ಯಾದಗಿರಿ: ಜಿಲ್ಲೆಯಲ್ಲಿ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಇದ್ದು, ಆಯಾ ವಾರ್ಡ್‌ಗೆ ಸಂಬಂಧಿಸಿದಂತೆ ನಾಮಫಲಕಗಳ ಕೊರತೆ ಎದ್ದು ಕಾಣುತ್ತಿದೆ.
ಯಾದಗಿರಿ, ಶಹಾಪುರ, ಸುರಪುರ ನಗರಸಭೆಯ ವ್ಯಾಪ್ತಿಯಲ್ಲಿ ತಲಾ 31 ವಾರ್ಡ್‌ಗಳು ಬರುತ್ತವೆ. ಕಕ್ಕೇರಾ, ಕೆಂಭಾವಿ, ಗುರುಮಠಕಲ್ ಪುರಸಭೆ ವ್ಯಾಪ್ತಿಗೆ ತಲಾ 23 ವಾರ್ಡ್‌ಗಳು, ಹುಣಸಗಿ ಪಟ್ಟಣ ಪಂಚಾಯಿತಿ 16 ವಾರ್ಡ್‌ಗಳ ವಾಪ್ತಿ ಹೊಂದಿದೆ. ಕೆಲ ಸ್ಥಳೀಯ ಸಂಸ್ಥೆಯಲ್ಲಿ ಬಿಟ್ಟು, ಹಲವೆಡೆ ನಾಮಫಲಕಗಳೇ ಇಲ್ಲ.
ಒಂದು ಪ್ರದೇಶದ ಮಾಹಿತಿ ಪಡೆಯಲು ನಾಮಫಲಕಗಳು ಅವಶ್ಯ. ಅದು ತನ್ನ ವ್ಯಾಪ್ತಿ ಮತ್ತು ವಿಸ್ತಾರವನ್ನು ಸೂಚಿಸುತ್ತದೆ. ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಯಾವ ಬಡಾವಣೆ ಎಲ್ಲಿಗೆ ಸೇರ್ಪಡೆಯಾಗುತ್ತದೆ ಎನ್ನುವುದು ತಿಳಿಯದಂತಾಗಿದೆ.
ಜಿಲ್ಲೆಯೂ ಬಹು ಬೇಗ ವಿಸ್ತಾರ ಮತ್ತು ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿದೆ. ನಗರಸಭೆ, ಪುರಸಭೆಯ ವ್ಯಾಪ್ತಿಯ ಪ್ರದೇಶ ಹಿಗ್ಗಿಕೊಂಡಿದೆ. ಅಲ್ಲದೆ ಹೊಸ ಬಡಾವಣೆಗಳು ಉದಯಿಸುತ್ತಿವೆ. ಆದರೆ, ಬಡಾವಣೆಗೆ ತೆರಳಲು ಸೂಕ್ತ ಮಾರ್ಗಸೂಚಿ ನಾಮಫಲಕ ಅಳವಡಿಸಿಲ್ಲ. ಇದರಿಂದ ಹೊಸದಾಗಿ ಹಾಗೂ ಬೇರೆ ಪ್ರದೇಶದಿಂದ ಬಂದ ಜನತೆ ಪರದಾಡುವಂತೆ ಆಗಿದೆ.
2009ರಲ್ಲಿ ಯಾದಗಿರಿ ಪುರಸಭೆ ಇತ್ತು. ನಂತರ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ನಾಮಫಲಕಗಳು ಅಳವಡಿಸಿಲ್ಲ. ಅಲ್ಲದೇ ಅನಧಿಕೃತ ವೃತ್ತಗಳು, ಆಯಾ ಬಡಾವಣೆಗಳ ಹೆಸರು ಹೊಸದಾಗಿ ಹುಟ್ಟಿಕೊಳ್ಳುತ್ತಿವೆ.
