ADVERTISEMENT

ಯಾದಗಿರಿ | ಯಮನ ರೂಪದಲ್ಲಿ ಬಂದ ಸಿಡಿಲು: ಒಂದೇ ಕುಟುಂಬದ ಮೂವರು ಸೇರಿ 4 ಮಂದಿ ಸಾವು

ಬಿ.ಜಿ.ಪ್ರವೀಣಕುಮಾರ
Published 24 ಸೆಪ್ಟೆಂಬರ್ 2024, 5:02 IST
Last Updated 24 ಸೆಪ್ಟೆಂಬರ್ 2024, 5:02 IST
<div class="paragraphs"><p>ಯಾದಗಿರಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಸ್ಥರ ಆಕ್ರಂದನ</p></div>

ಯಾದಗಿರಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಸ್ಥರ ಆಕ್ರಂದನ

   

ಯಾದಗಿರಿ: ಜಿಲ್ಲಾ ಕೇಂದ್ರದಿಂದ ಸುಮಾರು 12 ಕಿ.ಮೀ ಅಂತರದಲ್ಲಿರುವ ಪುಟ್ಟ ತಾಂಡಾ ಜಿನಕೇರಾ. ಕೃಷಿಯೇ ಅಲ್ಲಿಯ ಜೀವಾಳ. ಸೋಮವಾರ ಕೃಷಿ ಕಾಯಕದಲ್ಲಿ ತೊಡಗಿದ್ದ ತಾಂಡಾದ ಒಂದೇ ಕುಟುಂಬದ ಮೂವರು ಸೇರಿ ನಾಲ್ಕು ಮಂದಿ ಸಿಡಿಲಿಗೆ ಬಲಿಯಾಗಿದ್ದು, ಆ ಕುಟುಂಬಗಳಿಗೆ ಬರ ಸಿಡಿಲು ಬಡಿದಂತಾಗಿದೆ.

ಹೌದು. ಇದು ಯಾದಗಿರಿ ತಾಲ್ಲೂಕಿನ ಜಿನಕೇರಾ ತಾಂಡಾದಲ್ಲಿ ಸೋಮವಾರ ಸಂಜೆ ತಾಂಡಾವೇ ಸ್ತಬ್ಧವಾದ ಸನ್ನಿವೇಶ ಸೃಷ್ಟಿಯಾಗಿತ್ತು. ಹೊಟ್ಟೆ ಪಾಡಿಗೆ ತಮಗೆ ಇದ್ದ ಅಲ್ಪ ಜಮೀನಿನಲ್ಲಿ ಈರುಳ್ಳಿ ನಾಟಿ ಮಾಡಿ ಬದುಕು ಕಟ್ಟಿಕೊಳ್ಳಲು ಅಣಿಯಾಗಿದ್ದಾಗ ಸಿಡಿಲು ಆ ನಾಲ್ವರ ಜೀವವನ್ನು ಕಸಿದುಕೊಂಡಿದೆ.

ADVERTISEMENT

ಬೆಳಿಗ್ಗೆಯಿಂದ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಕುಟುಂಬಸ್ಥರು ಸೋಮವಾರ ಮಧ್ಯಾಹ್ನ ವೇಳೆಗೆ ಆರಂಭವಾದ ಮಳೆಯಿಂದ ರಕ್ಷಿಸಿಕೊಳ್ಳಲು ಜಮೀನಿನಲ್ಲಿರುವ ಹುಣಸೆ, ಬೇವಿನ ಮರ, ಚಿಕ್ಕ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದಿದ್ದು, ಘಟನೆಯಲ್ಲಿ ಕಿಶನ್‌ ನಾಮಣ್ಣ ಜಾಧವ (25), ಚನ್ನಪ್ಪ ನಾಮಣ್ಣ ಜಾಧವ (24), ನೇನು ನಿಂಗಪ‍್ಪ ಜಾಧವ (15), ಸುಮಾಬಾಯಿ ರಾಠೋಡ (27) ಉಸಿರು ನಿಲ್ಲಿಸಿದ್ದಾರೆ.

