ಶಹಾಪುರ: ತಾಲ್ಲೂಕು ವಕೀಲರ ಸಂಘದ ಆಡಳಿತ ಅವಧಿ ಮಾರ್ಚ್ 31ಕ್ಕೆ ಮುಗಿದಿದೆ. ಪ್ರಸಕ್ತ 2022-23 ರ ಸಂಘದ ಆಡಳಿತ ಮಂಡಳಿ ಆಯ್ಕೆ ಅಂಗವಾಗಿ ಚುನಾವಣೆಗೆ ಸಿದ್ಧಗೊಳಿಸುವಂತೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದರೂ ಸಂಘದ ಅಧ್ಯಕ್ಷರು ಯಾವುದಕ್ಕೂ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಕೀಲ ಯೂಸೂಬ್ ಸಿದ್ಧಿಕಿ ಆರೋಪಿಸಿದರು.
ನಗರದ ವಕೀಲರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮೊದಲಿನಿಂದಲೂ ಇಲ್ಲಿನ ವಕೀಲರ ಸಂಘ ಪ್ರತಿ ವರ್ಷಕ್ಕೆ ಒಮ್ಮೆ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಸುತ್ತಾ ಬರಲಾಗಿದೆ. ಪ್ರಸಕ್ತ ವರ್ಷ ಈ ಸಮಯದಲ್ಲಿ ಚುನಾವಣೆ ನಡೆಸಬೇಕಿತ್ತು. ಆದರೆ ಪ್ರಸ್ತುತ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಚುನಾವಣೆ ನಡೆಸಲು ಸಿದ್ಧರಿರುವದಿಲ್ಲ. ಸದಸ್ಯರು ನೀಡಿದ ಯಾವುದೆ ನೋಟಿಸ್‌ಗೆ ಉತ್ತರ ನೀಡುತ್ತಿಲ್ಲ. ಸರ್ವಾಧಿಕಾರಿ ಧೋರಣೆ ತೋರುತ್ತಿರುವದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ವಕೀಲರ ಸರ್ವ ಸದಸ್ಯರ ಸಭೆಯಲ್ಲಿ ಮೊದಲಿನ ನಿರ್ಣಯ ಕೈಗೊಂಡಂತೆ ಪ್ರತಿ ವರ್ಷಕ್ಕೆ ಒಮ್ಮೆ ಚುನಾವಣೆ ನಡೆಯಬೇಕು. ಇಲ್ಲವಾದಲ್ಲಿ ಇದೇ ಏ.22 ರಂದು ಹಿರಿಯ ವಕೀಲರ ಸಮ್ಮುಖದಲ್ಲಿ ಸಭೆ ಕರೆದು ಅಡಳಿತ ಮಂಡಳಿಯ ವಿರುದ್ಧ ಅವಿಶ್ವಾಸ ಮಂಡನೆ ಕುರಿತು ಚರ್ಚಿಸಲಾಗುವುದು. ಹಿರಿಯರ ಸಲಹೆಯಂತೆ ಮುಂದಿನ ನಿರ್ಧಾರಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ವಕೀಲ ಸಂತೋಷ ದೇಶಮುಖ ಮಾತನಾಡಿ, ಸಂಘದಲ್ಲಿ 158 ಸದಸ್ಯರಿದ್ದು ಅದರಲ್ಲಿ 67 ಕ್ಕೂ ಹೆಚ್ಚು ಸದಸ್ಯರು ಸಹಿ ಮಾಡಿದ ಪತ್ರವನ್ನು ಸಿದ್ಧಪಡಿಸಿ ಏ.22 ರಂದು ಕರೆದ ಹಿರಿಯರ ಸಭೆಯಲ್ಲಿ ಭಾಗವಹಿಸಿ ಚುನಾವಣೆ ನಡೆಸುವ ಕುರಿತು ಮತ್ತು ಅವಿಶ್ವಾಸ ಮಂಡನೆ ಬಗ್ಗೆ ಚರ್ಚಿಸಲು ಆಸಕ್ತವಹಿಸಿದ್ದಾರೆ ಎಂದರು. ವಕೀಲ ಮಲ್ಲಿಕಾರ್ಜುನ ಬಕ್ಕಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.