ADVERTISEMENT

ಲಿಂಗಸುಗೂರು: ಕುಡಿಯುವ ನೀರಿನ ಸಮಸ್ಯೆ ಉಲ್ಬಣ: ಪರದಾಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 6:27 IST
Last Updated 9 ಜೂನ್ 2024, 6:27 IST
   

ಲಿಂಗಸುಗೂರು: ತಾಲ್ಲೂಕಿನ ಮಾವಿನಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುನಕುಂಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೊಡ ನೀರಿಗಾಗಿ ಜನ ಪರದಾಡುವಂತಾಗಿದೆ.

ವಿದ್ಯುತ್ ಕಣ್ಣಾ ಮುಚ್ಚಾಲೆಗೆ ಕಿರು ನೀರು ಸರಬರಾಜು ಯೋಜನೆಯಡಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಮಳೆಗಾಲ ಆರಂಭಗೊಂಡರೂ ಅಂತರ್ಜಲಮಟ್ಟ ಹೆಚ್ಚದ ಕಾರಣ ತೆರೆದ ಬಾವಿಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಿಗುತ್ತಿಲ್ಲ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕೋಟ್ಯಂತರ ಹಣ ಖರ್ಚು ಮಾಡಿದ್ದರೂ ಗ್ರಾಮಕ್ಕೆ ಕೊಡ ನೀರು ಪೂರೈಕೆ ಆಗಿಲ್ಲ. ಅವೈಜ್ಞಾನಿಕ ಕೆರೆ ನಿರ್ಮಾಣದಿಂದಾಗಿ ಕಲುಷಿತ ನೀರು ಸಂಗ್ರಹಗೊಳ್ಳುತ್ತಿದೆ. ಇದು ಗ್ರಾಮಸ್ಥರಿಗೆ ಶಾಪವಾಗಿ ಪರಿಣಮಿಸಿದೆ.

ADVERTISEMENT

ವಿದ್ಯುತ್ ಸಂಪರ್ಕ ಇದ್ದರೆ ಮಾತ್ರ ಬಳಕೆಗೆ ನೀರು. ನಾಲ್ಕು ದಿನಗಳಿಂದ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ನೀರು ಪೂರೈಕೆ ವ್ಯತ್ಯಯಗೊಂಡಿದೆ. ಕುಡಿಯುವ ನೀರಿಗೆ ತೆರೆದ ಬಾವಿಗಳಿಗೆ ಹೋದರೆ ಅಂತರ್ಜಲಮಟ್ಟ ಕುಸಿತದಿಂದ ತಾಸಿಗೆ ಆರೇಳು ಕೊಡ ಮಾತ್ರ ದೊರಕುತ್ತದೆ. ದಿನಗಟ್ಟಲೆ ಕಾದು ನೀರು ತಂದುಕೊಳ್ಳುವಂತಾಗಿದೆ.

ನಿತ್ಯ ಚಕ್ಕಡಿ, ಆಟೊ, ಟಂಟಂ, ಒತ್ತುವ ಬಂಡಿ ಬಳಸಿ ಹೊರವಲಯದ ತೋಟಗಳಿಗೆ ತೆರಳಿ ನೀರು ತಂದುಕೊಳ್ಳಬೇಕು. ಪರ್ಯಾಯ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಮತ್ತು ಜಿಲ್ಲಾಡಳಿತದ ಬಾಗಿಲು ತಟ್ಟಿದರೂ ಪ್ರಯೋಜನವಾಗುತ್ತಿಲ್ಲ ಎಂದು ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಾವಿನಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುನಕುಂಟಿ ಗ್ರಾಮ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಅಧಿಕಾರಿಗಳ ಮಲತಾಯಿ ಧೋರಣೆಯಿಂದ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದೇವೆ’ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಸಂಜೀವಪ್ಪ ಚಲವಾದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅಂತರ್ಜಲಮಟ್ಟ ಕುಸಿದು ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಕುರಿತು ಗಮನಕ್ಕೆ ತಂದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೊಡ ನೀರಿಗೆ ತಾಸುಗಟ್ಟಲೆ ತೆರೆದ ಬಾವಿ ಮೇಲೆ ಕಾದು ಕುಳಿತುಕೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಗೌಡ ಪಾಟೀಲ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.