ಚುನಾವಣೆ ಸಮಯದಲ್ಲಿ ಮಾತ್ರ ವಾರ್ಡ್ ಹೆಸರು ಬೆಳಕಿಗೆ ಬರುತ್ತದೆ. ನಾಗರಿಕರಿಗೆ ತಾವು ಯಾವ ವಾರ್ಡ್‌ನಲ್ಲಿ ವಾಸಿಸುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ. ಹೀಗಾಗಿ ತಮ್ಮ ಆಧಾರ್ ಕಾರ್ಡ್, ಓಟರ್ ಐಡಿಯಲ್ಲಿ ವಾರ್ಡ್ ಬದಲಿಗೆ ತಮ್ಮ ಬಡಾವಣೆ ಹೆಸರು ನಮೂದಿಸಿದ್ದಾರೆ.
‘ಆಯಾ ಪ್ರದೇಶಗಳ ಮಾಹಿತಿಗೆ ವಾರ್ಡ್ ಸಂಖ್ಯೆ, ಜನಸಂಖ್ಯೆ, ಮನೆ ಚಿತ್ರಣ ಸಿಗುತ್ತದೆ. ಚುನಾವಣೆ ಸಂದರ್ಭದಲ್ಲಿ ಎಷ್ಟು ಜನಸಂಖ್ಯೆ ಇದೆ ಎಂದು ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ವಾರ್ಡ್ ಆರಂಭವಾಗುವ ಪ್ರಮುಖ ಸ್ಥಳದಲ್ಲಿ ನಾಮಫಲಕ ಅಳವಡಿಸಬೇಕು. ಎಷ್ಟನೇ ರಸ್ತೆ ಎಂದು ನಮೂದಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದು ಇಂದಿನ ತುರ್ತು ಅಗತ್ಯವಿದೆ’ ಎಂದು ನಗರ ನಿವಾಸಿಗಳಾದ ನಾಗರಾಜ ಪತ್ತಾರ, ಗಂಗಾಧರ, ಹಣಮಂತ ನಾಯಕ ಒತ್ತಾಯಿಸುತ್ತಾರೆ.
ಹೋಬಳಿ ಇದ್ದಂತೆ ವಡಗೇರಾ: ವಡಗೇರಾ ತಾಲ್ಲೂಕು ಕೇಂದ್ರವಾಗಿ ಸುಮಾರು ಎಂಟು ವರ್ಷಗಳು ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಬಡಾವಣೆಗಳಲ್ಲಿ ನಾಮಫಲಕಗಳು ಇಲ್ಲ. ಈ ಹಿಂದೆ ಹೋಬಳಿ ಇದ್ದ ಸಮಯದಲ್ಲಿ ಹೇಗೆ ಇತ್ತೋ ಈಗಲೂ ಹಾಗೆಯೇ ಇದೆ.
ಹೊಸಬರು ಯಾರಾದರೂ ಪಟ್ಟಣಕ್ಕೆ ಬಂದರೆ ವಿಳಾಸಕ್ಕಾಗಿ ಬೇರೆಯವರನ್ನು ಕೇಳುವ ಮೂಲಕ ತಮಗೆ ಬೇಕಾದ ಬಡಾವಣೆಗೆ ಹೋಗುವದು ಅನಿವಾರ್ಯವಾಗಿದೆ. ಪಟ್ಟಣದಲ್ಲಿ ಎಲ್ಲಿಯು ಬಡಾವಣೆಯ ಹೆಸರುಳ್ಳ ನಾಮಫಲಕಗಳು ಕಣ್ಣಿಗೆ ಗೋಚರಿಸುವುದಿಲ್ಲ.
ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ತಾಲ್ಲೂಕು ಎಂದು ಘೋಷಣೆಯಾಗಿರುವ ವಡಗೇರಾದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಬೇಕಾಗಿದೆ.
