆ ಪ್ರಖರ ಬಿಸಿಲಿನಿಂದ ಬಾಯಾರಿಸಿಕೊಳ್ಳಲು ತಣ್ಣನೆ ನೀರು ಕುಡಿಯಲು ಮಣ್ಣಿನಮಡಕೆ ಬಳಕೆ ಮಾಡುವುದು ಸಾಮಾನ್ಯವಾಗಿದೆ.

ADVERTISEMENT

ಬೆಳಿಗ್ಗೆಯಿಂದಲೇ ಬಿಸಿಲು ಮೈಸುಡುತ್ತಿದ್ದು, ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತೆ ಆಗಿದೆ. ಹಳೆ ಜಿಲ್ಲಾಸ್ಪತ್ರೆಯ ಮಾರ್ಗದಲ್ಲಿ ಕುಂಬಾರರು ಮಣ್ಣಿನ ಮಡಕೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ವಿವಿಧ ಗಾತ್ರದ ಮಡಕೆಗಳು ಆಕರ್ಷಕವಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಏಪ್ರಿಲ್‌ ತಿಂಗಳ ಆರಂಭದಲ್ಲೇ ಇಷ್ಟೊಂದು ಪ್ರಖರ ಬಿಸಿಲಿದ್ದರೆ ಮೇ ತಿಂಗಳಲ್ಲಿ ಬಿಸಿಲನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ.

ಮೂರು ವಿವಿಧ ಮಡಕೆಗಳು:

ಮಣ್ಣಿನ ಮಡಕೆಗಳಲ್ಲಿ ಮೂರು ವಿಧಗಳಿದ್ದು, ಗಾತ್ರಕ್ಕೆ ಅನುಗುಣವಾಗಿ ಬೆಲೆ ಇದೆ. ₹250, ₹200, ₹150ಗೆ ಒಂದು ಮಡಕೆ ಬೆಲೆ ಇದೆ. ಇವುಗಳಲ್ಲಿ ರಾಜಸ್ತಾನದಿಂದ ಆಮದು ಮಾಡಿಕೊಂಡಿರುವ ಮಣ್ಣಿನ ಮಡಕೆಗಳಿಗೆ ಬೇಡಿಕೆ ಜಾಸ್ತಿ ಇದೆ.

‘ಪ್ರತಿದಿನ 15ರಿಂದ 20 ಮಣ್ಣಿನ ಮಡಕೆಗಳು ಮಾರಾಟವಾಗುತ್ತಿದೆ. ಕಳೆದ ತಿಂಗಳು ವ್ಯಾಪಾರ ಕಡಿಮೆ ಇತ್ತು. ಈಗ ಬಿಸಿಲು ಹೆಚ್ಚಾಗುತ್ತಿದ್ದಂತೆ ಗ್ರಾಹಕರು ಖರೀದಿಗೆ ಬರುತ್ತಿದ್ದಾರೆ. ಸ್ಥಳೀಯ ಮಣ್ಣಿನ ಮಡಕೆಗಳಿಗೆ ಬೇಡಿಕೆ ಕಡಿಮೆ ಇದ್ದು, ಆಮದು ಮಾಡಿಕೊಂಡ ಮಡಕೆಗಳು ಹೆಚ್ಚು ಮಾರಾಟವಾಗುತ್ತಿವೆ’ ಎನ್ನುತ್ತಾರೆ ವಿಜಯಲಕ್ಷ್ಮಿ ಕುಂಬಾರ.

ಮಣ್ಣಿನ ಮಡಕೆಗಳ ಜೊತೆಗೆ ಮಣ್ಣಿನ ವಾಟರ್ ಬಾಟಲ್, ಮಣ್ಣಿನಿಂದ ತಯಾರಿಸಿದ ನೀರಿನ ನೈಸರ್ಗಿಕ ಫಿಲ್ಟರ್, ಮಗ್, ಚಹಾ ಕಪ್‌ ಹೀಗೆ ವಿವಿಧ ಬಗೆಯ ದಿನ ಬಳಕೆಯ ಸಾಮಾನುಗಳು ಮಾರುಕಟ್ಟೆಯಲ್ಲಿವೆ.

ಮಣ್ಣಿನ ನೀರಿನ ಬಾಟಲ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಹಣತೆ, ಧೂಪಾರತಿ, ಹುಂಡಿ, ಒಲೆ ಕೂಡ ಮಾರಾಟಕ್ಕೆ ಇಡಲಾಗಿದೆ. ಇಷ್ಟು ದಿನ ಬರೀ ಒಂದೇ ಶೈಲಿಯಲ್ಲಿ ಮಡಕೆ ಖರೀದಿಸುತ್ತಿದ್ದ ಜನರು ಆಧುನಿಕ ಶೈಲಿಯ ಮಣ್ಣಿನ ವಸ್ತುಗಳಿಗೆ ಮಾರುಹೋಗಿದ್ದಾರೆ. ಮಣ್ಣಿನ ಮಡಕೆಗಳಿಗೆ ನಳ ಅಳವಡಿಸಿದ್ದು, ಗ್ರಾಹಕರು ಖುಷಿಯಾಗಿದ್ದಾರೆ. ಅಲ್ಲದೇ ಮಡಕೆ ಇಡಲು ಕಬ್ಬಿಣ ಮತ್ತು ಪ್ಲಾಸ್ಟಿಕ್‌ನ ಸ್ಟ್ಯಾಂಡ್‌ ಬಳಕೆ ಮಾಡಲಾಗುತ್ತಿದೆ.

