ಯಾದಗಿರಿ: ಜಿಲ್ಲೆಯಲ್ಲಿ ಹಲವಾರು ಪ್ರಸಿದ್ಧ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಇದ್ದು, ಅಲ್ಲಿ ಸರ್ಕಾರದ ವತಿಯಿಂದ ಯಾತ್ರಿ ನಿವಾಸಗಳನ್ನು ನಿರ್ಮಿಸಿ ಯಾತ್ರಿಕರಿಗೆ ಅನುಕೂಲ ಮಾಡಿಕೊಡಬೇಕಾಗಿತ್ತು. ಆದರೆ, ಆ ಕೆಲಸ ಇಲ್ಲಿಯವರೆಗೆ ಆಗಿಲ್ಲ.
ಜಿಲ್ಲೆಯು ಕೃಷ್ಣಾ, ಭೀಮಾ ನದಿ ಪಾತ್ರವನ್ನು ಹೊಂದಿದೆ. ರಾಜಮನೆತನಗಳು ಆಳ್ವಿಕೆ ನಡೆಸಿದ ಪ್ರದೇಶದಲ್ಲಿ ಆಯಾ ಕಾಲದ ಕೋಟೆ, ಕೊತ್ತಲು, ವಾಸ್ತುಶಿಲ್ಪ, ದೇವಸ್ಥಾನ, ಬಸದಿ, ಮಸೀದಿ, ಮಂದಿರ, ಚರ್ಚ್‌ಗಳು ಇವೆ. 2014–15ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.
ಪ್ರವಾಸಿಗರು ಕಡಿಮೆ ವೆಚ್ಚದಲ್ಲಿ ತಂಗಲು ಅನುಕೂಲವಾಗಲಿಯೆಂದೇ ಸರ್ಕಾರವು ಯಾತ್ರಿ ನಿವಾಸಗಳನ್ನು ನಿರ್ಮಿಸುತ್ತದೆ. ಆದರೆ, ಜಿಲ್ಲೆಯಲ್ಲಿ ಇದು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಕೆಲ ಕಡೆ ಕಾಮಗಾರಿ ಪೂರ್ಣಗೊಂಡರೂ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಇದರಿಂದಾಗಿ ಇದು ಜನರ ಬದಲು ಸ್ವಂತಕ್ಕೆ ಬಳಕೆಯಾಗುತ್ತಿವೆ.
ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ವಡಗೇರಾ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿಯವರೆಗೆ ಯಾತ್ರಿಗಳ ಬಳಕೆಗೆ ಇನ್ನೂ ನೀಡಿಲ್ಲ.
ಜಿಲ್ಲೆಯ ಯಾತ್ರಿ ನಿವಾಸಗಳು: ಸುರಪುರ ತಾಲ್ಲೂಕಿನ ದೇವರಗೋನಾಳ ಹೈಯಾಳಲಿಂಗೇಶ್ವರ ದೇವಸ್ಥಾನದ ಬಳಿ 2014–15ನೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಲ್) ಸಂಸ್ಥೆಯಿಂದ ₹48.85 ಲಕ್ಷ ವೆಚ್ಚದಲ್ಲಿ ಆರಂಭಗೊಂಡ ಯಾತ್ರಿ ನಿವಾಸ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ.
2014–15ನೇ ಸಾಲಿನ ಗುರುಮಠಕಲ್ ತಾಲ್ಲೂಕಿನ ದಬ್‌ದಭಿ ಜಲಾಶಯದ ಬಳಿ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಅಂದಾಜು ಪತ್ರಿಕೆ ಇನ್ನೂ ತಯಾರಾಗಿಲ್ಲ.
2016–17ನೇ ಸಾಲಿನಲ್ಲಿ ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಬಳಿ ಸಿಸಿ ರಸ್ತೆ ಮತ್ತು ಯಾತ್ರಿ ನಿವಾಸ ಎಸ್‌ಡಿಪಿ ವತಿಯಿಂದ ₹ 1 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದ್ದು, ಸಿಸಿ ರಸ್ತೆ ಮುಗಿದಿದೆ. ಯಾತ್ರಿ ನಿವಾಸ ಕಾಮಗಾರಿ ರೂಫ್ ಲೆವೆಲ್ ಹಂತದಲ್ಲಿದೆ. ಪ್ಲಾಸ್ಟರಿಂಗ್ ಕಾರ್ಯ ಬಾಕಿ ಇದೆ.