ಗುಡುಗು, ಸಿಡಿಲಿನೊಂದಿಗೆ ಮಳೆ ಅರಂಭವಾದಾಗ ಜಮೀನಿನ ಕೆಲಸ ಬಿಟ್ಟು ಮರ ಮತ್ತು ದುರುಗಮ್ಮ ದೇವಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಆಗ ಆರ್ಭಟಿಸಿದ ಸಿಡಿಲು ಮರ, ದೇವಸ್ಥಾನದ ಬಳಿ ಆಶ್ರಯ ಪಡೆದಿದ್ದ ಮೂವರನ್ನು ಸ್ಥಳದಲ್ಲೇ ಆಹುತಿ ಪಡೆದಿದೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಉಸಿರು ಚೆಲ್ಲಿದ್ದಾರೆ. ಮೋನಪ್ಪ, ಗಣೇಶ್‌, ಲಕ್ಷ್ಮಿ, ದರ್ಶನ್‌, ಗುಬ್ಬಿಬಾಯಿ, ಸೇಬಿಬಾಯಿ, ನೀಲಿಬಾಯಿ, ನಾಮಣ್ಣ ಸಿಡಿಲಿನ ಆಘಾತದಲ್ಲಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರೆಲ್ಲರೂ 30 ಹರೆಯದವರು. ಅದರಲ್ಲಿ ಕಿಶನ್‌ ನಾಮಣ್ಣ ಜಾಧವ‌ ಅವರಿಗೆ ಒಬ್ಬ ಪುತ್ರಿ, ಸುಮಾಬಾಯಿ ರಾಠೋಡ ಅವರಿಗೆ ಒಬ್ಬ ಪುತ್ರ, ಪುತ್ರಿ ಇದ್ದಾರೆ. ಮತ್ತಿಬ್ಬರಿಗೆ ವಿವಾಹವಾಗಿರಲಿಲ್ಲ.

ತಾಂಡಾದಲ್ಲಿ ಸ್ಮಶಾನ ಮೌನ; ಗ್ರಾಮಸ್ಥರ ಕಂಬನಿ: ಸಿಡಿಲಿನಿಂದ ನಾಲ್ವರು ಸಾವನ್ನಪ್ಪಿರುವ ಸುದ್ದಿ ತಾಂಡಾದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಗಾಯಗೊಂಡವರನ್ನು ಆಟೊ ದಲ್ಲಿ ಸಾಗಿಸಲು ಸಿದ್ಧತೆ ನಡೆದಿತ್ತು. ಆಂಬುಲೆನ್ಸ್‌ ಬಂದ ನಂತರ ಅಲ್ಲಿಂದ ರವಾನಿಸಿದ್ದಾರೆ. ಆನಂತರ ಶವಗಳನ್ನು ಗೂಡ್ಸ್‌ ಆಟೊದಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಾಂಡಾ ನಿವಾಸಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಮೃತರ ಮರಣೋತ್ತರ ಪರೀಕ್ಷೆಯ ನಂತರ ಮಂಗಳವಾರ ಅಂತ್ಯಸಂಸ್ಕಾರ ನಡೆಯಲಿದೆ.

‘ತಾಂಡಾದಲ್ಲಿ ಸಣ್ಣ ರೈತರೇ ಹೆಚ್ಚಿದ್ದು, ಕೃಷಿ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದರು.  ಒಂದೇ ಕುಟುಂಬದ ಮೂವರು, ಸಂಬಂಧಿಕರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೃತರ ವಿಷಯ ಕೇಳಿ ತಂದೆ, ತಾಯಿ, ಪತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಿಗೆ ಸಣ್ಣ ಮಕ್ಕಳಿದ್ದು, ಅವರ ಮುಂದಿನ ಭವಿಷ್ಯಕ್ಕಾಗಿ ಸರ್ಕಾರ ನೆರವಿಗೆ ಧಾವಿಸಬೇಕು’ ಎಂದು ನಾಯಕಿ ಸುನೀತಾ ಚವಾಣ್‌, ಶಂಕರಪ್ಪ ಒತ್ತಾಯಿಸಿದರು.

ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ

ಯಾದಗಿರಿ ಲಕ್ಷ್ಮಿನಗರದ ಏರಿಯಾದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆ ನಿಂತ ದೃಶ್ಯ

ಯಾದಗಿರಿ: ನಗರದಲ್ಲಿ ಸೋಮವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದ ವೇಳೆಗೆ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿಯಿತು.