ವಾರ್ಡ್, ಕ್ರಾಸ್ ಸಂಖ್ಯೆ ನಮೂದಿಸಿ: ಕೆಂಭಾವಿ ಪುರಸಭೆಯಾದಾಗಿನಿಂದ ಇಲ್ಲಿಯವರೆಗೆ ಯಾವ ಬಡಾವಣೆಗೂ ನಾಮಫಲಕ ಹಾಕಿಲ್ಲ. ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, ಅದರಲ್ಲಿ ಪರಸನಹಳ್ಳಿ ಮತ್ತು ಪತ್ತೇಪುರ ಸೇರಿಕೊಂಡಿದ್ದು, ದಶಕಗಳು ಕಳೆಯುತ್ತ ಬಂದಿದೆ. ಇಲ್ಲಿಯವರೆಗೆ ಯಾವ ವಾರ್ಡ್ ಎಲ್ಲಿಯವರೆಗಿದೆ ಮತ್ತು ವಾರ್ಡ್‌ಗಳ, ಕ್ರಾಸ್ ಸಂಖ್ಯೆಗಳನ್ನು ನಮೂದಿಸಿಲ್ಲ.
ಸರಿಯಾದ ರಸ್ತೆ ಹಾಗೂ ಚರಂಡಿಗಳನ್ನು ಮಾಡದ ಪುರಸಭೆ ಅಧಿಕಾರಿಗಳು, ಬಡಾವಣೆ ಗುರುತಿನ ಬೋರ್ಡ್ ಅಳವಡಿಸುತ್ತಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಕೆಟಗರಿ ನ್ಯಾಯಾಲಯದಲ್ಲಿದ್ದು, ಇದುವರೆಗೂ ಮೊದಲ ಅವಧಿಗೆ ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಲ್ಲ. ಹೀಗಾಗಿ ಅಧಿಕಾರಿಗಳೆ ಇಲ್ಲಿ ಎಲ್ಲ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದು ಪ್ರಭಾರದಲ್ಲಿ ಮುಂದುವರೆಯುತ್ತಿದ್ದು, ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ಹಲವು ಸದಸ್ಯರು ಹೇಳಿದ್ದಾರೆ.
ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಪವನ ಕುಲಕರ್ಣಿ, ನಾಮದೇವ ವಾಟ್ಕರ್, ಮಹಾಂತೇಶ ಹೊಗರಿ.
ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಆಯಾ ವಾರ್ಡ್‌ಗಳ ಸೂಚಿಸುವ ನಾಮಫಲಕ ಅಳವಡಿಕೆಗೆ ಚಿಂತನೆ ಇದ್ದು ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಲಾಗುವುದುಲಲಿತಾ ಅನಪುರ ನಗರಸಭೆ ಅಧ್ಯಕ್ಷೆ ಯಾದಗಿರಿ
ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು ನಾಮಫಲಕಗಳ ಅವಶ್ಯವಿದೆ. ನಾಮಫಲಕ ಅಳವಡಿಸುವುದರಿಂದ ಪ್ರಯಾಣಿಕರಿಗೆ ಸೇರಿದಂತೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆರಾಜೂ ಹವಾಲ್ದಾರ್ ಪುರಸಭೆ ಸದಸ್ಯ ಕಕ್ಕೇರಾ
ನಾಮಫಲಕ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದೆ. ಕೆಲ ಬಡಾವಣೆಗೆ ಫಲಕ ಅಳವಡಿಸಿದೆ. ಉಳಿದ ಬಡಾವಣೆಗಳಿಗೆ ಫಲಕ ಹಾಕಲಾಗುವುದುರಮೇಶ ಬಡಿಗೇರ ಪೌರಾಯುಕ್ತ ಶಹಾಪುರ
ನಮ್ಮ ಭಾಗದಲ್ಲಿ ವಾರ್ಡ್‌ಗಳಿಗೆ ಹಿಂದಿನಿಂದಲೂ ನಾಮಫಲಕ ಹಾಕುತ್ತಿಲ್ಲ. ನಾಮಫಲಕ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದುಜೀವನಕುಮಾರ ಕಟ್ಟಿಮನಿ ಪೌರಾಯುಕ್ತ ಸುರಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.