ADVERTISEMENT

ಸುರಪುರ: 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 15:16 IST
Last Updated 3 ಆಗಸ್ಟ್ 2024, 15:16 IST
ಸುರಪುರದ ಗರುಡಾದ್ರಿ ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ನಿಂಗಣ್ಣ ಒಂಟೂರು ಮಾತನಾಡಿದರು
ಸುರಪುರದ ಗರುಡಾದ್ರಿ ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ನಿಂಗಣ್ಣ ಒಂಟೂರು ಮಾತನಾಡಿದರು   

ಸುರಪುರ: ‘ಶೂರರ ನಾಡು, ರಾಜರು ಆಳಿದ ಪೂಣ್ಯಭೂಮಿ ಸುರಪುರದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಗೌರವ ಸಿಗದಿರುವುದು ವಿಷಾದನೀಯ’ ಎಂದು ವಾಗ್ಮಿ ಕಿರಣ್‍ರಾಮ್ ಬೇಸರ ವ್ಯಕ್ತ ಪಡಿಸಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶನಿವಾರ ನರೇಶಕುಮಾರ ಸೇವಾ ಸಂಸ್ಥೆ ಏರ್ಪಡಿಸಿದ್ದ 25ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ಯೋಧರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಅಥವಾ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದರೆ ಎಷ್ಟೊಂದು ಪ್ರಮಾಣದಲ್ಲಿ ಜನ ಸೇರುತ್ತಿತ್ತು. ಆದರೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡುವ ಯೋಧರ ಸನ್ಮಾನ ಕಾರ್ಯಕ್ರಮಕ್ಕೆ ಕೇವಲ ಬೆರಳೆಣಿಕೆಯಷ್ಟು ಜನ ಸೇರಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.

ADVERTISEMENT

‘ಕಾರ್ಗಿಲ್ ಯುದ್ಧ ನೆನಪಿಸಿಕೊಂಡರೆ ಮೈ ಜುಂ ಎನ್ನುತ್ತದೆ. ಇತಿಹಾಸದಲ್ಲಿ ಮರೆಯಲಾಗದ ಅಭೂತಪೂರ್ವ ಜಯ. ಆ ಯುದ್ದದಲ್ಲಿ ಅನೇಕ ಯೋಧರು ಹುತಾತ್ಮರಾದರು. ನೋಡ ನೋಡುತ್ತಿದ್ದಂತೆ ಎದುರಾಳಿಗಳ ಗುಂಡಿಗೆ ಎದೆಗೊಟ್ಟು ಅನೇಕರು ಪ್ರಾಣ ಬಿಟ್ಟರು. ಅವರ ಹುತಾತ್ಮದ ಫಲವೇ ಜಯ ದೊರಕಲು ಸಾಧ್ಯವಾಯಿತು’ ಎಂದು ಕಾರ್ಗಿಲ್ ಯುದ್ದದ ಘಟನೆಗಳನ್ನು ವಿವರಿಸಿದರು.

ಮಾಜಿ ಯೋಧರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ನಿಂಗನಗೌಡ ಪೊಲೀಸ್‍ಪಾಟೀಲ ಮಾತನಾಡಿ, ‘ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಯೋಧರ ತರಬೇತಿ ಅಕಾಡೆಮಿ ಸ್ಥಾಪಿಸುವ ಉದ್ದೇಶ ಹೊಂದಿದ್ದು ಇದಕ್ಕೆ ಸೂಕ್ತ ನಿವೇಶನದ ಹುಡುಕಾಟದಲಿದ್ದೇವೆ’ ಎಂದು ಹೇಳಿದರು.

ನಿವೃತ್ತ ಯೋಧ ನಿಂಗಣ್ಣ ಒಂಟೂರ ಮಾತನಾಡಿ, ‘ಮೈಮೇಲೆ ಸೈನಿಕ ಸಮವಸ್ತ್ರ ಧರಿಸಿದ ನಂತರ ಕಣ್ಣಿಗೆ ಕಾಣುವ ಮೊಟ್ಟಮೊದಲು ವಸ್ತು ದೇಶ. ಎಲ್ಲರೂ ಯೋಧರಾಗಲು ಸಾಧ್ಯವಿಲ್ಲ. ಆ ಹುದ್ದೆ ಸಿಗಬೇಕಾದರೆ ಪೂರ್ವ ಜನ್ಮದ ಪುಣ್ಯ ಬೇಕು’ ಎಂದರು.

ರಿಕ್ರಿಯೆಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದನಾಯಕ ಮಾತನಾಡಿದರು. ಯೋಧರಾದ ಹಣಮಂತ ನಂಬಾ, ಭೀಮಣ್ಣ ಲಕ್ಷ್ಮೀಪುರ ಅನುಭವ ಹಂಚಿಕೊಂಡರು. ಯೋಧರು, ಮಾಜಿ ಯೋಧರನ್ನು ಸನ್ಮಾನಿಸಲಾಯಿತು.

ನರೇಶಕುಮಾರ ಸೇವಾ ಸಂಸ್ಥೆಯ ಅಧ್ಯಕ್ಷ ನಾಗರಾಜನಾಯಕ ಅಧ್ಯಕ್ಷತೆ ವಹಿಸಿದ್ದರು. ವಿನೋದ ಸ್ವಾಗತಿಸಿದರು. ಚಂದ್ರು ನಿರೂಪಿಸಿದರು. ಸಚಿನಕುಮಾರ ನಾಯಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.