ADVERTISEMENT

ಮಳೆ ಕೊರತೆ | ಬೆಳೆ ಒಣಗುವ ಭೀತಿ: ಸಂಕಷ್ಟದಲ್ಲಿ ಹತ್ತಿ, ತೊಗರಿ ಬೆಳೆಗಾರರು

ಭೀಮಶೇನರಾವ ಕುಲಕರ್ಣಿ
Published 18 ಜುಲೈ 2024, 5:17 IST
Last Updated 18 ಜುಲೈ 2024, 5:17 IST

ಹುಣಸಗಿ ತಾಲ್ಲೂಕಿನ ಮಾರಲಬಾವಿ ಗ್ರಾಮದಲ್ಲಿ ಹತ್ತಿ ಹೊಲದಲ್ಲಿ ಎಡಿಕುಂಟಿ ಹೊಡೆಯುತ್ತಿರುವ ರೈತ

ಹುಣಸಗಿ ತಾಲ್ಲೂಕಿನ ಮಾರಲಬಾವಿ ಗ್ರಾಮದಲ್ಲಿ ಹತ್ತಿ ಹೊಲದಲ್ಲಿ ಎಡಿಕುಂಟಿ ಹೊಡೆಯುತ್ತಿರುವ ರೈತ

ಹುಣಸಗಿ: ತಾಲ್ಲೂಕಿನಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬಿದ್ದ ಕಾರಣ ಮಳೆಯಾಶ್ರಿತ ಪ್ರದೇಶದಲ್ಲಿ ಉತ್ಸಾಹದಿಂದ ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಿದ್ದ ರೈತರು ಕಳೆದ ಮೂರು ವಾರಗಳಿಂದ ಮುಗಿಲು ನೋಡುವಂತಾಗಿದೆ.

ADVERTISEMENT

ತಾಲ್ಲೂಕಿನ ಕೊಡೇಕಲ್ಲ, ಮಂಜಲಾಪುರ, ಶ್ರೀನಿವಾಸಪುರ, ಕನಗಂಡನಹಳ್ಳಿ, ಗುಂಡಲಗೇರಾ, ರಾಜನಕೋಳುರು, ಮಾರಲಬಾವಿ, ಬಪ್ಪರಗಿ, ಹೊರಟ್ಟಿ, ಮದಲಿಂಗನಾಳ, ಮಾರನಾಳ, ಎಣ್ಣಿವಡಗೇರಾ ಸೇರಿದಂತೆ ಇತರ ಗ್ರಾಮಗಳಲ್ಲಿ ಮುಂಗಾರು ಪೂರ್ವ ಮಳೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಿತ್ತು. ಬಿತ್ತನೆ ಮಾಡಿದ್ದ ಬೆಳೆ ಕೂಡಾ ಚೆನ್ನಾಗಿ ಬಂದಿದೆ. ಮುಂದಿನ ಒಂದು ವಾರದಲ್ಲಿ ಮಳೆ ಬರದಿದ್ದಲ್ಲಿ ಬಿತ್ತಿದ ಬೆಳೆ ಸಂಪೂರ್ಣ ಒಣಗಿ ಹೋಗಲಿದೆ ಎಂಬ ಆತಂಕ ರೈತರದ್ದಾಗಿದೆ.

ಕಳೆದ ಒಂದು ವಾರದಿಂದಲೂ ಮೋಡ ಕವಿದ ವಾತಾವರಣವಿದೆ. ಆದರೆ ಒಂದು ಹನಿ ಕೂಡಾ ಇಳೆಗೆ ಮಳೆ ಸುರಿದಿಲ್ಲ. ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ ಬಾಡುತ್ತಿದೆ. ಟ್ರಾಕ್ಟರ್ ಮೂಲಕ ಎಡೆ ಹೊಡೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೊಲಕ್ಕೆ ಹೋದರೇ ತೇವಾಂಶ ಕೊರತೆಯಿಂದಾಗಿ ಬೆಳೆ ಒಣಗುತ್ತಿರುವುದು ನೋಡಿ ಕಣ್ಣೀರು ಬರುತ್ತಿದೆ ಎಂದು ಮಾರಲಬಾವಿ ಗ್ರಾಮದ ರೈತರಾದ ಹುಲಗಪ್ಪ ಬುದಿಹಾಳ, ಹುಲಗಪ್ಪ ಕರಿಗೌಡ್ರ, ಪ್ರಕಾಶ ಬಡಿಗೇರ ತಿಳಿಸಿದರು.

ಸಾವಿರಾರು ರೂಪಾಯಿ ಖರ್ಚು ಮಾಡಿ ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಲಾಗಿದೆ. ಆದರೆ ಮಳೆಯ ದಾರಿ ಕಾಯುತ್ತಿದ್ದು, ದೇವರು ರೈತರ ಕೈಹಿಡಿಯುತ್ತಾನೆ ಎಂಬ ನಂಬಿಕೆ ಇದೆ ಎಂದು ಕೊಡೇಕಲ್ಲ ಗ್ರಾಮದ ಮಲ್ಲು ಜಂಗಳಿ ಹಾಗೂ ರಮೇಶ ಬಿರಾದಾರ, ಪರಶು ಗೋಲಗೌಡ್ರ ಆಶಾಭಾವನೆ ವ್ಯಕ್ತ ಪಡಿಸಿದರು.

ವಾಡಿಕೆಗಿಂತ ಶೇ 79 ರಷ್ಟು ಕಡಿಮೆ ಮಳೆ: ಮಾನ್ಸೂನ್ ಆರಂಭದಿಂದ ಜುಲೈ 14ರವರೆಗೆ ಒಟ್ಟು ವಾಡಿಕೆ 267 ಮಿಮೀ ಮಳೆ ಆಗಬೇಕಿತ್ತು. ಆದರೆ ಈ ಬಾರಿ ಇಲ್ಲಿಯವರೆಗೆ 149 ಮಿಮಿ ಮಳೆಯಾಗಿದ್ದು, ಶೇ 79 ರಷ್ಟು ಕಡಿಮೆ ಮಳೆಯಾಗಿದೆ. ಇದರಿಂದಾಗಿ ಅಲ್ಲಲ್ಲಿ ತೇವಾಂಶ ಕೊರತೆ ಎದುರಾಗಿದೆ ಎಂದು ಹುಣಸಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.