ADVERTISEMENT

ಸೈದಾಪುರ: ಕಿಡಿಗೇಡಿಗಳ ಹಾವಳಿಗೆ ಬೇಕು ಕಡಿವಾಣ

ಬಳಿಚಕ್ರ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು: ಆವರಣದಲ್ಲಿ ಮದ್ಯದ ಬಾಟಲಿ

ಪ್ರಜಾವಾಣಿ ವಿಶೇಷ
Published 28 ಜೂನ್ 2024, 5:13 IST
Last Updated 28 ಜೂನ್ 2024, 5:13 IST
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜು
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜು   

ಬಳಿಚಕ್ರ (ಸೈದಾಪುರ): ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಇಲ್ಲಿಗೆ ಸಮೀಪದ ಬಳಿಚಕ್ರ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿತ್ಯ ಮದ್ಯದ ಬಾಟಲಿ, ಖಾಲಿ ನೀರಿನ ಬಾಟಲಿ ಹಾಗೂ ಗಾಜಿನ ಚೂರುಗಳು ಕಾಣಸಿಗುತ್ತವೆ.

ಕಿಡಿಗೇಡಿಗಳು ಕಾಲೇಜಿನ ಬಾಗಿಲು, ಕಿಟಕಿ ಗಾಜುಗಳನ್ನು ಪುಡಿಗೊಳಿಸುತ್ತಿದ್ದಾರೆ. ಶೌಚಾಲಯವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಗೋಡೆಗಳ ಮೇಲೆ ಅಸಭ್ಯ ಬರಹಗಳನ್ನು ಬರೆದು ಹೋಗುತ್ತಾರೆ. ಇದರಿಂದ ಪ್ರತಿದಿನ ಬೆಳಿಗ್ಗೆ ಆವರಣ ಸ್ವಚ್ಛಗೊಳಿಸುವುದೇ ಮೊದಲ ಕಾರ್ಯವಾಗಿದೆ ಎಂಬುದು ಉಪನ್ಯಾಸಕರ ಅಳಲು.

ADVERTISEMENT

ಕಳೆದ ಪಿಯು ಪರೀಕ್ಷೆಯಲ್ಲಿ ಈ ಕಾಲೇಜಿನ ವಿದ್ಯಾರ್ಥಿನಿ ಮಹೇಶಮ್ಮ ಕಲಾ ವಿಭಾಗದಲ್ಲಿ ಶೇ 96.67 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ಭಾಗದ ಕೀರ್ತಿ ಹೆಚ್ಚಿಸಿದ್ದಾಳೆ. ಆದರೆ ಈ ಕಾಲೇಜಿಗೆ ಸೂಕ್ತ ರಕ್ಷಣೆ ಇಲ್ಲದೆ ಇರುವುದು ವಿಪರ್ಯಾಸವಾಗಿದೆ ಎಂಬುದು ಪೋಷಕರ ಅಭಿಪ್ರಾಯವಾಗಿದೆ.

ದಾಖಲಾತಿ ಕುಸಿತ: ಕಳೆದ ವರ್ಷಕ್ಕಿಂತ ಈ ವರ್ಷ ದಾಖಲಾತಿ ಶೇ 10ರಷ್ಟು ಇಳಿಮುಖವಾಗಿದೆ. ಕಳೆದ ವರ್ಷ ಪ್ರಥಮ ವರ್ಷಕ್ಕೆ 40 ವಿದ್ಯಾರ್ಥಿಗಳು, ದ್ವಿತೀಯ ವರ್ಷಕ್ಕೆ 42 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಸ್ತುತ ವರ್ಷದಲ್ಲಿ ಪ್ರಥಮ 29, ದ್ವಿತೀಯ ಪಿಯುಸಿಗೆ 28 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಕಾರಣ ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಎನ್ನುವುದು ಶಿಕ್ಷಣ ಪ್ರೇಮಿಗಳ ಅಭಿಪ್ರಾಯ.