₹40ರಿಂದ ₹50ಕ್ಕೆ ಏರಿಕೆ: ಬೇಸಿಗೆ ಮುನ್ನ ₹40ಗೆ ಒಂದು ಎಳನೀರು ಮಾರಾಟವಾಗುತ್ತಿತ್ತು. ಈಗ ₹50 ಬೆಲೆಯಾಗಿದ್ದು, ಗ್ರಾಹಕರ ಜೇಬು ಸುಡುವಂತೆ ಮಾಡಿದೆ. ಪ್ರಮುಖವಾಗಿ ಶಾಸ್ತ್ರಿ ವೃತ್ತ, ಹಳೆ, ಹೊಸ ಬಸ್‌ನಿಲ್ದಾಣ, ಪದವಿ ಕಾಲೇಜು, ತಹಶೀಲ್ದಾರ್‌ ಕಚೇರಿ ಹೀಗೇ ನಗರದ ವಿವಿಧ ಕಡೆ ಎಳನೀರು ಮಾರಾಟ ಕೇಂದ್ರಗಳಿವೆ. ಎಲ್ಲಿ ನೋಡಿದರೂ ₹50ಕ್ಕಿಂತ ಕಡಿಮೆ ಬೆಲೆಗೆ ಎಳನೀರು ಸಿಗುತ್ತಿಲ್ಲ. ಮಂಡ್ಯ, ಮದ್ದೂರುನಿಂದ ಎಳನೀರು ಆಮದು ಆಗುತ್ತಿದ್ದು, ಅಲ್ಲಿಂದ ನಮಗೆ ದರ ಜಾಸ್ತಿ ಇದ್ದರಿಂದ ನಾವು ಅನಿವಾರ್ಯವಾಗಿ ದರ ಹೆಚ್ಚಳ ಮಾಡಿದ್ದೇವೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.

‘ಪ್ರತಿಒಂದಕ್ಕೆ ₹40ರಿಂದ 45 ದರ ಇದೆ. ಇದರಲ್ಲಿ ನಮಗೆ ₹5 ಲಾಭ ಸಿಗುತ್ತಿದೆ. ಬೇರೆ ಕಡೆಯಿಂದ ಆಮದು ಆಗುವ ಕಾರಣ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ನಾವು ಬೆಲೆ ಹೆಚ್ಚು ಮಾಡಿದ್ದೇವೆ’ ಎನ್ನುವುದು ಎಳನೀರು ವ್ಯಾಪಾರಿ ಬಸವರಾಜ ಮಾತಾಗಿದೆ.

ಕಲ್ಲಂಗಡಿ ಬೆಲೆಯೂ ಹೆಚ್ಚಳ: ಹೊಟ್ಟೆ ತಂಪಾಗಿಸಲು ಕಲ್ಲಂಗಡಿ ಹಣ್ಣು ಸೇವನೆ ಮಾಡುವುದು ಸಾಮಾನ್ಯವಾಗಿದೆ. ನಾಟಿ ಮತ್ತು ಹೈಬ್ರಿಡ್‌ ತಳಿಯ ಕಲ್ಲಂಗಡಿಯಲ್ಲಿ ವ್ಯತ್ಯಾಸವಿಲ್ಲದಿದ್ದರೂ ಎರಡು ಬಗೆಯ ಹಣ್ಣು ಕೆಜಿಗೆ ₹20 ದರ ಇದೆ.

ಎಳನೀರು ಒಂದು ₹50ಗೆ ತಲುಪಿದೆ. ದಿನಕ್ಕೆ 200ಕ್ಕೂ ಹೆಚ್ಚು ಮಾರಾಟವಾಗುತ್ತಿವೆ. ಗ್ರಾಹಕರು ಬೆಲೆ ಕಡಿಮೆ ಮಾಡಲು ಚೌಕಾಶಿ ಮಾಡುತ್ತಾರೆ.
ನಾಗರಾಜ ಹೊಸಮನಿ, ಎಳನೀರು ವ್ಯಾಪಾರಿ.

1 ಕೆಜಿ ಕಲ್ಲಂಗಡಿ ಹಣ್ಣು ₹20 ಇದ್ದು, ಒಂದು ಪ್ಲೇಟ್‌ ಹಣ್ಣು ₹20ಗೆ ಮಾರಾಟ ಮಾಡುತ್ತೇವೆ. ಐಸ್‌ ಖರ್ಚು ತೆಗೆದರೆ ₹5 ಉಳಿತಾಯವಾಗುತ್ತದೆ.
ಮಹಮ್ಮದ್‌ ಯೂನಿಸ್‌,ಕಲ್ಲಂಗಡಿ ವ್ಯಾಪಾರಿ.

ಮಣ್ಣಿನ ಮಡಕೆಯಲ್ಲಿ ಕೆಂಪು ಬಣ್ಣದ ಮಡಕೆ ಹೆಚ್ಚು ಮಾರಾಟವಾಗುತ್ತಿವೆ. ಸ್ಥಳೀಯವಾಗಿ ಸಿಗುವ ಕಪ್ಪು ಮಣ್ಣಿನಿಂದ ತಯಾರಿಸುವ ಮಡಕೆಗೆ ಬೇಡಿಕೆ ಕಡಿಮೆ ಇದೆ.
ಶ್ರೀದೇವಿ ಕುಂಬಾರ,ಮಡಕೆ ವ್ಯಾಪಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.