ADVERTISEMENT

ಯಾದಗಿರಿ: ಪುರಸಭೆ ಚುನಾವಣೆಯಲ್ಲಿ ಯಾರಿಗೆ ‘ಕೈ’ ಯಾರಿಗೆ ‘ಕಮಲ’?

ಕೆಂಭಾವಿ, ಕಕ್ಕೇರಾ ಪುರಸಭೆ ಚುನಾವಣೆ: ಹಾಲಿ,‌ ಮಾಜಿ‌ ಶಾಸಕರ ನಡುವೆ ಪೈಪೋಟಿ

ಬಿ.ಜಿ.ಪ್ರವೀಣಕುಮಾರ
Published 27 ಡಿಸೆಂಬರ್ 2021, 19:30 IST
Last Updated 27 ಡಿಸೆಂಬರ್ 2021, 19:30 IST
ಡಾ.ಶರಣಭೂಪಾಲರೆಡ್ಡಿ 
ಡಾ.ಶರಣಭೂಪಾಲರೆಡ್ಡಿ    

ಯಾದಗಿರಿ: ಜಿಲ್ಲೆಯ ಕೆಂಭಾವಿ ಮತ್ತು ಕಕ್ಕೇರಾ ಪುರಸಭೆ ಚುನಾವಣೆ ಸೋಮವಾರ ಮುಕ್ತಾಯವಾಗಿದ್ದು, ಹಾಲಿ ಮತ್ತು ಮಾಜಿ‌ ಶಾಸಕರಲ್ಲಿ‌ ಯಾರಿಗೆ ಗೆಲುವು ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಕೆಂಭಾವಿಯಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿದ್ದರೆ, ಕಕ್ಕೇರಾದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿತ್ತು. ಈಗ ಗೆಲುವಿನ ಹಾರ ಯಾರಿಗೆ ಸಿಗಲಿದೆ ಎಂಬುವುದು ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.30ಕ್ಕೆ ಫಲಿತಾಂಶ ಹೊರ ಬೀಳಲಿದೆ.

ಹಾಲಿ,‌ ಮಾಜಿ ಶಾಸಕರ ಬಿರುಸಿನ ಪ್ರಚಾರ: ಉಭಯ ಪುರಸಭೆ ಚುನಾವಣೆಯು ಮುಂದಿ‌ನ ಶಾಸಕರ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿದೆ. ಪುರಸಭೆ ಗದ್ದುಗೆ ಹಿಡಿದವರಿಗೆ ಒಂದೂವರೆ ವರ್ಷದ ನಂತರ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನುಕೂಲಕರವಾದ ವಾತಾವರಣ ನಿರ್ಮಾಣವಾಗಲಿದೆ. ಹೀಗಾಗಿ, ಈ ಬಾರಿಯ ಪುರಸಭೆ ಚುನಾವಣೆಯಲ್ಲಿ‌ ಹಾಲಿ‌ ಮತ್ತು ಮಾಜಿ ಶಾಸಕರು ಬಿರುಸಿನ ಪ್ರಚಾರ ನಡೆಸಿದ್ದರು.

ಕೆಂಭಾವಿ ಮತಕ್ಷೇತ್ರದಲ್ಲಿ ಹಾಲಿ‌ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಮಾಜಿ‌ ಶಾಸಕ ಗುರುಪಾಟೀಲ ಶಿರವಾಳ ಅವರು ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳ‌ ಪರ ಹಗಲು ರಾತ್ರಿ ಪ್ರಚಾರ ಮಾಡಿದ್ದಾರೆ. ಅಲ್ಲದೇ ಯುವ ಮುಖಂಡ ಅಮಿನರೆಡ್ಡಿ ಯಾಳಗಿ ಬಿರುಸಿನ ‍ಪ್ರಚಾರ ಕೈಗೊಂಡಿದ್ದರು.

ADVERTISEMENT

ಅದರಂತೆ ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ಹಾಲಿ ಸುರಪುರ ಶಾಸಕ ರಾಜುಗೌಡ (ನರಸಿಂಹ ನಾಯಕ), ಮಾಜಿ‌ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಹಳ್ಳಿ, ದೊಡ್ಡಿಗಳಲ್ಲಿ ಸಂಚಾರ ಮಾಡಿ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದಾರೆ. ಇದರ ಸಿಹಿ,‌ ಕಹಿ ಮುಂದಿನ ಮೂರು ದಿನಗಳಲ್ಲಿ ಅನಾವಣರಗೊಳ್ಳಲಿದೆ.

ಜಿದ್ದಾಜಿದ್ದಿನ‌ ಪೈಪೋಟಿ:ಈ ಬಾರಿಯ ಪುರಸಭೆಯಲ್ಲಿ‌ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ‌ನಾಮಪತ್ರ ಸಲ್ಲಿಕೆ ಕೊನೆ ದಿನ ಸಮೀಪಿಸಿದ್ದರೂ ಪಕ್ಷಗಳು ತಮ್ಮ ಆಭ್ಯರ್ಥಿಗಳಿಗೆ ‘ಬಿ’ ಫಾರಂ ಖಚಿತ‌‌ ಪಡಿಸಿರಲಿಲ್ಲ. ಹೀಗಾಗಿ, ಯಾರಿಗೆ ಟಿಕೆಟ್ ಸಿಗಲಿದೆ, ಯಾರೂ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲ ಮಾಡಿತ್ತು.‌

