ADVERTISEMENT

ಯಾದಗಿರಿ: ಸಿಡಿಲಾಘಾತಕ್ಕೆ ಜನ–ಜಾನುವಾರುಗಳ ‘ಜೀವಹಾನಿ’

12 ಜನ, 13 ದೊಡ್ಡ ಜಾನುವಾರು, 31 ಸಣ್ಣ ಜಾನುವಾರು ಸಾವು

ಬಿ.ಜಿ.ಪ್ರವೀಣಕುಮಾರ
Published 9 ನವೆಂಬರ್ 2024, 5:51 IST
Last Updated 9 ನವೆಂಬರ್ 2024, 5:51 IST
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಎರಡು ತಾಂಡಾಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದ ತಲಾ ಪರಿಹಾರ ₹5ಲಕ್ಷ ಚೆಕ್ ವಿತರಿಸಿದರು
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಎರಡು ತಾಂಡಾಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದ ತಲಾ ಪರಿಹಾರ ₹5ಲಕ್ಷ ಚೆಕ್ ವಿತರಿಸಿದರು   

ಯಾದಗಿರಿ: ಜಿಲ್ಲೆಯಲ್ಲಿ ಪೂರ್ವ ಮುಂಗಾರು, ಮುಂಗಾರು ಹಂಗಾಮಿನಲ್ಲಿ ಸಿಡಿಲಿಗೆ 12 ಜನರು, 13 ದೊಡ್ಡ ಜಾನುವಾರು, 31 ಸಣ್ಣ ಜಾನುವಾರು ಸೇರಿದಂತೆ 57 ಜನ–ಜಾನುವಾರಿಗೆ ಜೀವಹಾನಿಯಾಗಿದೆ.

ಗುರುಮಠಕಲ್‌ ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚು ಸಾವಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 3 ಜನ, ಶಹಾಪುರ, ಸುರಪುರ ತಾಲ್ಲೂಕಿನಲ್ಲಿ ತಲಾ 2, ಹುಣಸಗಿ 1, ಗುರುಮಠಕಲ್‌ ತಾಲ್ಲೂಕಿನಲ್ಲಿ 4 ಜನ ಸಿಡಿಲಿಗೆ ಸಾವನ್ನಪ್ಪಿದ್ದಾರೆ.

ಪ್ರತಿಯೊಬ್ಬರಿಗೆ ₹5 ಲಕ್ಷ ಪರಿಹಾರ: ಪ್ರಾಕೃತಿಕವಾಗಿ ಸಂಭವಿಸಿದ ಹಾನಿಗೆ ಸರ್ಕಾರ ಪ್ರತಿಯೊಬ್ಬರಿಗೆ ₹5 ಲಕ್ಷ ಪರಿಹಾರ ನೀಡುತ್ತಿದೆ. ಅದರಂತೆ ಯಾದಗಿರಿ ತಾಲ್ಲೂಕಿನಲ್ಲಿ ₹15 ಲಕ್ಷ, ಶಹಾ‍ಪುರ ₹10 ಲಕ್ಷ, ಸುರ‍‍ಪುರ ₹10 ಲಕ್ಷ, ಹುಣಸಗಿ ₹5 ಲಕ್ಷ, ಗುರುಮಠಕಲ್‌ ₹20 ಲಕ್ಷ ಸೇರಿದಂತೆ ₹60 ಲಕ್ಷ ಪರಿಹಾರ ಸರ್ಕಾರ ನೀಡಿದೆ.

ADVERTISEMENT

ಜಾನುವಾರು ಜೀವಹಾನಿ: ಸಣ್ಣ ಜಾನುವಾರು, ದೊಡ್ಡ ಜಾನುವಾರಿಗೆ ಜೀವಹಾನಿ ಪರಿಹಾರ ನೀಡಲಾಗುತ್ತಿದೆ. ದೊಡ್ಡ ಜಾನುವಾರಿಗೆ ₹37,500, ಸಣ್ಣ ಜಾನುವಾರಿಗೆ ₹4,000 ಪರಿಹಾರ ನೀಡಲಾಗುತ್ತಿದೆ. ಯಾದಗಿರಿ ತಾಲ್ಲೂಕಿನಲ್ಲಿ 1, ಶಹಾಪುರ 3, ಸುರಪುರ 4, ವಡಗೇರಾ 3, ಹುಣಸಗಿ 1, ಗುರುಮಠಕಲ್‌ 1 ಸೇರಿದಂತೆ 13 ದೊಡ್ಡ ಜಾನುವಾರ ಸಿಡಿಲಿಗೆ ಮೃತಪಟ್ಟಿವೆ. ಯಾದಗಿರಿ ತಾಲ್ಲೂಕಿನಲ್ಲಿ ಸಣ್ಣ ಜಾನುವಾರ 6, ಶಹಾಪುರ 7, ಸುರಪುರ 2, ವಡಗೇರಾ 11, ಹುಣಸಗಿ 4, ಗುರುಮಠಕಲ್‌ 1 ಸೇರಿದಂತೆ 31 ಸಣ್ಣ ಜಾನುವಾರು ಜೀವಕಳೆದುಕೊಂಡಿವೆ.

