ADVERTISEMENT

ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 15:57 IST
Last Updated 15 ಅಕ್ಟೋಬರ್ 2024, 15:57 IST
ಸುರಪುರದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಶಾಸಕ ರಾಜಾ ವೇಣುಗೋಪಾಲನಾಯಕ ಚಾಲನೆ ನೀಡಿದರು
ಸುರಪುರದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಶಾಸಕ ರಾಜಾ ವೇಣುಗೋಪಾಲನಾಯಕ ಚಾಲನೆ ನೀಡಿದರು   

ಸುರಪುರ: ಮಂಡ್ಯ ಜಿಲ್ಲೆಯಲ್ಲಿ ಡಿ. 20 ರಿಂದ 22ರ ವರೆಗೆ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡದ ಜ್ಯೋತಿ ಹೊತ್ತು ಬಂದಿದ್ದ ಕನ್ನಡ ರಥ ಯಾತ್ರೆಗೆ ಮಂಗಳವಾರ ನಗರದಲ್ಲಿ ತಾಲ್ಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ ಮತ್ತು ನೂರಾರು ಕನ್ನಡಾಭಿಮಾನಿಗಳಿಂದ ಸ್ವಾಗತಿಸಲಾಯಿತು.

ರಥಯಾತ್ರೆ ಸೋಮವಾರ ರಾತ್ರಿ 9 ಗಂಟೆಗೆ ನಗರದ ರಾಜಾ ನಾಲ್ವಡಿವೆಂಕಟಪ್ಪ ನಾಯಕ ವೃತದ ಮೂಲಕ ನಗರ ಪ್ರವೇಶ ಮಾಡಿತ್ತು. ತಾಲ್ಲೂಕು ಆಡಳಿತದಿಂದ ರಾತ್ರಿಯೇ ಬರಮಾಡಿಕೊಂಡು ನಗರದ ಪ್ರಭು ಕಾಲೇಜಿನಲ್ಲಿ ವಾಸ್ತವ್ಯ ಹೂಡಲಾಗಿತ್ತು.

ಬೆಳಿಗ್ಗೆ 9 ಗಂಟೆಗೆ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ, ತಹಶೀಲ್ದಾರ್ ಎಚ್.ಎ. ಸರಕಾವಸ, ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ಯಾಳವಾರ ಅವರು ಪೂಜೆ ಸಲ್ಲಿಸಿ ಕನ್ನಡ ಮಾತೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ರಥಯಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ವೇಣುಗೋಪಾಲಸ್ವಾಮಿ ದೇವಸ್ಥಾನ ವಲ್ಲಭಭಾಯಿ ಪಟೇಲ, ಅರಮನೆ ಮಾರ್ಗ, ಗಾಂಧಿವೃತ್ತ, ಬಸ್ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಸಾಗಿ ಬಂದಿತು. ಅಲ್ಲಿಂದ ಸಿದ್ದಾಪುರ ಮಾರ್ಗವಾಗಿ ಕೆಂಭಾವಿಗೆ ಬೀಳ್ಕೊಡಲಾಯಿತು.

ಕರವೇ ಅಧ್ಯಕ್ಷ ವೆಂಕಟೇಶನಾಯಕ ಬೈರಿಮಡ್ಡಿ ಹಾಗೂ ಕಾರ್ಯಕರ್ತರು, ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಧ್ವಜ ಹಿಡಿದು ಕನ್ನಡ ಮಾತೆಗೆ ಜಯವಾಗಲಿ ಎಂಬ ಘೋಷ ವಾಕ್ಯ ಮೊಳಗಿಸಿದರು.

ಮುಖಂಡರಾದ ಬಸವರಾಜ ಜಮದ್ರಖಾನಿ, ಪ್ರಕಾಶ ಗುತ್ತೇದಾರ, ಪ್ರಕಾಶ ಅಂಗಡಿ ಕನ್ನೆಳ್ಳಿ, ಸೂಗೂರೇಶ ವಾರದ, ವೆಂಕಟೇಶ ಹೊಸ್ಮನಿ, ಭಂಡಾರೆಪ್ಪ ನಾಟೇಕರ್, ಶ್ರೀನಿವಾಸ ಜಾಲವಾದಿ, ಎಚ್.ವೈ. ರಾಠೋಡ್, ದೇವು ಹೆಬ್ಬಾಳ, ರಾಜಶೇಖರ ದೇಸಾಯಿ, ರಾಘವೇಂದ್ರ ಭಕ್ರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.