ಗುರುಮಠಕಲ್: ಶೌಚಾಲಯಗಳಿಗೆ ಬಾಗಿಲುಗಳ ಸಮಸ್ಯೆ, ನೀರಿನ ಸಮಸ್ಯೆಯ ಕಾರಣ ಪ್ರಕೃತಿ ಕರೆಗೆ ಮಕ್ಕಳು ಮತ್ತು ಮೇಷ್ಟ್ರುಗಳಿಗೆ ಬಯಲೇ ಗತಿ, ಮಧ್ಯಾಹ್ನ 12ಕ್ಕೆ ಶಾಲೆಯಿಂದ ಮಕ್ಕಳು ಪಕ್ಕದ ಗುಡ್ಡಕ್ಕೆ ಹೋಗುವುದು ಸಾಮಾನ್ಯವಾದರೆ, ಶಿಕ್ಷಕರು ಬೈಕ್‌ನಲ್ಲಿ ಹೋಗುವುದು ಅನಿವಾರ್ಯ...
ಇದು ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಸಮಸ್ಯೆ ಕುರಿತು ಗ್ರಾಮಸ್ಥರಾಡಿದ ಮಾತು.
ಶಾಲೆಯಲ್ಲಿ 7 ಜನ ಕಾಯಂ ಶಿಕ್ಷಕರು, 9 ಜನ ಅತಿಥಿ ಶಿಕ್ಷಕರು ಸೇರಿ 16 ಶಿಕ್ಷಕರಿದ್ದಾರೆ. 1 ರಿಂದ 8 ನೇ ತರಗತಿವರೆಗೆ ಕನ್ನಡ ಮತ್ತು 1 ರಿಂದ 5 ನೇ ತರಗತಿವರೆಗೆ ಇಂಗ್ಲೀಷ್ ಮಾಧ್ಯಮದ ಒಟ್ಟು 505 ವಿದ್ಯಾರ್ಥಿಗಳಿದ್ದು, ಶೌಚಾಲಯದ ಸಮಸ್ಯೆಯ ಭಯ ಮತ್ತು ಪದೇ ಪದೆ ಬಯಲಿಗೆ ಹೋಗಬೇಕಾಗುತ್ತದೆಂಬ ಮುಜುಗರದಿಂದ ಬಾಲಕಿಯರು ನೀರನ್ನು ಕುಡಿಯಲು ಹಿಂದೇಟು ಹಾಕುವ ಅಸಹಾಯಕತೆಯಲ್ಲಿ ಸಿಲುಕಿದ್ದಾರೆ.
ಶಾಲೆಯ ಗೇಟ್ ಪಕ್ಕದಲ್ಲೇ ಇರುವ ಶೌಚಾಲಯ ಕಟ್ಟಡದ ನಾಲ್ಕು ಶೌಚ ಕೋಣೆಗಳು ಬಳಕೆಗೆ ಯೋಗ್ಯವಿಲ್ಲ. ನೀರಿನ ಸಮಸ್ಯೆಯಿದೆ ಮತ್ತು ಬಾಗಿಲುಗಳು ಮುರಿದಿವೆ. ನೂತನ ಶೌಚಾಲಯ ಸಂಕೀರ್ಣಕ್ಕೆ ಮಾತ್ರ ಬಾಗಿಲಿದ್ದು, ಸಂಕೀರ್ಣದಲ್ಲಿರುವ ಮೂರು ಪ್ರತ್ಯೇಕ ಶೌಚ ಕೋಣೆಗಳಿಗೆ ಬಾಗಿಲುಗಳಿಲ್ಲ. ನೂತನ ಶೌಚಾಲಯ ಸಂಕೀರ್ಣವನ್ನು ಸದ್ಯ ಶಿಕ್ಷಕಿಯರು ಬಳಕೆ ಮಾಡುತ್ತಿದ್ದಾರೆ. ಆದರೆ, ಶಿಕ್ಷಕರು ಬೈಕ್‌ನಲ್ಲಿ ಬಯಲಿಗೆ ತೆರಳುತ್ತಾರೆ.
