ಕಕ್ಕೇರಾ: ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ) ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಪ್ರಯುಕ್ತ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಸೆ.4ರಂದು ಚುನಾವಣೆ ನಿಗದಿಯಾಗಿದ್ದು, ಆಕಾಂಕ್ಷಿಗಳಿಗೆ ಕೇವಲ ಒಂದು ವಾರ ಸಮಯವಿದ್ದು, ಗಣ್ಯರ, ಶಾಸಕ, ಸದಸ್ಯರ ಮನ ಗೆಲ್ಲುವ ಹಂತಕ್ಕೆ ತಲುಪಿದೆ.
ಪಟ್ಟಣದ ಪುರಸಭೆ 23 ವಾರ್ಡ್‌ಗಳನ್ನು ಹೊಂದಿದು, 17 ಕಾಂಗ್ರೆಸ್ ಸದಸ್ಯರಿದ್ದು, 6 ಜನ ಬಿಜೆಪಿ ಸದಸ್ಯರಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಅಧಿಕಾರ ಸಿಗುವುದು ಖಚಿತವಾಗಿದೆ. ಆದರೆ, ಪಕ್ಷದ ಸದಸ್ಯರಲ್ಲಿ ಪೈಪೋಟಿ ನಡೆದಿದೆ.
ಪ್ರಮುಖರಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ 4ನೇ ವಾರ್ಡ್‌ನ ಪರಮಣ್ಣ ಕಮತಗಿ, ‘ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ನನಗೆ ಸದಸ್ಯರು, ಗಣ್ಯರು, ಶಾಸಕರ ಬೆಂಬಲ ಇದೆ. ನನ್ನ ಕಾರ್ಯವೈಖರಿ ಅವರಿಗೆ ಗೊತ್ತಿದೆ. ಹೀಗಾಗಿ ಅಧ್ಯಕ್ಷ ಸ್ಥಾನ ದೊರೆಯುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
22ನೇ ವಾರ್ಡ್‌ನ ಅಯ್ಯಾಳಪ್ಪ ಪೂಜಾರಿ ಅವರು, ‘ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವೆ. ಶಾಸಕರಾಗಿದ್ದ ದಿ. ರಾಜಾ ವೆಂಕಟಪ್ಪನಾಯಕ ಕಟ್ಟಾ ಬೆಂಬಲಿಗನಾಗಿದ್ದು, ಮಾತು ಕೊಟ್ಟಿದ್ದರು. ಹೀಗಾಗಿ ಸದಸ್ಯರು, ಶಾಸಕರನ್ನು ಭೇಟಿಯಾಗಿದ್ದು, ಸರ್ವರೂ ಬೆಂಬಲಿಸಿದರೆ ಅಧ್ಯಕ್ಷನಾಗುತ್ತೇನೆ’ ಎಂದು ತಿಳಿಸಿದರು.
1ನೇ ವಾರ್ಡ್‌ನ ಶ್ರೀದೇವಿ ಕುರಿ ಮಹಿಳಾ ಅಧ್ಯಕ್ಷ ಸ್ಥಾನದ ಆಕಾಂಕ್ಷೆಯಾಗಿದ್ದು, ‘ಕಾಂಗ್ರೆಸ್ ಮುಖಂಡರಾಗಿದ್ದ ನನ್ನ ತಂದೆ ನಂದಣ್ಣ ಪೂಜಾರಿ ಎಪಿಎಂಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದ ಗಣ್ಯರು, ಸದಸ್ಯರ ಬೆಂಬಲವಿದ್ದು, ಒಂದೆರಡು ಬಾರಿ ಸದಸ್ಯರ ಸಭೆ ಮಾಡಿದ್ದು, ಶಾಸಕರ ಅನುಮತಿ ಸಿಕ್ಕರೆ ಅಧ್ಯಕ್ಷರಾಗುವುದು ಖಚಿತ’ ಎಂದು ಹೇಳಿದರು.
ಲಿಂಗಾಯತ ಸಮಾಜದ ಪರಮಣ್ಣ ಕಮತಗಿ, ಹಾಲುಮತ ಸಮಾಜದ ಅಯ್ಯಾಳಪ್ಪ ಪೂಜಾರಿ, ಮಹಿಳಾ ಅಭ್ಯರ್ಥಿ ಶ್ರೀದೇವಿ ಶಿವರಾಜ ಕುರಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. 19ನೇ ವಾರ್ಡ್‌ನ ಹಾಲುಮತ ಸಮಾಜದ ಪರಮವ್ವ ಮಲಮುತ್ತಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆ ಇದ್ದಾರೆ ಎಂದು ಕೇಳಿಬರುತ್ತಿದೆ.
ಶಾಸಕರು ಬೆಂಗಳೂರಿನಲ್ಲಿದ್ದು, ಬುಧವಾರ ಸಭೆ ನಡೆಸಿ ಸದಸ್ಯರು, ಗಣ್ಯರು ಸೇರಿ ಒಮ್ಮತದ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖಂಡರೊಬ್ಬರು ತಿಳಿಸಿದರು. 15 ತಿಂಗಳು ಅಧ್ಯಕ್ಷ ಸ್ಥಾನ ಹಂಚಿಕೆಯಾಗಲಿದೆ ಎನ್ನಲಾಗುತ್ತಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಜಟ್ಟೆಪ್ಪ ದಳಾರ, ದೇವಿಂದ್ರಪ್ಪ ದೇಸಾಯಿ, ಅಮರೇಶ ದೊರೆ, ಪರಶುರಾಮ ಗೋವಿಂದರ್ ಸೇರಿದಂತೆ ಇನ್ನಿತರರ ಹೆಸರು ಕೇಳಿಬರುತ್ತಿವೆ.
‘ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದ್ದು, ಶಾಸಕರು, ಸದಸ್ಯರ ನಿರ್ಣಯವೇ ಅಂತಿಮವಾಗಲಿದೆ’ ಎಂದು ಕೆಪಿಸಿಸಿ ಸದಸ್ಯ ಗುಂಡಪ್ಪ ಸೋಲಾಪುರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
17 ಕಾಂಗ್ರೆಸ್, 6 ಜನ ಬಿಜೆಪಿ ಸದಸ್ಯರು 15 ತಿಂಗಳು ಅಧ್ಯಕ್ಷ ಸ್ಥಾನ ಹಂಚಿಕೆ ಸಂಭವ ಹಲವು ಸದಸ್ಯರ ಸಭೆ ನಡೆಸಿದ ಆಕಾಂಕ್ಷಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.