ADVERTISEMENT

ಅಭ್ಯರ್ಥಿಯು ಗರಿಷ್ಠ ₹40 ಲಕ್ಷ ಖರ್ಚಿಗೆ ಅವಕಾಶ: ಗೌತಮ್ ಪಾತ್ರ

ಚುನಾವಣಾ ಖರ್ಚು ವೆಚ್ಚ ವೀಕ್ಷಕ ಗೌತಮ್ ಪಾತ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2023, 4:54 IST
Last Updated 26 ಏಪ್ರಿಲ್ 2023, 4:54 IST
ಗುರುಮಠಕಲ್ ಪಟ್ಟಣದ ಚುನಾವಣಾಧಿಕಾರಿ ಕಚೇರಿಯಲ್ಲಿ ಚುನಾವಣಾ ಲೆಕ್ಕಪತ್ರ ವೀಕ್ಷಕರಾದ ಗೌತಮ್ ಪಾತ್ರ ಅವರು ಮಂಗಳವಾರ ಅಭ್ಯರ್ಥಿಗಳು, ಏಜೆಂಟರು ಅಥವಾ ಪಕ್ಷಗಳ ಬೆಂಬಲಿಗರೊಂದಿಗೆ ಸಭೆ ನಡೆಸಿದರು
ಗುರುಮಠಕಲ್ ಪಟ್ಟಣದ ಚುನಾವಣಾಧಿಕಾರಿ ಕಚೇರಿಯಲ್ಲಿ ಚುನಾವಣಾ ಲೆಕ್ಕಪತ್ರ ವೀಕ್ಷಕರಾದ ಗೌತಮ್ ಪಾತ್ರ ಅವರು ಮಂಗಳವಾರ ಅಭ್ಯರ್ಥಿಗಳು, ಏಜೆಂಟರು ಅಥವಾ ಪಕ್ಷಗಳ ಬೆಂಬಲಿಗರೊಂದಿಗೆ ಸಭೆ ನಡೆಸಿದರು   

ಗುರುಮಠಕಲ್: ‘ಪ್ರತಿ ಅಭ್ಯರ್ಥಿಯು ಗರಿಷ್ಠ ₹40 ಲಕ್ಷ ಖರ್ಚು ಮಾಡುವ ಅವಕಾಶವಿದ್ದು, ನಿಗದಿತ ನಮೂನೆಯಲ್ಲಿ ನಿಮ್ಮ ಖರ್ಚು ವೆಚ್ಚದ ಲೆಕ್ಕವನ್ನು ನೀಡಬೇಕು. ಪ್ರತಿಯೊಂದೂ ಖರ್ಚಿನ ವಿಷಯದಲ್ಲಿ ಅಭ್ಯರ್ಥಿಗಳ ಖರ್ಚಿನ ಮೇಲೆ ಚುನಾವಣಾ ಆಯೋಗದ ತಂಡಗಳು ಸದಾ ಕಣ್ಣಿಟ್ಟಿರುತ್ತವೆ. ನಮ್ಮ ಖರ್ಚು ವೆಚ್ಚ ತಂಡದ ಖರ್ಚಿನ ಪಟ್ಟಿ ಮತ್ತು ನೀವು ನೀಡಿದ ಖರ್ಚಿನ ಪಟ್ಟಿಗಳು ಸರಿದೂಗಬೇಕು ಎಂದು ಚುನಾವಣಾ ಖರ್ಚು ವೆಚ್ಚ ವೀಕ್ಷಕ ಗೌತಮ್ ಪಾತ್ರ ಸಲಹೆ ನೀಡಿದರು.

ಪಟ್ಟಣದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಗುರುಮಠಕಲ್ ಮತಕ್ಷೇತ್ರದ ಅಭ್ಯರ್ಥಿಗಳು ಮತ್ತು ಸೂಚಕರೊಂದಿಗೆ ಸಭೆ ನಡೆಸಿದ ಅವರು ಮಾತನಾಡಿದರು.

‘ನಮ್ಮ ಲೆಕ್ಕ ಪತ್ರ ವಿಭಾಗದಲ್ಲಿ ನಿಮಗೆ ನಮೂನೆಗಳನ್ನು ನೀಡುತ್ತಿದ್ದು ಅದರಂತೆ ನೀವು ಪ್ರತಿ ದಿನದ ಖರ್ಚನ್ನು ದಾಖಲಿಸಬೇಕು. ವಾಹನಗಳು, ಖುರ್ಚಿ, ಶಾಮಿಯಾನ, ಮೈಕ್, ಚಹಾ, ತಿಂಡಿ ಸೇರಿದಂತೆ ಎಲ್ಲಾ ವಸ್ತುಗಳ ಬಾಡಿಗೆ, ಮೌಲ್ಯ ಎಲ್ಲವನ್ನೂ ಚುನಾವಣಾ ಆಯೋಗ ಪಟ್ಟಿ ಮಾಡಿದ್ದು ಅದರಂತೆ ನಿಮ್ಮ ಲೆಕ್ಕಪತ್ರವನ್ನು ಮಾಡಬೇಕು ಎಂದು ತಿಳಿಸಿದರು.