ಸ್ಥಳಾವಕಾಶದ ಕೊರತೆ: ಶಾಲೆಯಲ್ಲಿ 12 ಕೋಣೆಗಳಿದ್ದು, ಒಂದೂ ಕೋಣೆಯೂ ಬಳಕೆಗೆ ಯೋಗ್ಯವಿಲ್ಲ. 6 ನೇ ತರಗತಿಯಲ್ಲಿ 104, 7ನೇ ತರಗತಿಯಲ್ಲಿ 76 ಹಾಗೂ 8ನೇ ತರಗತಿಯಲ್ಲಿ 119 ವಿದ್ಯಾರ್ಥಿಗಳಿದ್ದಾರೆ. ದೊಡ್ಡ ಕೋಣೆಗಳಲ್ಲಿ ಗರಿಷ್ಠ 60 ವಿದ್ಯಾರ್ಥಿಗಳು ಕೂಡಬಹುದು. ಹೆಚ್ಚಿನ ವಿಭಾಗಗಳಾಗಿ ವಿಂಗಡಿಸಲು ಕೋಣೆಗಳ ಕೊರತೆಯಿದೆ. ಕಚೇರಿ ಕೋಣೆಯಲ್ಲೇ ರೇಷನ್ ದಾಸ್ತಾನು ಮಾಡಲಾಗುತ್ತಿದೆ. ಹೊಸ ಕೋಣೆಗಳನ್ನು ನಿರ್ಮಿಸಲೂ ಶಾಲೆಗೆ ಜಾಗವಿಲ್ಲ ಎಂದು ಶಿಕ್ಷಕರೊಬ್ಬರು ತಿಳಿಸಿದರು.
ಅರಕೇರಾ (ಕೆ), ಅರಕೇರಾ (ಕೆ) ತಾಂಡಾ, ಗೋಟಗಿ ತಾಂಡಾ, ಪಸಪುಲ ತಾಂಡಾ, ತಾತಾಳಗೇರ, ಮಗದಂಪುರ, ಮಗದಂಪುರ ತಾಂಡಾದಿಂದ ಮಕ್ಕಳು ಇಲ್ಲಿಗೆ ಬರುತ್ತಾರೆ. ಮಕ್ಕಳ ಸಂಖ್ಯೆಗನುಗುಣ ಕೋಣೆಗಳು, ಪೀಠೋಪಕರಣ, ಶಿಕ್ಷಕರನ್ನು ನಿಯೋಜಿಸಬೇಕು ಎನ್ನುವುದು ಪೋಷಕರ ಮನವಿ.
ಶಾಲೆಯ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲ. ಶೌಚಕ್ಕೆ ತೆರಳಬೇಕಾದರೆ ಹಿಂದಿನ ಗುಡ್ಡಕ್ಕೆ ಹೋಗುತ್ತೇವೆ. ಅಲ್ಲಿ ಚೇಳು ಹುಳ ಹಾವುಗಳೂ ಕಾಣುತ್ತವೆ. ಅದಕ್ಕಾಗಿ ಶಾಲೆಯಲ್ಲಿದ್ದಾಗ ನೀರು ಕುಡಿಯಲೂ ಹಿಂಜರಿಕೆಯಾಗುತ್ತದೆಸ್ಮಿತಾ (ಹೆಸರು ಬದಲಿಸಿದೆ) ವಿದ್ಯಾರ್ಥಿನಿ
ಶಾಲೆಯಲ್ಲಿ ನೀರಿನ ಸಮಸ್ಯೆ ತುಂಬಾಯಿದೆ. ಮಧ್ಯಾಹ್ನ ಊಟದ ನಂತರ ತಟ್ಟೆ ತೊಳೆಯಲು ಶಾಲೆಯ ಹೊರಗೆ ಹೋಗಿ ಬೇರೆಡೆ ನೀರು ಪಡೆದು ತಟ್ಟೆ ತೊಳೆದುಕೊಂಡು ಬರುತ್ತೇವೆವಿಶ್ವಾಸ (ಹೆಸರು ಬದಲಿಸಿದೆ) ವಿದ್ಯಾರ್ಥಿ
ಒಂದೇ ರೂಮ್‌ನಲ್ಲಿ ನೂರು ಜನ ಕೂತು ಪಾಠ ಕೇಳುತ್ತೇವೆ. ಅಲ್ಲಿ ಅಷ್ಟುಜನ ಕೂಡಲೂ ಜಾಗವಿರಲ್ಲ. ಆದರೂ ಹಾಗೇ ಕೂಡುತ್ತೇವೆ ಮತ್ತು ಪಾಠ ಕೇಳುತ್ತೇವುವಿನೋದ್ (ಹೆಸರು ಬದಲಿಸಿದೆ) ವಿದ್ಯಾರ್ಥಿ
ನಮ್ಮ ಶಾಲೆಯ ಶೌಚಾಲಯ ಸಮಸ್ಯೆಯನ್ನು ಬಗೆಹರಿಸಲು ಮತ್ತು ತಡೆಗೋಡೆ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ನೀಡಿದ್ದಾರೆ. ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲೇ ಕೆಲಸ ಪ್ರಾರಂಭಿಸುವುದಾಗಿ ಎಸ್‌ಡಿಎಂಸಿ ಅಧ್ಯಕ್ಷರು ತಿಳಿಸಿದ್ದಾರೆವೆಂಕಟಪ್ಪ ಮುಖ್ಯಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.