ಯಾದಗಿರಿಯ ಮುರುಗೇಂದ್ರ ದೇವಸ್ಥಾನದ ಹತ್ತಿರ ಯಾತ್ರಿ ನಿವಾಸ ಪೂರ್ಣಗೊಂಡಿದ್ದು, ಪ್ರವಾಸೋದ್ಯಮ ಇಲಾಖೆಗೆ ಇನ್ನೂ ಹಸ್ತಾಂತರವಾಗಿಲ್ಲ. ಹತ್ತಿಕುಣಿ ಜಲಾಶಯಕ್ಕೆ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.
2017–18ರಲ್ಲಿ ಗುರುಮಠಕಲ್ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಬ್ರಹ್ಮವಿದ್ಯಾಶ್ರಮ ಬಳಿ ಯಾತ್ರಿ ನಿವಾಸ ಛತ್ ಹಂತದಲ್ಲಿದೆ.
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಶರಭಲಿಂಗೇಶ್ವರ ದೇವಸ್ಥಾನದ ಬಳಿ ಯಾತ್ರಿ ನಿವಾಸ ಛತ್ ಹಂತದಲ್ಲಿದೆ. ಕೆಂಭಾವಿ ಪಟ್ಟಣದ ಚನ್ನಬಸವ ಮಹಾಸಂಸ್ಥಾನದ ಮಠ (ಹಿರೇಮಠ) ಬಳಿ ಯಾತ್ರಿ ನಿವಾಸ ಲಿಂಟಲ್ ಹಂತ ಮುಗಿದಿದೆ. ಉಳಿದ ಕಾಮಗಾರಿ ಬಾಕಿ ಇದೆ. ಗುರುಮಠಕಲ್ ಪಟ್ಟಣದ ಶಾಂತವೀರ ಮಠದ ಆವರಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಯಲ್ಲಿ ಯಾತ್ರಿ ನಿವಾಸ ಕಾಮಗಾರಿ ಬಾಕಿ ಇದೆ.
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರ ವಿಶ್ವಾರಾಧ್ಯ ಮಠದ ಬಳಿ ಯಾತ್ರಿ ನಿವಾಸ ರೂಫ್ ಹಂತದಲ್ಲಿದೆ. ಗುರಸಣಿಗಿ ಸಿದ್ದಲಿಂಗೇಶ್ವರ ದೇವಸ್ಥಾನದ ಬಳಿ ಯಾತ್ರಿ ನಿವಾಸ ಪ್ಲಾಸ್ಟರಿಂಗ್ ನಡೆದಿದೆ.
2017-18 ನೇ ಸಾಲಿನಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯನ್ನು ಬಿಟ್ಟರೆ ಬೇರೆ ಯಾವುದೇ ಸಂಸ್ಥೆಗೆ ಕಾಮಗಾರಿ ವಹಿಸಿಲ್ಲ.
ಸುರಪುರ: ಅರ್ಧಕ್ಕೆ ನಿಂತ ಯಾತ್ರಿ ನಿವಾಸಗಳು
ಸುರಪುರ: ಯಾತ್ರಿನಿವಾಸಗಳು ತಾಲ್ಲೂಕಿನಲ್ಲಿ ಅರ್ಧಕ್ಕೆ ನಿಂತಿವೆ. ಇದರಿಂದ ಪ್ರವಾಸಿಗರಿಗೆ ತಂಗಲು ಸರ್ಕಾರದಿಂದ ಸೂಕ್ತ ವ್ಯವಸ್ಥೆಯಿಲ್ಲ.