ADVERTISEMENT

ನಮ್ಮ ಖರ್ಚು ವೆಚ್ಚ ತಂಡದಿಂದಲೂ ನಿಮ್ಮ ಖರ್ಚಿನ ಪಟ್ಟಿ ತಯಾರಿಸಲಾಗುತ್ತದೆ. ನೀವು ನೀಡಿದ ಖರ್ಚಿನ ವಿವರವನ್ನೂ ಅದರೊಂದಿಗೆ ಅಳೆದಾಗ ವ್ಯತ್ಯಾಸವುಂಟಾದರೆ ನೀವು ಮೇಲ್ಮನವಿ ಸಲ್ಲಿಸಬಹುದು. ನಮ್ಮ ತಂಡವೂ ಸಹ ನಿಮ್ಮ ಖರ್ಚಿನ ಕುರಿತು ತಯಾರಿಸಿದ ಪಟ್ಟಿಗೆ ಪೂರಕ ಸಾಕ್ಷಗಳನ್ನು ನೀಡಲಿದ್ದು, ಅದರಂತೆ ಮುಂದಿನ ಕ್ರಮ ಜರುಗಲಿದೆ ಎಂದರು.

ನಿಮಗೆ ಬರುವ ಹಣ, ಅಭ್ಯರ್ಥಿಯ ಹಣ, ಪಕ್ಷದಿಂದ ನೀಡಿದ ಹಣ ಎಲ್ಲವೂ ಬ್ಯಾಂಕ್ ಖಾತೆಯಲ್ಲೇ ಜಮಾಯಿಸಬೇಕು. ಪ್ರತಿ ಖರ್ಚಿಗೂ ಪೂರಕ ರಸೀದಿ ಕಡ್ಡಾಯ, ₹10 ಸಾವಿರಕ್ಕಿಂತಲೂ ಹೆಚ್ಚಿನ ಹಣ ಸಂದಾಯ ಮಾಡುವುದಿದ್ದರೆ ಚೆಕ್ ಮೂಲಕವೇ ನೀಡಬೇಕು. ಪ್ರತಿ ದಿನದ ಖರ್ಚನ್ನು ದಾಖಲಿಸಲು ಮತ್ತು ಲೆಕ್ಕ ಪತ್ರಕ್ಕೆಂದು ನಮೂನೆ ಎ, ಬಿ, ಸಿ ಗಳನ್ನು ನಿಮಗೆ ನೀಡಲಾಗುತ್ತಿದೆ. ಏ. 29, ಮೇ.4 ಮತ್ತು ಮೇ.8 ರಂದು ನೀವು ಯಾದಗಿರಿಯಲ್ಲಿನ ಚುನಾವಣಾ ಖರ್ಚುವೆಚ್ಚ ವೀಕ್ಷಕರ ಕಚೇರಿಗೆ ನೀಡಿ ಅಧಿಕಾರಿಗಳಿಂದ ಸಹಿ ಪಡೆಯಿರಿ ಎಂದು ಸೂಚಿಸಿದರು.

ನಿಮ್ಮ ಪ್ರಚಾರ ಸಾಮಾಗ್ರಿಗಳ ಕುರಿತು ಪೂರ್ವಾನುಮತಿ ಪಡೆದಿದ್ದರೆ ಮಾತ್ರ ಪರವಾನಿಗೆ ಪಡೆದ ವಾಹನಗಳಲ್ಲಿ ಸಾಗಿಸಲು ಅವಕಾಶವಿದೆ, ಇತರೆ ವಾಹನಗಳಲ್ಲಿ ಸಾಗಾಟ ಮಾಡುವಂತಿಲ್ಲ. ಕಾನೂನು ಬಾಹಿರ ಯಾವುದೇ ಖರ್ಚನ್ನು ಮಾಡಿದರೆ ಕೂಡಲೆ ಅವರ ಮೇಲೆ ಎಫ್ಐಆರ್ ದಾಖಲಾಗುತ್ತದೆ ಎಂದರು.

ಚುನಾವಣಾಧಿಕಾರಿ ಸಂತೋಷ ಪಾಟೀಲ, ತಹಶೀಲ್ದಾರ್ ಮೊಹಮ್ಮದ ಮೋಸಿನ್‌ ಅಹ್ಮದ, ಚುನಾವಣಾ ಖರ್ಚು ವೆಚ್ಚ ಮಾರ್ಗದರ್ಶಕಿ ಕಾಜೋಲ ಪಾಟೀಲ, ಖರ್ಚುವೆಚ್ಚ ತಂಡದ ಅಧಿಕಾರಿ ರವಿ ಡೊಳ್ಳೆ, ಉಪನ್ಯಾಸಕ ಸುದರ್ಶನರೆಡ್ಡಿ ಸೇರಿದಂತೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಅಭ್ಯರ್ಥಿಗಳ ಪರ ಸೂಚಕರು, ಪ್ರಜಾಕೀಯ ಹಾಗೂ ಕೆಆರ್‌ಎಸ್ ಅಭ್ಯರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.