ಯಾದಗಿರಿ: ಕಳೆದ ಒಂದು ವರ್ಷದಿಂದ ಪಾದಯಾತ್ರೆ ಮೂಲಕ ಯಾದಗಿರಿ ಮತಕ್ಷೇತ್ರದ ಹಳ್ಳಿಗಳಿಂದ ಒಂದು ರೂಪಾಯಿ ನಾಣ್ಯ ಸಂಗ್ರಹಿಸಿ, ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ ಠೇವಣಿ ಭರಿಸಿ ನಾಮಪತ್ರ ಸಲ್ಲಿಕೆ ಮಾಡಿದರು.
ಮಂಗಳವಾರ ಇಲ್ಲಿನ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಯಂಕಪ್ಪ, ಒಂದು ರೂಪಾಯಿ ನಾಣ್ಯಗಳನ್ನು ಠೇವಣಿಯಾಗಿ ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದರು. ಮೂವರು ಸಿಬ್ಬಂದಿ ಸುಮಾರು 2 ಗಂಟೆ ಕಾಲ ಏಣಿಕೆ ಮಾಡಿದರು.
ಒಟ್ಟು ₹10 ಸಾವಿರ ಒಂದು ರೂಪಾಯಿ ನಾಣ್ಯಗಳು ಸಂಗ್ರಹವಾಗಿದ್ದವು. ‘ಒಂದು ರೂಪಾಯಿಯಲ್ಲಿ ಒಂದು ಮತದಾನದಿಂದ ಒಂದು ದಿನ. ‘ನನಗೆ ನಿಮ್ಮ ಮತದಾನ ಕೊಡಿ, ನಾನು ನಿಮಗೆ ಬಡತನದಿಂದ ಸ್ವಾತಂತ್ರ್ಯ ಕೊಡಿಸುವೆ’ ಎನ್ನುವ ಘೋಷಗಳೊಂದಿಗೆ ರಥಯಾತ್ರೆ ಮೂಲಕ ಗ್ರಾಮಗಳಲ್ಲಿ ಸಂಚರಿಸಿದ್ದರು.
ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಎಂ.ಎ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಯಾದ ಯಂಕಪ್ಪ 23ನೇ ವಯಸ್ಸಿನಲ್ಲಿ ಮನೆ ತೊರೆದು ಮತದಾನ ಜಾಗೃತಿಗಾಗಿ ಗ್ರಾಮಗಳ ಸಂಚಾರ ಮಾಡುತ್ತಿದ್ದಾರೆ.
'ಒಬ್ಬರಿಂದ ಒಂದು ರೂಪಾಯಿ ನಾಣ್ಯವನ್ನಷ್ಟೆ ಸಂಗ್ರಹ ಮಾಡಿದ್ದಾರೆ. ₹10 ನೋಟು ಕೊಟ್ಟರೂ ಸ್ವೀಕರಿಸಿಲ್ಲ. ಬಡತನದಲ್ಲಿ ಬೆಳೆದ ಯಂಕಪ್ಪ ಅದನ್ನು ಅಳಿಸಲು ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿಯಾದರೂ ಚುನಾವಣೆಯಲ್ಲಿ ಗೆಲ್ಲಲಿ ಎನ್ನುವುದು ನಮ್ಮ ಆಸೆಯಾಗಿದೆ’ ಎಂದು ರಾಮಸಮುದ್ರ ಗ್ರಾಮದ ನಿವಾಸಿ ತೋಟೇಂದ್ರ ರಾಮಸಮುದ್ರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.