ADVERTISEMENT

ಯಾದಗಿರಿ |ಎರಡು ತಿಂಗಳಿಂದ ಬಾರದ ‘ಗೃಹಲಕ್ಷ್ಮಿ’; ಬ್ಯಾಂಕ್‌ಗಳಿಗೆ ಮಹಿಳೆಯರ ಅಲೆದಾಟ

ಬಿ.ಜಿ.ಪ್ರವೀಣಕುಮಾರ
Published 17 ಜುಲೈ 2024, 6:11 IST
Last Updated 17 ಜುಲೈ 2024, 6:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಯಾದಗಿರಿ: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಕುಟುಂಬದ ಯಜಮಾನಿ ಪ್ರತಿ ತಿಂಗಳು ₹2,000 ನೀಡುವ ‘ಗೃಹಲಕ್ಷ್ಮೀ’ ಯೋಜನೆಯಡಿ ಕಳೆದ ಎರಡು ತಿಂಗಳಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಇದು ಮಹಿಳಾ ಮಣಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಅಲ್ಲಿಂದ ಮೇ ತಿಂಗಳ ವರೆಗೆ ಖಾತೆಗೆ ಹಣ ಜಮೆಯಾಗಿದ್ದು, ಜೂನ್‌, ಜುಲೈ ತಿಂಗಳಲ್ಲಿ ಹಣ ಬಾರದ ಕಾರಣ ಗೃಹಣಿಯರು ಬ್ಯಾಂಕ್‌ಗಳಿಗೆ ಅಲೆದಾಡಿ ಖಾತೆಗೆ ಹಣ ಬಂದಿವೆಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

‘ಗೃಹಲಕ್ಷ್ಮೀ‘ ಯೋಜನೆ ವ್ಯಾಪ್ತಿಗೆ ಜಿಲ್ಲೆಯಲ್ಲಿ 2.87 ಲಕ್ಷ ಫಲಾನುಭವಿಗಳಿದ್ದಾರೆ. ಇದರಲ್ಲಿ ಕೆಲವರು ಮರಣ ಹೊಂದಿರುವ ಪಡಿತರ ಚೀಟಿಗಳಿದ್ದು, ಎಲ್ಲವನ್ನು ಪರಿಶೀಲಿಸಿದರೆ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಲಿದೆ.

ಫಲಾನುಭವಿಗಳು ವಿವರ: 2023ರ ಆಗಸ್ಟ್‌ ತಿಂಗಳಲ್ಲಿ 2,02,749 ಗೃಹಣಿಯರಿಗೆ ಗೃಹಲಕ್ಷ್ಮೀ ಯೋಜನೆಯಡಿ ₹2 ಸಾವಿರ ಹಣ ಜಮೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ 2,18,211, ಅಕ್ಟೋಬರ್‌ನಲ್ಲಿ 2,23,844, ನವೆಂಬರ್‌ನಲ್ಲಿ 2,25,365, ಡಿಸೆಂಬರ್‌ನಲ್ಲಿ 2,26,143, 2024ರ ಜನವರಿ ತಿಂಗಳಲ್ಲಿ 2,26,400, ಫೆಬ್ರುವರಿಯಲ್ಲಿ 2,37,420, ಮಾರ್ಚ್‌ನಲ್ಲಿ 1,53,061, ಏಪ್ರಿಲ್‌ನಲ್ಲಿ 1,74,911, ಮೇ ತಿಂಗಳಲ್ಲಿ 1,94,039 ಫಲಾನುಭವಿಗಳಿಗೆ ಹಣ ಜಮೆಯಾಗಿದೆ.

ಲಿಂಕ್‌ ಆಗದ ಖಾತೆಗಳಿಗೆ ಹಣವಿಲ್ಲ

2023ರ ಆಗಸ್ಟ್‌ ತಿಂಗಳಿಂದ ಗೃಹಲಕ್ಷ್ಮಿ ಖಾತೆಗೆ ಹಣ ಜಮಾ ಮಾಡ ಲಾಗುತ್ತಿದ್ದು, ಬ್ಯಾಂಕ್‌ ಖಾತೆಗೆ ಜೋಡಣೆಯಾಗದ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ. ಇದರಿಂದ ಜಿಲ್ಲೆಯಲ್ಲಿ ಹಲವರಿಗೆ ಹಣ ತಲುಪಿಲ್ಲ.

2023ರ ಆಗಸ್ಟ್‌ ತಿಂಗಳಲ್ಲಿ 930, ಸೆಪ್ಟೆಂಬರ್‌ನಲ್ಲಿ 1,001, ಅಕ್ಟೋಬರ್‌ನಲ್ಲಿ 1,106, ನವೆಂಬರ್‌ನಲ್ಲಿ 906, ಡಿಸೆಂಬರ್‌ನಲ್ಲಿ 709, 2024ರ ಜನವರಿ ತಿಂಗಳಲ್ಲಿ 603, ಫೆಬ್ರುವರಿ ತಿಂಗಳಲ್ಲಿ 443, ಮಾರ್ಚ್‌ನಲ್ಲಿ 229, ಏಪ್ರಿಲ್‌ನಲ್ಲಿ 310, ಮೇ ತಿಂಗಳಲ್ಲಿ 344 ಜನರಿಗೆ ಹಣ ಖಾತೆಗಳಿಗೆ ಜಮೆಯಾಗಿಲ್ಲ.

‘ಆಧಾರ್‌ ಜತೆಗೆ ಕುಟುಂಬದ ಯಜಮಾನ ಪುರುಷರ ಹೆಸರಿದ್ದರೆ, ಬ್ಯಾಂಕ್‌ ಖಾತೆ ಸಂಖ್ಯೆ ಸರಿಯಾಗಿಲ್ಲದಿದ್ದರೆ, ಹೆಸರು ಬದಲಾವಣೆ ಆಗಿದ್ದರೆ ಹೀಗೆ ವಿವಿಧ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆ ಜಿಲ್ಲೆಯಲ್ಲಿ ತಲುಪಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ತೆರಿಗೆ ಕಟ್ಟುವವರಿಗೆ ಹಣ ಕಟ್‌

ಆದಾಯ ತೆರಿಗೆ ಪಾವತಿಸುವವರು ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದು, ಖಜಾನೆ–2ರಿಂದ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.

2023ರ ಸೆಪ್ಟೆಂಬರ್‌ ತಿಂಗಳಲ್ಲಿ 27, ಅಕ್ಟೋಬರ್‌ನಲ್ಲಿ 27, ನವೆಂಬರ್‌ನಲ್ಲಿ 6 ಅರ್ಜಿಗಳಿಗೆ ಹಣ ಜಮಾ ಮಾಡುವುದನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ. ಇದಲ್ಲದೇ ಸರಿಯಾದ ದಾಖಲೆಗಳು ನೀಡದ ಕಾರಣ ಹಲವಾರು ಅರ್ಜಿಗಳು ನಗಣ್ಯವಾಗಿವೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 2.46 ಲಕ್ಷ ಗೃಹಲಕ್ಷ್ಮಿಯರಿಗೆ ₹2 ಸಾವಿರ ಹಣ ಜಮೆಯಾಗಿದೆ. ಆದರೆ, ಎರಡು ತಿಂಗಳಿಂದ ಬಂದಿಲ್ಲ. ಕೆಲವರಿಗೆ ಬ್ಯಾಂಕ್‌ ಖಾತೆ ಸರಿ ಇಲ್ಲದ ಕಾರಣ ಹಣ ಜಮೆಯಾಗಿಲ್ಲ.
-ಪ್ರೇಮಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.