ನಗರದಲ್ಲಿ ಸುಮಾರು ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ಅರ್ಧ ತಾಸು ಸುರಿಯಿತು. ಇದರಿಂದ ತಗ್ಗು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿತು. ನಿವಾಸಿಗಳು ಹೊಲಸು ನೀರನ್ನು ಹೊರ ಹಾಕಿದರು.

ರೈಲ್ವೆ ಸ್ಟೇಷನ್‌ ರಸ್ತೆಯಿಂದ ಹಳೆ ಬಸ್‌ ನಿಲ್ದಾಣಕ್ಕೆ ತೆರಳುವ ಮನೆಗಳ ಒಳಗೆ‌ ನುಗ್ಗಿದ ಚರಂಡಿಯ ಹೊಲಸು ನೀರನ್ನು ಹೊರ ಚೆಲ್ಲಲು ಮನೆಯವರು ಹರಸಾಹಸ ಪಡುತ್ತಿದ್ದರು.

‘ಕೆಲ‌ ಮನೆಯ ಮಾಲೀಕರು ಚರಂಡಿಯ ನೀರು ಹರಿದಂತೆ ಚರಂಡಿಗಳನ್ನು ಮುಚ್ಚಿರುವುದರಿಂದ ಈ ಸಮಸ್ಯೆ ಉಂಟಾಗಿದೆ’ ಎಂದು ಬಡಾವಣೆಯ ನಿವಾಸಿ ಅನುಸೂಯಾ ಹೇಳಿದರು.

ಲಕ್ಷ್ಮೀನಗರದ ಏರಿಯಾದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆ ನಿಂತು ಸಂಚಾರಕ್ಕೆ ಅನಾನುಕೂಲವಾಯಿತು. ವಿಶ್ವರಾಧ್ಯ ನಗರದಲ್ಲಿ ಮಳೆ‌ನೀರು ನಿಂತು ಕೆಸರುಮಯವಾಗಿತ್ತು. ಚರಂಡಿ ಕಟ್ಟಿಕೊಂಡ ಪರಿಣಾಮ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತ ಸಮೀಪದಲ್ಲಿ ನೀರು ರಸ್ತೆ ಮೇಲೆ ನಿಂತಿತ್ತು.

ಇನ್ನೂ ನಗರವಲ್ಲದೇ ಶಹಾಪುರ, ಸುರಪುರ, ಸೈದಾಪುರದಲ್ಲಿ ಉತ್ತಮ ಮಳೆಯಾಗಿದೆ. ಹುಣಸಗಿ, ಕೆಂಭಾವಿ, ನಾರಾಯಣಪುರದಲ್ಲಿ ತುಂತುರು ಮಳೆಯಾಗಿದೆ.

ಸಿಡಿಲು ಬಡಿದು ಯಾದಗಿರಿ ತಾಲ್ಲೂಕಿನ ಆರ್.ಹೊಸಳ್ಳಿ ಗ್ರಾಮದಲ್ಲಿ ನಾಗಪ್ಪ ಅವರಿಗೆ ಸೇರಿದ 12 ಕುರಿಗಳು ಸಾವನ್ನಪ್ಪಿವೆ.

ಕಂದಾಯ, ಪೊಲೀಸ್‌ ಅಧಿಕಾರಿಗಳ ಭೇಟಿ

ಸಿಡಿಲಿನ ಘಟನೆ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.

ಯಾದಗಿರಿ ತಹಶೀಲ್ದಾರ್‌ ಸುರೇಶ ಅಂಕಲಗಿ, ಯಾದಗಿರಿ ಗ್ರಾಮೀಣ ಠಾಣೆ ಪಿಎಸ್‌ಐ ಹಣಮಂತ ಬಂಕಲಗಿ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. 

ಗಾಯಾಳುಗಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಗಂಭೀರ ಗಾಯಗೊಂಡ ಬಾಲಕನನ್ನು ಮಾತ್ರ ಕಲಬುರಗಿಗೆ ರವಾನಿಸಲಾಗಿದೆ. ಉಳಿದರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಡಾ.
ರಿಜ್ವಾನ ಆಫ್ರಿನ್‌, ಜಿಲ್ಲಾ ಶಸ್ತ್ರಚಿಕಿತ್ಸಕಿ, ಜಿಲ್ಲಾ ಆಸ್ಪತ್ರೆ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.