ADVERTISEMENT

ರಂಗಭೂಮಿ ಕಲಾವಿದೆ ಸರಸ್ವತಿ ಜುಲೈಕ ಬೇಗಂ ದೊರೆತ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 7:05 IST
Last Updated 31 ಅಕ್ಟೋಬರ್ 2024, 7:05 IST
ಜುಲೈಕ ಬೇಗಂ
ಜುಲೈಕ ಬೇಗಂ   

ಕೆಂಭಾವಿ: ಪಟ್ಟಣದ ಸಮೀಪ ಮಲ್ಲಾ ಗ್ರಾಮಕ್ಕೆ ದೀಪಾವಳಿಯ ಶುಭ ಸಂದರ್ಭದಲ್ಲಿ ಡಬಲ್ ಧಮಾಕಾ ದೊರಕಿದೆ. ರಂಗಭೂಮಿ ಕಲಾವಿದೆ ಸರಸ್ವತಿ ಜುಲೈಕ ಬೇಗಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸೂಲಗತ್ತಿ ಚನ್ನಬಸಮ್ಮ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ದೊರಕಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸರಸ್ವತಿ ಜುಲೈಕ ಬೇಗಂ:

ಸರಸ್ವತಿ ಜುಲೈಕ ಬೇಗಂ ಅವರು ಕನ್ನಡ ವೃತ್ತಿ ರಂಗಭೂಮಿ ಕಂಡ ಅಪರೂಪದ ಅಪ್ಪಟ ದೇಸಿ ಪ್ರತಿಭೆ. ವೃತ್ತಿ ರಂಗಭೂಮಿಯ ಜೊತೆಗೆ ಹವ್ಯಾಸಿ ರಂಗಭೂಮಿ, ಆಧುನಿಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು. ತಮ್ಮ 75ನೇ ವಯಸ್ಸಿನಲ್ಲಿಯೂ ಪರಿಣಾಮಕಾರಿಯಾದ ಅಭಿನಯ, ಸಂಭಾಷಣ ಚತುರತೆಯನ್ನು ಉಳಿಸಿಕೊಂಡಿರುವ ಬೇಗಂ ಅವರು, ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮದ ಶಿವಬಸಮ್ಮ ಹಾಗೂ ವೀರಪ್ಪ ದಂಪತಿಗಳ ಮಗಳಾಗಿ ಲಿಂಗಾಯತ ಕುಟುಂಬದಲ್ಲಿ, 1944 ಏಪ್ರಿಲ್ 7 ರಂದು ಜನಿಸಿದರು. ಮನೆ ದೇವರಾದ ಮಲ್ಲಿಕಾರ್ಜುನನ ಮೇಲಿನ ಭಕ್ತಿಯಿಂದಾಗಿ ತಂದೆ-ತಾಯಿ ಇವರಿಗಿಟ್ಟ ಹೆಸರು 'ಮಲ್ಲಮ್ಮ', ಕೇವಲ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ಇವರು, ಔಪಚಾರಿಕ ಶೈಕ್ಷಣಿಕ ಕಲಿಕೆಯನ್ನು ಬಿಟ್ಟು, ಬಾಲ್ಯದಲ್ಲಿಯೇ ರಂಗಭೂಮಿ ಪ್ರವೇಶಿಸಿದರು.

ADVERTISEMENT

ತಮ್ಮ ಆರನೇ ವಯಸ್ಸಿನಿಂದಲೇ ಅಭಿನಯದ ಆಸಕ್ತಿ ಹಾಗೂ ಅಭಿರುಚಿಯನ್ನು ಮೈಗೂಡಿಸಿಕೊಂಡವರು. ಮನೆಯವರು ನಿರ್ಬಂಧ ವಿಧಿಸಿದರೂ ಒಮ್ಮೆ ತಂದೆ- ತಾಯಿಗೆ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿ 'ಪಟ್ಟದಕಲ್ಲು ನಾಟಕ ಕಂಪನಿ'ಯನ್ನು ಸೇರಿದರು. ತಾನೊಬ್ಬಳು ಅನಾಥೆ ಎಂದು ಆಶ್ರಯ ಬೇಡಿ ಬಂದ ಮಲ್ಲಮ್ಮಳಿಗೆ ಆಸರೆಯಾಗಿ ತನ್ನ ಸ್ವಂತ ಮಗಳಂತೆಯೆ ಬೆಳೆಸಿ, ಅಭಿನಯದ ಪಾಠ ಹೇಳಿಕೊಟ್ಟು ರಂಗಭೂಮಿಗೆ ಪರಿಚಯಿಸಿ 'ಸರಸ್ವತಿ' ಎಂದು ಹೆಸರಿಟ್ಟವರು ಪಟ್ಟದಕಲ್ಲು ನಾಟಕ ಕಂಪನಿಯ ಮಾಲೀಕರಾದ ಗದಗಿನ ಬಸಯ್ಯನವರು. ಹೀಗೆ ಮಲ್ಲಮ್ಮ ಸರಸ್ವತಿಯಾಗಿ ರಂಗಭೂಮಿಯನ್ನು ಪ್ರವೇಶಿಸಿದರು.

ರಂಗಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಇವರಿಗೆ ಪರಿಚಯವಾದವರು ಕೆಂಭಾವಿ ಸಮೀಪ ಮಲ್ಲಾ ಗ್ರಾಮದ ರಂಗಭೂಮಿ ಕಲಾವಿದರಾದ ಶೇಖ್ ಚಾಂದ್ ಅವರು. ಈ ಇಬ್ಬರು ರಂಗಭೂಮಿ ಕಲಾವಿದರ ನಡುವಿನ ಪರಿಚಯ ಪ್ರೇಮವಾಗಿ ನಂತರದಲ್ಲಿ ವಿವಾಹವಾಗಿ ರೂಪಾಂತರಗೊಂಡಿತು.

ಕಲೆಗೆ ಯಾವುದೇ ರೀತಿಯ ಜಾತಿ, ಮತ, ಧರ್ಮಗಳೆಂಬ ಸೀಮಿತ ಕಟ್ಟುಪಾಡುಗಳಿಲ್ಲ ಎಂಬುದನ್ನು ಲಿಂಗಾಯತ ಸಮುದಾಯದ ಮಲ್ಲಮ್ಮ ಈಗಿನ ಸರಸ್ವತಿ, ಮುಸ್ಲಿಂ ಸಮುದಾಯದ ಶೇಖ್ ಚಾಂದ್ ಪರಸ್ಪರ ಪ್ರೀತಿಸಿ ಮದುವೆಯಾಗುವುದರ ಮೂಲಕ ಸಾಬೀತುಪಡಿಸಿದರು. ಶೇಖ್ ಚಾಂದ್ ಅವರನ್ನು ಮದುವೆಯಾದ ತರುವಾಯದಲ್ಲಿ ಸರಸ್ವತಿಯವರು 'ಜುಲೇಖಾ ಬೇಗಂ' ಎಂಬುದಾಗಿ ಮರುನಾಮಕರಣ ಮಾಡಿಕೊಂಡಿದ್ದಾರೆ.

ಮಲ್ಲಮ್ಮ ಸರಸ್ವತಿಯಾಗಿ, ಸರಸ್ವತಿ ಜುಲೇಖಾ ಬೇಗಂ ಆಗುವ ಮೂಲಕ ಜಾತಿ, ಧರ್ಮಗಳ ಸಂಕುಚಿತ ಕಟ್ಟುಪಾಡುಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ಬೇಗಂ ಅವರದು.

ಸುಮಾರು 65 ವರ್ಷಗಳಿಗೂ ಹೆಚ್ಚಿನ ಕಲಾಸೇವೆ, ವೃತ್ತಿರಂಗಭೂಮಿ ನಾಟಕಗಳಲ್ಲದೇ ಗ್ರಾಮೀಣ ಪೌರಾಣಿಕ ನಾಟಕಗಳು ಹವ್ಯಾಸಿ ರಂಗ ತಂಡಗಳ ನಾಟಕ, ಆಧುನಿಕ ರಂಗಭೂಮಿ ಸೇರಿ 300 ಕ್ಕೂ ಹೆಚ್ಚು ನಾಟಕಗಳು ಮತ್ತು ಕರ್ನಾಟಕದಾದ್ಯಂತ 10,000 ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿರುವ ಹಿರಿಯ ಕಲಾವಿದೆ ಜುಲೈಕ ಬೇಗಂ ಅವರದ್ದು.

ಉತ್ತರ ಕರ್ನಾಟಕದ ಖ್ಯಾತ ರಂಗ ನಟಿಯಾಗಿದ್ದ ಜುಲೈಕ ಬೇಗಂ ಅವರಿಗೆ ಒಬ್ಬ ಪುತ್ರನಿದ್ದು, ಮೈಸೂರಿನಲ್ಲಿ ಅನಿಮೇಷನ್‌ನಲ್ಲಿ ತೊಡಗಿಕೊಂಡಿದ್ದಾರೆ.

ಈ ಹಿರಿಯ ಚೇತನ ಯಾರ ಗಮನಕ್ಕೂ ಬಾರದ ವನಸುಮದಂತೆ ಸದ್ದಿಲ್ಲದೇ ಬದುಕುತ್ತಿದ್ದವರಿಗೆ ಇಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ.
ಅಬ್ದುಲ್ ಕರೀಂ ಸರಸ್ವತಿ ಜುಲೈಕ ಬೇಗಂ ಅವರ ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.