ಯಾದಗಿರಿ: ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎಂಬ ಹಕ್ಕೋತ್ತಾಯ ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ನಿರ್ಣಾಯಕ ಚಳವಳಿ ಕೈಗೊಂಡಿದ್ದು, ಅದರಂತೆ ಮಂಗಳವಾರ ನಗರ ವಿವಿಧೆಡೆ ಸರ್ಕಾರ ನಿಯಮ ಉಲ್ಲಂಘಿಸಿ ಶೇ 60ರಷ್ಟು ಕನ್ನಡ ಬಳಕೆ ಮಾಡದ ಫಲಕಗಳಿಗೆ ಮಸಿ ಬಳಿದು ಫಲಕಗಳನ್ನು ಹರಿದು ಹಾಕಿದರು.
ಉದ್ಯಮಿಗಳು, ವ್ಯಾಪಾರಸ್ಥರು ಸರ್ಕಾರದ ನಿಯಮಾವಳಿ ಪ್ರಕಾರ ನಾಮಫಲಕಗಳನ್ನು ಬದಲಿಸಬೇಕು. ಕನ್ನಡೀಕರಿಸಬೇಕು. ನಾಮಫಲಕಗಳು ಕನ್ನಡೀಕರಣಗೊಳ್ಳದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ರೂಪಿಸಲಿದೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ್ಲಲಿ ಶೇ 60ರಷ್ಟು ಕಡ್ಡಾಯ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ನಗರದ ಮೈಲಾಪುರ ಅಗಸಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ರ‍್ಯಾಲಿ ಮಾಡಲಾಯಿತು. ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ವಿವಿಧ ಆಂಗ್ಲ ಫಲಕಗಳನ್ನು ಹರಿದು ಹಾಕಿದರು. ಈ ವೇಳೆ ಅಂಗಡಿ ಮಾಲಿಕರು ವಾಗ್ವಾದ ನಡೆಸಿದರು. ಇದೇ ವೇಳೆ ಕಾರ್ಯಕರ್ತರು, ಅಂಗಡಿ ಮಾಲಕರಿಗೆ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಪೊಲೀಸರು ಸಮಾಧಾನ ಪಡಿಸಿದರು.
ನಗರ ಪೊಲೀಸ್ ಠಾಣೆಯಲ್ಲಿ 17ಕ್ಕೂ ಹೆಚ್ಚು ಕರವೇ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಸಂಧರ್ಭದಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಕಾರ್ಯಕರ್ತರಾದ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ಚೌಡಯ್ಯ ಬಾವೂರ, ಅಂಬ್ರೇಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ವಿಶ್ವರಾಜ ಹೊನಗೇರಾ, ಅಬ್ದುಲ್ ಚಿಗಾನೂರ, ವೆಂಕಟೇಶ ಬೈರಿಮಡ್ಡಿ, ಶಿವಲಿಂಗ ಸಾಹುಕಾರ, ಶರಣಬಸಪ್ಪ ಎಲ್ಹೇರಿ, ಅಬ್ದುಲ್ ಹಾದಿಮನಿ, ಅರ್ಜುನ ಪವಾರ, ಸಿದ್ದಪ್ಪ ಕೂಯಿಲೂರ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಯಮನಯ್ಯ ಗುತ್ತೇದಾರ, ವೆಂಕಟೇಶ ಮಿಲ್ಟ್ರಿ, ಸಲೀಂ ಪಾಶಾ ಯರಗೋಳ, ಪಪ್ಪುಗೌಡ ಚಿನ್ನಾಕರ, ಶರಣು ಸಾಹುಕಾರ ವಡ್ನಳ್ಳಿ, ಸುರೇಶ ಬೆಳಗುಂದಿ, ರಮೇಶ ಡಿ.ನಾಯಕ, ಬಸವರಾಜ ಕಡ್ಡಿ, ಸಾಬು ಕಡ್ಲೂರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.