ಯಾದಗಿರಿ: ಜಿಲ್ಲೆಯಾಗಿ 14 ವರ್ಷಗಳಾದರೂ ಜಿಲ್ಲೆಯಲ್ಲಿ ಒಂದೇ ಬಾರಿ ‘ಖಾದಿ ಉತ್ಸವ’ ನಡೆದಿದ್ದು, ಈಗ ದಶಕದ ನಂತರ ಮತ್ತೊಮ್ಮೆ ಉತ್ಸವಕ್ಕೆ ಅಣಿಯಾಗಿದೆ.
2013ರಲ್ಲಿ ಮೊದಲ ಬಾರಿಗೆ ‘ಖಾದಿ ಉತ್ಸವ’ ನಡೆದಿತ್ತು ಎಂದು ಖಾದಿ ಗ್ರಾಮೋದ್ಯೋಗ ಇಲಾಖೆ ಅಧಿಕಾರಿಗಳು ಹೇಳುವ ಮಾತಾಗಿದೆ.
ಸ್ವಾಂತಂತ್ರ್ಯ ಸಂಗ್ರಾಮದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಖಾದಿ ಉತ್ಸನ್ನಗಳು ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತ ಇಲ್ಲದೇ ಸೊರಗಿವೆ. ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ ತಾಲ್ಲೂಕಿನ ಕೊಡೇಕಲ್ ಭಾಗದಲ್ಲಿ ಮಾತ್ರ ಸದ್ಯ ನೇಕಾರಿಕೆ ಮಾಡುವವರು ಕಾಣುತ್ತಿದ್ದು, ಹೆಚ್ಚಿನ ಪ್ರಚಾರದ ಕೊರತೆಯಿಂದ ಖಾದಿ ಉತ್ಪನ್ನ ಬೇಡಿಕೆ ಕುಸಿದಿದೆ.
ಮೂರು ಹಂತಗಳು: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೊಗ ಮಂಡಳಿ ಬೆಂಗಳೂರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಖಾದಿ ಉತ್ಸವ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಮೂರು ಹಂತಗಳಲ್ಲಿ ನಡೆಯುತ್ತಿದೆ. ಸದ್ಯ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಉತ್ಸವ ನಡೆಯಲಿದೆ.
‘ಜಿಲ್ಲೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇದ್ದರೂ ಹೆಚ್ಚಿನ ಪ್ರಚಾರ ಇಲ್ಲ. ಇದರಿಂದ ಈ ಬಗ್ಗೆ ಜಿಲ್ಲೆಯಲ್ಲಿ ಪ್ರಚಾರವಿಲ್ಲದಂತೆ ಆಗಿದೆ. ಇಂತಹ ಉತ್ಸವಗಳನ್ನು ಪ್ರತಿವರ್ಷ ಹಮ್ಮಿಕೊಂಡರೆ ಜನರು ಖಾದಿ ಉತ್ಪನ್ನದ ಬಗ್ಗೆ ಒಲವು ತೋರಲು ಸಾಧ್ಯ’ ಎಂದು ನಗರ ನಿವಾಸಿ ಇಂದೂಧರ ಶ್ರೀನಿವಾಸ್ ಹೇಳುತ್ತಾರೆ.
ಖಾದಿ ಉತ್ಸವ ಏನು ವಿಶೇಷ: ನಗರದ ಹೈದರಾಬಾದ್ ರಸ್ತೆಯ ಶುಭಂ ಪೆಟ್ರೋಲ್ ಬಂಕ್ ಹತ್ತಿರ ತುನ್ನೂರು ಕಾಂಪೌಂಡ್ ಬಳಿ ನ.26 ರಿಂದ ಡಿಸೆಂಬರ್ 10ರವರೆಗೆ ಖಾದಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದಲ್ಲಿ 75 ಮಳಿಗೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ, ಖಾದಿ ಮಂಡಳಿಯಿಂದ ಹಾಗೂ ಖಾದಿ ಆಯೋಗದಿಂದ ಆರ್ಥಿಕ ಸಹಾಯ ಪಡೆದ ಖಾದಿ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿಗಳು ತಯಾರಿಸಿದ ವಸ್ತುಗಳನ್ನು ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತದೆ.
‘ವಸ್ತು ಪ್ರದರ್ಶನದಲ್ಲಿ ಗ್ರಾಮೋದ್ಯೋಗ ಉತ್ಪನ್ನಗಳ ಖಾದಿ, ಶುದ್ದ ರೇಷ್ಮೆ ಸೀರೆಗಳು, ಪಾಲಿವಸ್ತ್ರ, ಖಾದಿ ಶರ್ಟ್‌ಗಳು, ಜಾಕೆಟ್‌ಗಳು, ಜಮಖಾನೆ, ಬೆಡ್ ಶೀಟ್, ಟವಲ್‌ಗಳು, ಜೀನ್ಸ್ ಬಟ್ಟೆಗಳು, ಇಳಕಲ್ ಸೀರೆಗಳು, ಜೂಟ್ ಮತ್ತು ಇತರೆ ಬ್ಯಾಗ್‌ಗಳು, ಪಾದರಕ್ಷೆಗಳು, ಆಯುರ್ವೇದಿಕ್ ಔಷಧಗಳು, ಆಕರ್ಷಕ ಬಣ್ಣಗಳ ಹಾಗೂ ವಿನ್ಯಾಸಗಳಿಂದ ತಯಾರಿಸಿದ ಸಿದ್ಧ ಉಡುಪುಗಳು, ಗೃಹೋಪಯೋಗಿ ಸಾಮಗ್ರಿ, ಶುದ್ಧ ಜೇನುತುಪ್ಪ, ಅಲಂಕಾರಿಕ ಕರಕುಶಲ ವಸ್ತುಗಳು, ಕಾಂಡಿಮೆಂಟ್ಸ್, ಅಗರಬತ್ತಿ, ಪೂಜಾವಸ್ತುಗಳು ಹಾಗೂ ಅನೇಕ ಬಗೆಯ ಇತರೆ ವಸ್ತುಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಲಭ್ಯವಿವೆ’ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
‘ಉಷ್ಣ ಕಾಲೇ ಶೀತಂ ಶೀತಕಾಲೇ ಉಷ್ಣಂ ಇದುವೇ ಖಾದಿ ವಸ್ತ್ರಂ.’ ಮೂರು ವಾರ ಖಾದಿ ಉತ್ಸವ ಹಮ್ಮಿಕೊಂಡಿದ್ದು ನೂಲು ತೆಗೆಯುವ ಬಗ್ಗೆ ಪ್ರಾತ್ಯಕ್ಷಿಕತೆಯೂ ಇರಲಿದೆಮನೀಷಾ ಸಿ.ಎಚ್., ಖಾದಿ ಗ್ರಾಮೋದ್ಯೋಗ ಅಧಿಕಾರಿ
ರಾಜ್ಯದ ವಿವಿಧ ಜಿಲ್ಲೆಗಳಿಂದ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು ಹಲವು ವರ್ಷಗಳ ನಂತರ ಜಿಲ್ಲೆಯಲ್ಲಿ ಖಾದಿ ಉತ್ಸವ ಹಮ್ಮಿಕೊಂಡಿದ್ದು ಗ್ರಾಹಕರು ಸಹಕರಿಸಬೇಕು.ಬಿ.ಸತೀಶ್‌ಕುಮಾರ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.