ಮುದನೂರಿನ ಕಂಠಿ ಕೋರಿಸಿದ್ದೇಶ್ವರ ಶಾಖಾಮಠದ ಆವರಣದಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಬೇಕಿದ್ದ ಯಾತ್ರಿನಿವಾಸದ ಕಾಮಗಾರಿ ಆರಂಭವಾಗಿಲ್ಲ. ತಿಂಥಣಿ ಮೌನೇಶ್ವರ ದೇವಸ್ಥಾನದ ಹತ್ತಿರದ ₹ 25 ಲಕ್ಷ ವೆಚ್ಚದ ಯಾತ್ರಿನಿವಾಸದ ಛತ್ತ ಕಾಮಗಾರಿ ಆಗಿದೆ.
ಕೆಂಭಾವಿ ಹೇಮರೆಡ್ಡಿ ಮಲ್ಲಮ್ಮ ಸಂಸ್ಥಾನ ಆವರಣದಲ್ಲಿ ₹ 50 ಲಕ್ಷ ವೆಚ್ಚದ ಯಾತ್ರಿನಿವಾಸದ ಕಾಮಗಾರಿ ಲಿಂಟಲ್ ಹಂತಕ್ಕೆ ನಿಂತಿದೆ. ಕೆಂಭಾವಿ ಚನ್ನಬಸವ ಸಂಸ್ಥಾನ ಹಿರೇಮಠದ ₹ 25 ಲಕ್ಷ ವೆಚ್ಚದ ಕಾಮಗಾರಿ ಲಿಂಟಲ್ ಹಂತ ತಲುಪಿದೆ. ದೇವರಗೋನಾಲ ಹಯ್ಯಾಳಲಿಂಗೇಶ್ವರ ದೇವಸ್ಥಾನದ ₹ 48 ಲಕ್ಷ ವೆಚ್ಚದ ಯಾತ್ರಿನಿವಾಸದ ಕಾಮಗಾರಿ ಮುಗಿದಿದ್ದು ಬಣ್ಣ ಹಚ್ಚಬೇಕಿದೆ.
ಎಲ್ಲ ಕಾಮಗಾರಿಗಳನ್ನು ಕೆಆರ್‌ಐಡಿಲ್ ಸಂಸ್ಥೆ ಮಾಡುತ್ತಿದ್ದು, ನಿಧಾನಗತಿಯ ಕೆಲಸಕ್ಕೆ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ತಂಗಲು ಅನುಕೂಲವಾಗುವಂತೆ ಶೀಘ್ರ ಕಾಮಗಾರಿ ಮುಗಿಸುವಂತೆ ಭಕ್ತರು ಅಗ್ರಹಿಸಿದ್ದಾರೆ.
ಕೆಲ ವ್ಯಕ್ತಿಗಳ ಸ್ವತ್ತಾದ ಯಾತ್ರಿ ನಿವಾಸ!
ಶಹಾಪುರ: ನಗರದ ಚರಬಸವೇಶ್ವರ ದೇವಸ್ಥಾನದ ಬಳಿ, ತಾಲ್ಲೂಕಿನ ಭೀಮರಾಯನಗುಡಿ, ರಸ್ತಾಪುರ ಗ್ರಾಮದ ಶರಬಲಿಂಗೇಶ್ವರ ದೇವಸ್ಥಾನದ ಹತ್ತಿರ ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಬುದ್ಧ ವಿಹಾರದ ಬಳಿಯ ಮಾವಿನ ಕೆರೆ ಸುತ್ತಮುತ್ತ ಸಸಿಗಳನ್ನು ನೆಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ.