ಒಟ್ಟಾರೆಯಾಗಿ ದೊಡ್ಡ ಜಾನುವಾರುಗಳಿಗೆ ₹35 ಲಕ್ಷ, ಸಣ್ಣ ಜಾನುವಾರಿಗೆ ₹12 ಲಕ್ಷ ಪರಿಹಾರ ನೀಡಲಾಗಿದೆ.

555 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಏಪ್ರಿಲ್‌ 1ರಿಂದ ಅಕ್ಟೋಬರ್ 29ರ ವರೆಗೆ 555 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಭಾಗಶಃ 11, ಅಲ್ಪ ಸ್ವಲ್ಪ 544 ಸೇರಿದಂತೆ 555 ಮನೆಗಳಿಗೆ ಹಾನಿಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲೇ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 968 ಶೆಡ್‌ ಅಥವಾ ಗುಡಿಸಲು ಹಾನಿಯಾಗಿವೆ. ಯಾದಗಿರಿ ತಾಲ್ಲೂಕಿನಲ್ಲಿ 115, ಶಹಾಪುರ 53, ಸುರಪುರ 433, ವಡಗೇರಾ 218, ಹುಣಸಗಿ 115, ಗುರುಮಠಕಲ್‌ 34 ಸೇರಿದಂತೆ 968 ಶೆಡ್‌, ಗುಡಿಸಲು ಹಾನಿಯಾಗಿವೆ.

ಮೇಘದೂತ ದಾಮಿನಿ ಆ್ಯಪ್‌ ಬಳಸಲು ಸಲಹೆ

ಸಿಡಿಲುನಿಂದ ತಪ್ಪಿಸಿಕೊಳ್ಳಲು ಸಿಡಿಲು ಮಳೆ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಸರ್ಕಾರ ರೂಪಿಸಿರುವ ಆ್ಯಪ್‌ಗಳನ್ನು ಬಳಿಸಲು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ರೈತರಿಗೆ ಸಾರ್ವಜನಿಕರಿಗೆ ಸಿಡಿಲಿನ ಕುರಿತು ಮಾಹಿತಿ ನೀಡಲು ಸರ್ಕಾರದ ‘ದಾಮಿನಿ’ ಆ್ಯಪ್‌ ನೆರವಿಗೆ ಬರಲಿದೆ. ಸಿಡಿಲು ಅಥವಾ ಮಿಂಚಿನ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ‘ದಾಮಿನಿ’ ಅನ್ನುವ ಮೊಬೈಲ್‌ ಅಪ್ಲಿಕೇಶನನ್ನು ಅಭಿವೃದ್ಧಿಪಡಿಸಿದೆ. ಡೌನ್‌ಲೋಡ್‌ ಮಾಡಿಕೊಂಡರೆ ಆಯಾ ಪ್ರದೇಶದ ಮಿಂಚಿನ ಮುನ್ಸೂಚನೆ ಮತ್ತು ಎಚ್ಚರಿಕೆಯ ಮಾಹಿತಿ ಪಡೆಯಬಹುದು. ‘ಮೇಘದೂತ’ ಆ್ಯಪ್‌ನಲ್ಲಿ ಕನ್ನಡ ಇದ್ದು ರೈತರಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಏಪ್ರಿಲ್‌ 1ರಿಂದ ಅಕ್ಟೋಬರ್ 29ರ ವರೆಗೆ ಜನ ಜಾನುವಾರು ಸೇರಿ 57 ಸಿಡಿಲಿನ ಅಘಾತಕ್ಕೆ ಮೃತಪಟ್ಟಿವೆ. ಪರಿಹಾರವೂ ವಿತರಿಸಲಾಗಿದೆ
-ಶರಣಬಸಪ್ಪ ಕೋಟೆಪ್ಪಗೋಳ, ಹೆಚ್ಚುವರಿ ಜಿಲ್ಲಾಧಿಕಾರಿ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.