ಕೆಂಭಾವಿ: ಬಹು ನಿರೀಕ್ಷಿತ ಮಂಗಳವಾರ (ಸೆ.2ರಂದು) ನಡೆಯಬೇಕಿದ್ದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ಪುರಸಭೆ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
23 ಸದಸ್ಯರ ಪುರಸಭೆಯಲ್ಲಿ 13 ಬಿಜೆಪಿ, 8 ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬಂಬಲ ಘೋಷಿಸಿದ್ದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 10 ಕ್ಕೆ ಏರಿಕೆಯಾಗಿತ್ತು. ಕಳೆದೊಂದು ವಾರದಿಂದ ಅಧ್ಯಕ್ಷ-ಉಪಾಧ್ಯಕ್ಷರ ಗಾದಿಗೇರಲು ತೀವ್ರ ಪೈಪೊಟಿ ಏರ್ಪಟ್ಟು ಬಿಜೆಪಿ ಐದು ಜನ ಸದಸ್ಯರೂ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು ಹೈಜಾಕ್ ಆಗಿದ್ದರು. ಹೀಗಾಗಿ ಪಟ್ಟಣದಲ್ಲಿ ಚುನಾವಣೆ ಕಾವು ಜೋರಾಗಿತ್ತು. ಚುನಾವಣೆಗೆ ಹಲವಾರು ಕಾದು ಕುಳಿತಿದ್ದರು.
ಮಂಗಳವಾರ ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಪಕ್ಷದ ಶಾರದಾ ಭೀಮರಾಯ ಬಿರಾದಾರ ಅವರು ಕಲಬುರಗಿ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಅಧ್ಯಕ್ಷರ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಇದಕ್ಕೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಈ ಬಗ್ಗೆ ಚುನವಣಾಧಿಕಾರಿಯೂ ಆದ ಸುರಪುರ ತಹಶೀಲ್ದಾರ್ ಕೆ.ವಿಜಯಕುಮಾರ ಅವರು ಮುಂದಿನ ಆದೇಶದವರೆಗೆ ಚುನಾವಣೆ ಮೂಂದೂಡಲಾಗಿದೆ ಎಂದು ತಿಳಿಸಿದರು.
ಪೊಲೀಸರ ಸರ್ಪಗಾವಲು-ಅತಿ ಸೂಕ್ಷ್ಮ ಚುನಾವಣೆ ಎಂದು ಗುರುತಿಸಿಕೊಂಡಿದ್ದ ಈ ಚುನಾವಣೆಗೆ ಬಂದೋಬಸ್ತ್‌ಗಾಗಿ ಬೆಳಿಗ್ಗೆಯಿಂದಲೆ ಪೊಲೀಸ್ ಪಡೆ ಬಿಗಿ ಪಹರೆಗೊಳಿಸಿತ್ತು. ಡಿವೈಎಸ್‌ಪಿ ನೇತೃತ್ವದಲ್ಲಿ ಐದು ಜನ ಎಸ್‌ಐ, ಹತ್ತು ಜನ ಪಿಎಸ್‌ಐ, 15 ಜನ ಎಎಸ್‌ಐ, ಎರಡು ಡಿಆರ್ ವಾಹನ, 100ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್‌ಗಾಗಿ ಆಗಮಿಸಿದ್ದರು. ಒಂದು ರೀತಿ ಪುರಸಭೆ ಆವರಣ ಪೊಲೀಸ್ ಮೈದಾನವಾಗಿ ಏರ್ಪಟ್ಟಿತ್ತು. ಆದರೆ, ತಡೆಯಾಜ್ಞೆ ಸುದ್ದಿ ತಿಳಿಯುತ್ತಲೆ ಬಂದ ದಾರಿಗೆ ಸುಂಕ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪ್ರಯಾಣ ಬೆಳೆಸಿದರು. ಮೀಸಲಾತಿ ಗೊಂದಲ ಪರಿಹಾರವಾದ ನಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.