ವಾಸ್ತವವಾಗಿ ಯಾತ್ರಿ ನಿವಾಸಗಳು ಸಾರ್ವಜನಿಕರ ಸ್ವತ್ತು ಆಗದೆ ಮಠ ಇಲ್ಲವೆ, ದೇವಸ್ಥಾನದ ಸ್ವತ್ತುಗಳಾಗಿ ಮಾರ್ಪಟ್ಟಿವೆ. ಅದೇ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಯಾತ್ರಿ ನಿವಾಸಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ಕಡಿಮೆ ಹಣದಲ್ಲಿ ಸದ್ಭಳಕೆಯಾಗುತ್ತವೆ. ಆದರೆ, ನಮ್ಮಲ್ಲಿ ಮಾತ್ರ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಹಣದಿಂದ ವೆಚ್ಚಮಾಡಿದ ಯಾತ್ರಿ ನಿವಾಸವು ಕೆಲ ವ್ಯಕ್ತಿಗಳಿಗೆ ಲಾಭ ತರುವ ಕಟ್ಟಡ ಆಗಿ ಮಾರ್ಪಟ್ಟಿವೆ. ಯಾತ್ರಿ ನಿವಾಸದ ಮೂಲ ಧ್ಯೇಯ ಇಲ್ಲಿ ಮರೆಯಾಗುತ್ತಿದೆ. ಸಮಗ್ರ ಬದಲಾವಣೆ ಮಾಡುವುದು ಅಗತ್ಯವಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಯಲ್ಲಯ್ಯ ನಾಯಕ ವನದುರ್ಗ.
‘ಯಾತ್ರಿ ನಿವಾಸ ಕಟ್ಟಡ ನಿರ್ಮಿಸಿದರೆ ಸಾಲದು ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಅದರ ನಿರ್ವಹಣೆಗಾಗಿ ಹಣ ಮೀಸಲಿಡಬೇಕು. ಮಲೆನಾಡು ಪ್ರದೇಶದಲ್ಲಿ ಇರುವಷ್ಟು ಸ್ವಚ್ಛತೆ ಹಾಗೂ ಕಾಳಜಿ ನಮ್ಮಲ್ಲಿ ಅರಿವಿನ ಕೊರತೆ ಇದೆ. ಅದರ ಬಗ್ಗೆ ಜಾಗೃತಿ ಮೂಡಿಸಬೇಕು. ಹೆದ್ದಾರಿ ಹಾಗೂ ಪ್ರಮುಖ ಜನನಿಬಿಡದ ಪ್ರದೇಶದಲ್ಲಿ ಯಾತ್ರಿ ನಿವಾಸ ಇದೆ ಎಂಬ ನಾಮಫಲಕ ಒಳಗೊಂಡ ಮಾಹಿತಿ ಇರಬೇಕು. ಇದರಿಂದ ಯಾತ್ರಿ ನಿವಾಸಿಗರು ತಂಗಲು ಅನುಕೂಲವಾಗುತ್ತದೆ. ಅಲ್ಲದೆ ಪ್ರವಾಹ ಹಾಗೂ ಇನ್ನಿತರ ಸಂಕಷ್ಟ ಕಾಲದಲ್ಲಿ ಯಾತ್ರಿ ನಿವಾಸಗಳನ್ನು ಸದ್ಭಳಕೆ ಮಾಡಿಕೊಳ್ಳಲು ನೆರವಾಗುತ್ತವೆ’ ಎನ್ನುತ್ತಾರೆ ಸಾರ್ವಜನಿಕರು.
ಒಂದೂವರೆ ವರ್ಷದಿಂದ ಕಾಯಂ ಅಧಿಕಾರಿ ಇಲ್ಲ!:
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಐದು ಹುದ್ದೆಗಳಿವೆ. ಸಹಾಯಕ ನಿರ್ದೇಶಕ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ, ಡಾಟಾ ಎಂಟ್ರಿ ಆಪರೇಟರ್, ಸಿಪಾಯಿ ಸೇರಿ 5 ಹುದ್ದೆಗಳಿವೆ. ಆದರೆ, ಎಲ್ಲರೂ ಪ್ರಭಾರಿಗಳೇ!
ಕಳೆದ ಒಂದೂವರೆ ವರ್ಷದಿಂದ ಸಹಾಯಕ ನಿರ್ದೇಶಕ ಹುದ್ದೆ ಪ್ರಭಾರಿ ಅಧಿಕಾರಿಗಳಿಂದ ನಡೆಯುತ್ತಿದೆ. 2020ರ ಮಾರ್ಚ್ ನಂತರ ಕಾಯಂ ಅಧಿಕಾರಿ ಇಲ್ಲದಂತೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.