ADVERTISEMENT

ನ್ಯಾಯಮೂರ್ತಿ ಸದಾಶಿವ ವರದಿ ಜಾರಿಗೆ ತರಲು ಆಗ್ರಹ

ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ಪ್ರಭು ಚವಾಣ್‌, ಪಿ.ರಾಜೀವ್‌ ನಡೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 17:21 IST
Last Updated 22 ಮಾರ್ಚ್ 2021, 17:21 IST
ಲಿಂಗಪ್ಪ ಹತ್ತಿಮನಿ
ಲಿಂಗಪ್ಪ ಹತ್ತಿಮನಿ   

ಯಾದಗಿರಿ: 'ನ್ಯಾಯಮೂರ್ತಿ ಎ.ಜೆ.ಸದಾಶಿವ ಅಯೋಗದ ವರದಿಯನ್ನು ಜಾರಿ ಮಾಡದಂತೆ ಸಚಿವ ಪ್ರಭು ಚವಾಣ್‌ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಅವರು ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಹೇಳಿದರು.

‘ಸದಾಶಿವ ಅಯೋಗವು ಯಾವುದೇ ಒಂದು ಜಾತಿಗೆ ಸೀಮಿತವಾಗದೆ ನೂರ ಒಂದು ಜಾತಿ ಒಳಗೊಂಡ ಸಮದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವುದಕ್ಕಾಗಿ ರಚನೆಗೊಂಡಿರುವ ಸಮಿತಿಯಾಗಿದೆ. ಇದನ್ನು ಜಾರಿಗೆ ತರಬಾರದು ಎನ್ನುವುದು ಸಮಾಜಕ್ಕೆ ಮಾಡುವ ದ್ರೋಹವಾಗಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಸಲ್ಲಿಕೆಯಾಗಿದೆ. ಇದು ಸರಿಯಲ್ಲ. ಮಾದಿಗ ಸಮುದಾಯ ಶಿಕ್ಷಣ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹಿಂದುಳಿದಿದೆ. 64 ಲಕ್ಷ ಜನಸಂಖ್ಯೆ ರಾಜ್ಯದಲ್ಲಿದೆ. ಮುಸ್ಲಿಮರ ನಂತರ ಅತಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯವಾಗಿದೆ. ಆದರೆ, ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿವೆ. ಇದರ ನಿವಾರಣೆ ಹಾಗೂ ತಾರತಮ್ಯ ನಿವಾರಣೆಗಾಗಿ ರಚಿಸಿರುವ ಸಮಿತಿಗೆ ವಿರೋಧ ಸಲ್ಲದು. ಕೂಡಲೇ ವಿಧಾನ ಸಭೆಯಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ ಕಟೀಲ್‌ ಅವರು ಸದಾಶಿವ ವರದಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನು ಶೀಘ್ರ ಈಡೇರಿಸಬೇಕು ಎಂದರು.

ಸಮುದಾಯದ ಹಿರಿಯರಾದ ಮಲ್ಲಣ್ಣ ದಾಸನಕೇರಿ, ಖಂಡಪ್ಪ ದಾಸನ್, ದೇವಿಂದ್ರನಾಥ ಕೆ ನಾದ, ಶಾಂತರಾಜ್ ಮೊಟ್ನಳ್ಳಿ, ಎಂ.ಕೆ. ಬೀರನೂರು, ನಿಂಗಪ್ಪ ವಡ್ನಳ್ಳಿ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಚನ್ನಯ್ಯ ಮಾಳಿಕೇರಿ, ಅಂಜನೇಯ ಬಬಲಾದ, ಶಿವು ಮುದ್ನಾಳ, ಹಣಮಂತ ಲಿಂಗೇರಿ, ಭೀಮರಾಯ ಬಂದಳ್ಳಿ, ಚಂದ್ರಶೇಖರ ದಾಸನಕೇರಿ, ಭೀಮಾಶಂಕರ ಆಲ್ದಾಳ, ಶಿವರಾಜ ದಾಸನಕೇರಿ, ಸಾಬು ಹೊರುಂಚ, ರಾಜಶೇಖರ ಎದುರುಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.