ADVERTISEMENT

ಕಕ್ಕೇರಾ ಸರ್ಕಾರಿ ಪದವಿ ಪೂರ್ವ ಕಾಲೇಜು: ಶೌಚಾಲಯ, ನೀರಿನ ಸಮಸ್ಯೆಗೆ ಸಿಗದ ಮುಕ್ತಿ

ಪ್ರಾಂಶುಪಾಲರ ವಿರುದ್ಧ ಹಲವು ಆರೋಪ

ಮಹಾಂತೇಶ ಸಿ.ಹೊಗರಿ
Published 26 ಜೂನ್ 2024, 4:55 IST
Last Updated 26 ಜೂನ್ 2024, 4:55 IST
ಕಕ್ಕೇರಾ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು
ಕಕ್ಕೇರಾ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು   

ಕಕ್ಕೇರಾ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಶೌಚಾಲಯ ಹಾಗೂ ನೀರಿನ ಸಮಸ್ಯೆಯಿಂದ ಬಳಲುತ್ತಿದೆ.

‘ಕಾಲೇಜು ಸುಸಜ್ಜಿತ ಕಟ್ಟಡ ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಫಲಿತಾಂಶ ಉತ್ತಮವಾಗಿದೆ. ಎರಡು ವರ್ಷ ಪಾಲಕರ ಸಭೆ ಕರೆಯಲಾಗಿತ್ತು. ಯಾರೂ ಬಾರದ ಕಾರಣ ರದ್ದು ಮಾಡಲಾಯಿತು. ಜುಲೈ 5ರಂದು ಮತ್ತೆ ಸಭೆ ಕರೆಯಲಾಗಿದೆ’ ಎಂದು ಪ್ರಾಂಶುಪಾಲ ಭೀಮಣ್ಣ ಭೋಸಗಿ ತಿಳಿಸಿದರು.

ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಪ್ರವೇಶದ ಕುರಿತು ಸಮರ್ಪಕ ಮಾಹಿತಿ ನೀಡುವುದಿಲ್ಲ ಎಂದು ಪಾಲಕರು ದೂರುತ್ತಾರೆ.

ADVERTISEMENT
ಕಾಲೇಜು ಸುಸಜ್ಜಿತ ಕಟ್ಟಡ ಹಾಗೂ ಮೂಲ ಸೌಕರ್ಯ ಹೊಂದಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 2023ರಲ್ಲಿ ಶೇ 76ರಷ್ಟು ಫಲಿತಾಂಶ ಬಂದಿದೆ.
ಭೀಮಣ್ಣ ಭೋಸಗಿ, ಪ್ರಾಂಶುಪಾಲ

‘ಕಳೆದ ವರ್ಷ ಮಗನ ಪ್ರವೇಶಕ್ಕೆ ₹3,000 ನೀಡಲಾಗಿತ್ತು. ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಪರೀಕ್ಷೆ ಸಮಯದಲ್ಲಿ ಪ್ರವೇಶಪತ್ರ ಕೇಳಲು ಹೋದರೆ ದಾಖಲಾಗಿಲ್ಲ ಎಂದು ತಿಳಿಸಿದರು. ಪ್ರಾಂಶುಪಾಲರು ಸಮಸ್ಯೆಯಾಗಿತ್ತು ಎಂದು ನೆಪ ಹೇಳಿದರು. ಇದರಿಂದ ಮಗನಿಗೆ ಒಂದು ವರ್ಷ ಹಾಳಾಯಿತು’ ಎಂದು ಪಾಲಕ ಗೋವಿಂದ ಪತ್ತಾರ ಅಳಲು ತೋಡಿಕೊಂಡರು.

‘ಕಾಲೇಜು ಹಿಂಭಾಗ ಮುಳ್ಳು–ಕಂಟಿಗಳು ಬೆಳೆದಿವೆ. ಆಗಾಗ ವಿಷಜಂತುಗಳು ಕಾಣಿಸಿಕೊಳ್ಳುತ್ತವೆ. ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಅದನ್ನು ತೆರವು ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಉಪನ್ಯಾಸಕ ಅಶೋಕ ಕೋಳೂರು ತಿಳಿಸಿದರು.

