ಗುರುಮಠಕಲ್: ಜೀಪ್ ಪಲ್ಟಿಯಾದ ಕಾರಣ ಕೂಲಿಗೆಂದು ತೆರಳುತ್ತಿದ್ದ ಎಂ.ಎ ಪದವೀಧರೆ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾದ ಘಟನೆ ಸೋಮವಾರ ಜರುಗಿದೆ.
ನೆರೆಯ ಸೇಡಂ ತಾಲ್ಲೂಕಿನ ಇಟ್ಕಲ್ ಗ್ರಾಮದ ಬುಜ್ಜಮ್ಮ (24) ಮೃತಪಟ್ಟಿದ್ದು, ಗಂಭೀರ ಗಾಯಗೊಂಡ 5 ಜನರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ಮತ್ತು ಸಾಮಾನ್ಯ ಗಾಯಗಳಾದವರಿಗೆ ಪಟ್ಟಣದ ಸಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ: ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಕೊಂಕಲ್ ವ್ಯಾಪ್ತಿಯಲ್ಲಿ ಹತ್ತಿ ಬಿಡಿಸಲೆಂದು ಸೇಡಂ ತಾಲ್ಲೂಕಿನ ಇಟ್ಕಾಲ್ ಗ್ರಾಮದ 18 ಜನ ಜೀಪ್‌ನಲ್ಲಿ ತೆರಳಿದ್ದರು.
ಗುಂಜನೂರು ಕ್ರಾಸ್ ಹತ್ತಿರದಲ್ಲಿ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಗುರುಮಠಕಲ್ ತಾಲ್ಲೂಕಿನ ಗುಂಜನೂರು ಕ್ರಾಸ್ ಹತ್ತಿರದ ಚಿನ್ನಾಕಾರ ಗ್ರಾಮದ ಹೊರವಲಯದಲ್ಲಿ ಜೀಪ್ ಪಲ್ಟಿಯಾದ ಘಟನೆಯಲ್ಲಿ ಮೃತಪಟ್ಟ ಎಂ.ಎ. ಪದವೀಧರೆ ಬುಜ್ಜಮ್ಮರ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ಒದಗಿಸಲಿ ಎಂದು ಎಐಬಿಎಸ್‌ಪಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ವಾಸು ಒತ್ತಾಯಿಸಿದ್ದಾರೆ.
ಎಂ.ಎ. ಪದವಿ ಪೂರೈಸಿದರೂ ಸಹ ಉದ್ಯೋಗವಿಲ್ಲದೆ ಜೀವನ ನಿರ್ವಹಣೆಗೆ ಕೂಲಿ ಕೆಲಸಕ್ಕೆ ಹೊರಟಿದ್ದ ಪರಿಶಿಷ್ಟ ಜಾತಿಯ ಯುವತಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಚಿವ ಶರಣಪ್ರಕಾಶ ಪಾಟೀಲ ಮತ್ತು ಸ್ಥಳೀಯ ಶಾಸಕ ಶರಣಗೌಡ ಕಂದಕೂರು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಮೃತಳು ಬಡತನ ಮತ್ತು ನಿರುದ್ಯೋಗ ಸಮಸ್ಯೆಯಿಂದ ಉನ್ನತ ಶಿಕ್ಷಣ ಪಡೆದರೂ ಕೂಲಿ ಕೆಲಸಕ್ಕೆ ಹೊರಟಿದ್ದಳು. ಆದ್ದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಲು ಸ್ಥಳೀಯ ಮತ್ತು ಸೇಡಂ ಶಾಸಕರು ಸರ್ಕಾರದ ಮನವೊಲಿಸಲಿ ಎಂದರು.
ಈ ಭಾಗದಲ್ಲಿ ಇನ್ಸೂರೆನ್ಸ್ ಮತ್ತು ಅಗತ್ಯ ಪರವಾನಗಿ ಇಲ್ಲದ ನಿಯಮ ಬಾಹಿರವಾಗಿ ಸಂಚರಿಸುತ್ತಿರುವ ಮತ್ತು ಪರವಾನಗಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಂಡು ಹೋಗುವ ವಾಹನಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕ್ರಮವಹಿಸಲಿ ಎಂದು ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.