ಕೆಂಭಾವಿಯಲ್ಲಿ ಕಡಿಮೆ ನಾಮಪತ್ರ: ಎರಡೂ ಪುರಸಭೆಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಇತ್ತು. ಕೆಂಭಾವಿ ಮತ್ತು ಕಕ್ಕೇರಾದಲ್ಲಿ ತಲಾ 23 ವಾರ್ಡ್‌ಗಳಿದ್ದು, ಕೆಂಭಾವಿಯಲ್ಲಿ ಒಂದು ಸ್ಥಾನ ಅವಿರೋಧ ಆಯ್ಕೆಯಾಗಿದೆ. 22 ಸ್ಥಾನಗಳಿಗೆ ಮತದಾನ ನಡೆದಿದ್ದು, 48 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಲ್ಲದೇ ಕಕ್ಕೇರಾ ಪುರಸಭೆಯಲ್ಲಿ ಬಿಜೆಪಿ 23, ಕಾಂಗ್ರೆಸ್‌ 23, ಇಬ್ಬರು ಜೆಡಿಎಸ್‌ ಮತ್ತು ಮೂವರು ಪಕ್ಷೇತರರು ಸೇರಿ 51 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಕ್ಕೇರಾದಲ್ಲಿ ಅತಿಹೆಚ್ಚು ನಾಮಪತ್ರ ಸಲ್ಲಿಕೆ ಮಾಡಿ ಹಿಂತೆಗೆದುಕೊಳ್ಳಲಾಗಿತ್ತು.

ಮತಪೆಟ್ಟಿಗೆ ಸೇರಿದ ಭವಿಷ್ಯ:ಕಕ್ಕೇರಾ 51 ಮತ್ತು ಕೆಂಭಾವಿಯ 48 ಅಭ್ಯರ್ಥಿಗಳ ಭವಿಷ್ಯ ಮತಪಟ್ಟೆಗೆಯಲ್ಲಿ ಸೇರ್ಪಡೆಯಾಗಿದೆ. ಗುರುವಾರ (ಡಿ.30)ರಂದುಬೆಳಿಗ್ಗೆ 8 ಗಂಟೆಯಿಂದ ಸುರಪುರ ತಾಲ್ಲೂಕುಕೇಂದ್ರದಲ್ಲಿ ಮತ ಏಣಿಕೆ ನಡೆಯಲಿದೆ.

ಮತದಾನ ಮುಕ್ತಾಯವಾಗಿದ್ದು, ಈಗ ಎಷ್ಟು ಮತಗಳ ಅಂತರದಿಂದ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ. ಯಾವ ವಾರ್ಡ್‌ನಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವ ಚರ್ಚೆಗಳು ಸಾರ್ವಜನಿಕರಲ್ಲಿ ಶುರುವಾಗಿವೆ.

****

ಗ್ರಾ.ಪಂ ಉಪಚುನಾವಣೆ: ಶೇ 72.54ರಷ್ಟು ಮತದಾನ

ಯಾದಗಿರಿ: ಜಿಲ್ಲೆಯಲ್ಲಿ 11 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಸದಸ್ಯರ ನಿಧನದಿಂದ 11 ಸ್ಥಾನಗಳು ತೆರವಾಗಿದ್ದು, 5 ಕ್ಷೇತ್ರಗಳಿಗೆ ಸೋಮವಾರ ಶೇ 72.54ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

11 ಕ್ಷೇತ್ರಗಳ ಪೈಕಿ ಉಳಿದ ಆರು ಕ್ಷೇತ್ರಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಶೇ 62.38ರಷ್ಟು, ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾ.ಪಂ ಶೇ 76.19ರಷ್ಟು, ಸುರಪುರ ತಾಲ್ಲೂಕಿನ ದೇವಾಪುರ ಗ್ರಾ.ಪಂ ವ್ಯಾಪ್ತಿಯ ಅರಳಹಳ್ಳಿ ಶೇ 76.98ರಷ್ಟು, ಗುರುಮಠಕಲ್ ತಾಲ್ಲೂಕಿನ ಚಂಡ್ರಕಿ ಗ್ರಾ.ಪಂ ವ್ಯಾಪ್ತಿಯ ಕೇಶ್ವಾರ ಶೇ 64.05ರಷ್ಟು ಮತ್ತು ಹುಣಸಗಿ ತಾಲ್ಲೂಕಿನ ಅಗ್ನಿ ಗ್ರಾ.ಪಂ ವ್ಯಾಪ್ತಿಯ ಕರಿಭಾವಿ ಶೇ 82.78ರಷ್ಟು ಮತದಾನವಾಗಿದೆ. ಒಟ್ಟಾರೆ ಶೇ 72.54ರಷ್ಟು ಮತಚಲಾವಣೆಯಾಗಿದೆ.

5,214 ಮತದಾರರಲ್ಲಿ 3,782 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಡಿ.30ಕ್ಕೆ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ.

***

ಕೆಂಭಾವಿ, ಕಕ್ಕೇರಾ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಸರ್ಕಾರದ ಕಾರ್ಯಗಳೆ ನಮ್ಮ ಅಭ್ಯರ್ಥಿಗಳ ಗೆಲುವಿಗೆ ನೆರವಾಗಲಿವೆ
ಡಾ.ಶರಣಭೂಪಾಲರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

***

ಎರಡೂ ಪುರಸಭೆಗಳಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರದ ಗದ್ದುಗೆ ಏರಲಿದೆ. ಸಾರ್ವತ್ರಿಕ ಚುನಾವಣೆಗೆ ಒಂದೂವರೆ ವರ್ಷವಿದ್ದು, ಇದರಿಂದ ಜನರ ನಾಡಿಮಿಡಿತ ತಿಳಿದುಬರಲಿದೆ
ಮರೀಗೌಡ ಹುಲಕಲ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.