ADVERTISEMENT

Karnataka Election 2023 | ಯರಗೋಳಕ್ಕೆ ಆಗಮಿಸಿದ ಪಂಚರತ್ನ ಯೋಜನೆ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 14:28 IST
Last Updated 23 ಮಾರ್ಚ್ 2023, 14:28 IST
   

ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮಕ್ಕೆ ಗುರುವಾರ ಸಂಜೆ ಜೆಡಿಎಸ್ ನ ಪಂಚರತ್ನ ಯಾತ್ರೆ ಆಗಮಿಸಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿಯವರನ್ನು ವೇದಿಕೆಯವರೆಗೂ 1008 ಪೂರ್ಣ ಕುಂಭಕಳಸಗಳೊಂದಿಗೆ ಮೆರವಣಿಗೆಯ ಮೂಲಕ ಕರೆತರಲಾಯಿತು.

ಪೆನ್ಸಿಲ್, ಶಾಪ್ನರ್, ಸ್ಕೇಲ್, ರಬ್ಬರ್ ನಿಂದ ತಯಾರಿಸಿದ ಹಾರವನ್ನು ಕುಮಾರಸ್ವಾಮಿ ಅವರಿಗೆ ಕ್ರೇನ್ ಮೂಲಕ ಹಾಕಿ ಸ್ವಾಗತಿಸಲಾಯಿತು.‌

ಸಣ್ಣ ಎತ್ತಿನ ಬಂಡೆಯಿಂದ ಮತ್ತೊಂದು ಹಾರ ಮೂಲಕವೂ ಸ್ವಾಗತ ಕೊರಲಾಯಿತು.‌

ADVERTISEMENT

ಯರಗೋಳ ಗ್ರಾಮದ ಹೊರ ವಲಯದಲ್ಲಿನ ಸುಮಾರು 40 ಎಕರೆ ವಿಶಾಲ ಜಮೀನಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ನಾರಾಯಣಪೇಟದ ಶಾಸಕ ಎಸ್.ಆರ್.ರಡ್ಡಿ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ, ಪಕ್ಷದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ಇತರರಿದ್ದರು.

ಪ್ರಧಾನ ವೇದಿಕೆಗೆ ದಿ.ಸದಾಶಿವರಡ್ಡಿ ಕಂದಕೂರ ಹೆಸರು ಇಡಲಾಗಿದೆ. ಇಡೀ ಸಮಾವೇಶದ ಪ್ರಾಂಗಣದಲ್ಲಿ ಸಿಸಿ ಟಿವಿ ಕಣ್ಗಾವಲು ಹಾಕಲಾಗಿತ್ತು.

ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ಜನತಾ ಜನಾರ್ದನರೊಡೆಗಿನ ನನ್ನ ಸುದೀರ್ಘ ಸಂಬಂಧವನ್ನು ಗುರುತಿಸಿ ಕಳೆದ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಅಭಾರಿ. ಚುನಾವಣಾ ಪೂರ್ವ ನೀಡಿದ್ದ ಮಾತಿನಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ, ನನಗೆ ವಿಶೇಷ ಬಲವನ್ನು ನೀಡಿತ್ತು. ಅವರ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಅವಶ್ಯಕವಾದಷ್ಟು ಅನುದಾನವನ್ನು ನೀಡಿದ್ದರು. ನನಗೆ ಕೇಳಲೂ ಸಾಕಾಗುವಷ್ಟು ನನ್ನ ಕ್ಷೇತ್ರಕ್ಕೆ ಕುಮಾರಸ್ವಾಮಿ ಯೋಜನೆಗಳನ್ನು ನೀಡಿದ್ದರು ಎಂದು ನೆನೆಸಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಚುನಾವಣೆಯಲ್ಲಿ ಬಿಜೆಪಿಗೆ 140 ಕ್ಷೇತ್ರಗಳಲ್ಲಿ ಅಧಿಕಾರ ಬರುತ್ತದೆ ಎಂದು ಹೇಳುತ್ತಾರೆ. ಆದರೆ, ಅದರ ಅರ್ಧದಷ್ಟೂ ಸ್ಥಾನದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಜನತೆ ಬೇಸತ್ತಿದ್ದಾರೆ ಎಂದರು.‌

ಯುವಕರು ಮೋದಿ ಮೋದಿ ಎಂದು ಹಿಂದೆ ಹೋಗಬೇಡಿ. ಅದು ಕಂದಕ ಅದು. ಅದರಲ್ಲಿ ಬೀಳಬೇಡಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.