ಗಡಿ ಭಾಗದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತ: ಸೈದಾಪುರ ವಲಯವು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಕೇಂದ್ರ ಬಿಂದುವಾಗಿದೆ. ಆದರೆ ಗಡಿ ಭಾಗಕ್ಕೆ ಅಂಟಿಕೊಂಡಿರುವ ಬಹುತೇಕ ಗ್ರಾಮಗಳ ಹೆಣ್ಣು ಮಕ್ಕಳು ಪ್ರೌಢಶಿಕ್ಷಣ ಮುಗಿದ ನಂತರ ದೂರದ ಜಿಲ್ಲಾ ಕೇಂದ್ರಗಳಲ್ಲಿನ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪ್ರತಿಭಾವಂತ ಹೆಣ್ಣುಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಶೌಚಾಲಯದ ಬಾಗಿಲು ಮುರಿದಿರುವುದು

ಸೈದಾಪುರ ವಲಯದಲ್ಲಿ ಸರ್ಕಾರಿ ಕಾಲೇಜು ಸ್ಥಾಪಿಸುವುದು ಅಗತ್ಯ. ಈ ಕುರಿತು ಶಿಕ್ಷಣ ಇಲಾಖೆ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ನೇರವಾಗಿ ಮನವಿ ಸಲ್ಲಿಸಿ ಆದಷ್ಟು ಶೀಘ್ರದಲ್ಲಿ ಪಿಯು ಕಾಲೇಜು ಸ್ಥಾಪಿಸಲು ಪ್ರಯತ್ನಿಸುತ್ತೇನೆ

–ಶರಣಿಕ ಕುಮಾರ ದೋಕಾ ಸೈದಾಪುರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ

ಗಡಿ ಭಾಗದ ಗ್ರಾಮಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವೆ ಆಸೆ ಪಾಲಕರಿಗಿದೆ. ಆದರೆ ಸೈದಾಪುರ ಕಡೇಚೂರು ಮತ್ತು ಬಾಡಿಯಾಲ ಗ್ರಾಮದ ಸುತ್ತಮುತ್ತ ಸರ್ಕಾರಿ ಪಿಯು ಕಾಲೇಜು ಇಲ್ಲದಿರುವುದರಿಂದ ಸಾರಿಗೆ ಮತ್ತು ವಸತಿ ಸಮಸ್ಯೆಯಿಂದ ನಮ್ಮ ಮಕ್ಕಳನ್ನು ಕಾಲೇಜುಗಳಿಗೆ ಕಳಿಸಲು ಆಗುತ್ತಿಲ್ಲ.

– ಗುರುರಾಜ ಘಂಟಿ ಬಾಡಿಯಾಲ ಗ್ರಾಮಸ್ಥ

ಸೈದಾಪುರ ಕಡೇಚೂರಿನಲ್ಲಿ ಕಾಲೇಜು ಸ್ಥಾಪಿಸಿ

ಗಡಿ ಭಾಗದಲ್ಲಿರುವ ಸೈದಾಪುರ ಮತ್ತು ಕಡೇಚೂರು ಬಾಡಿಯಾಲ ಹೋಬಳಿ ಮಕ್ಕಳಿಗೆ ಸರ್ಕಾರಿ ಕಾಲೇಜುಗಳಿಲ್ಲ. ಈ ಭಾಗದಲ್ಲಿ ಕಲಾ ವಿಜ್ಞಾನ ವಾಣಿಜ್ಯ ವಿಭಾಗದ ಕಾಲೇಜುಗಳನ್ನು ಸ್ಥಾಪಿಸಬೇಕು ಎನ್ನುವುದು ಪಾಲಕರು ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳ ಬಹು ದಿನಗಳ ಬೇಡಿಕೆಯಾಗಿದೆ. ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ. ಆದ್ದರಿಂದ ಈ ಭಾಗದ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿವಹಿಸಿ ಪಿಯು ಕಾಲೇಜು ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬಳಿಚಕ್ರ ಪಿಯು ಕಾಲೇಜಿನ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು ಆ ಕುರಿತು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸೈದಾಪುರ ವಲಯದಲ್ಲಿ ಪಿಯು ಕಾಲೇಜು ಸ್ಥಾಪಿಸಲು ಸ್ಥಳೀಯ ಶಾಸಕರು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಮನವಿ ಸಲ್ಲಿಸಿದರೆ ಅದನ್ನು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಕಾಲೇಜು ಸ್ಥಾಪಿಸಲು ಪ್ರಯತ್ನಿಸುತ್ತೇನೆ

–ಚೆನ್ನಬಸಪ್ಪ ಕುಳಿಗೇರಿ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.