ಭೀಮಣ್ಣ ಭೋಸಗಿ ಅವರು ಸುಮಾರು 12 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಸರಿಯಿಲ್ಲ. ಹೀಗಾಗಿ ಅವರನ್ನು ವರ್ಗಾವಣೆ ಮಾಡಬೇಕು.
ನಿಂಗಯ್ಯ ಬೂದಗುಂಪಿ, ಮುಖಂಡ

ಕಾಲೇಜಿನಲ್ಲಿ ಕಲಾವಿಭಾಗ, ವಾಣಿಜ್ಯ ವಿಭಾಗ ಮಾತ್ರ ಇದೆ. ಪ್ರಥಮ ಪಿಯುಗೆ 46, ದ್ವೀತಿಯ ಪಿಯು 89 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಪುಂಡರ ಹಾವಳಿ: ಪ್ರತಿದಿನ ಸಂಜೆ ಪುಂಡರು ಆವರಣದಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಇಲ್ಲಿಯೇ ಬಿಸಾಡಿ ಹೋಗುತ್ತಾರೆ. ಅದನ್ನು ಸ್ವಚ್ಛ ಮಾಡುವುದೇ ಒಂದು ಕೆಲಸವಾಗಿದೆ. ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದರು.

ಕ್ರೀಡೆಯಲ್ಲಿ ಸಾಧನೆ: ವಿದ್ಯಾರ್ಥಿಗಳು ಕಬಡ್ಡಿ ಹಾಗೂ ಕೊಕ್ಕೊದಲ್ಲಿ ರಾಜ್ಯ ಮಟ್ಟದಲ್ಲಿ ಆಡಿ ಸಾಧನೆ ಮಾಡಿದ್ದಾರೆ.

ಹೆಚ್ಚುವರಿ ಶುಲ್ಕ ವಸೂಲಿ ಆರೋಪ: ಕಾಲೇಜಿನ ಪ್ರಾಂಶುಪಾಲರು ಪ್ರವೇಶಕ್ಕೆ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ. ಕೇಳಿದರೆ ಕಾಲೇಜು ನಿರ್ವಹಣೆಗೆ ಎಂದು ಹೇಳುತ್ತಾರೆ ಎಂದು ಪಾಲಕರು ದೂರಿದರು.

ಶೌಚಾಲಯ ನೀರಿನ ಸಮಸ್ಯೆ ಬಗೆಹರಿಸದ ಪ್ರಾಂಶುಪಾಲ ಭೀಮಣ್ಣ ಬೋಸಗಿ ಅವರನ್ನು ವರ್ಗಾವಣೆ ಮಾಡಬೇಕು. ಖಾಯಂ ಪ್ರಾಂಶುಪಾಲರನ್ನು ನಿಯೋಜಿಸಬೇಕು.
ಪರಮಣ್ಣ ವಡಿಕೇರಿ, ಪೋಷಕ

ಶಿಥಿಲ ಕಟ್ಟಡ ತೆರವಿಗೆ ಒತ್ತಾಯ: ಕಾಲೇಜಿನ ಮುಂಭಾಗದಲ್ಲಿರುವ ಹಳೆ ಕಟ್ಟಡ ಕುಸಿಯುವ ಹಂತದಲ್ಲಿದೆ. ಅದನ್ನು ನೆಲಸಮ ಮಾಡಿ ಆಟದ ಮೈದಾನ ನಿರ್ಮಿಸಬೇಕು ಎಂದು ಅಹಿಂದ ಸಂಘಟನೆಯ ಸಂಗಣ್ಣ ಹಡಗಲ್, ಅಯುಬ್ ಆಗ್ರಹಿಸಿದರು.

‘ಪರೀಕ್ಷಾ ಕೇಂದ್ರ ಮಂಜೂರು ಮಾಡಿ’

ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದ ಸ್ಥಾನಮಾನ ನೀಡಿದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಬಳಿಚಕ್ರ ಹಣಮಂತ್ರಾಯ ಜಂಪಾ ಹಾಗೂ ಇಬ್ರಾಹಿಂ ಹವಾಲ್ದಾರ್ ತಿಂಥಣಿ ತಿಳಿಸಿದ್ದಾರೆ. ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭ ಮಾಡಬೇಕು ಎಂದೂ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.