ADVERTISEMENT

98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ತೀರ್ಪು ಸ್ವಾಗತಾರ್ಹ: ಮಲ್ಲಿಕಾರ್ಜುನ ಕ್ರಾಂತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:44 IST
Last Updated 26 ಅಕ್ಟೋಬರ್ 2024, 14:44 IST
   

ಸುರಪುರ: ‘ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ಈ ಹಿಂದೆ ಜರುಗಿದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಮಹತ್ತರ ತೀರ್ಪು ಸ್ವಾಗತಾರ್ಹವಾಗಿದೆ’ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014 ಆಗಸ್ಟ್ 28 ರಂದು ಕ್ಷುಲ್ಲಕ ಕಾರಣಕ್ಕಾಗಿ ದಲಿತ ಕೇರಿಗೆ ನುಗ್ಗಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಲ್ಲದೆ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಮೇಲ್ವರ್ಗದವರು ಅಟ್ಟಹಾಸ ಮಾಡಿದ ಬಗ್ಗೆ ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು’ ಎಂದು ತಿಳಿಸಿದರು.

‘ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸುಮಾರು 10 ವರ್ಷಗಳಿಂದ ವಿಚಾರಣೆ ನಡೆಸಿ, ಅ.21 ರಂದು ತೀರ್ಪು ಕೊಟ್ಟು 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಇನ್ನುಳಿದ 3 ಜನರಿಗೆ 5 ವರ್ಷ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆದೇಶ ಮಾಡಿದ್ದು ಐತಿಹಾಸಿಕ ತೀರ್ಪು. ಬುದ್ಧ, ಬಸವ ಮತ್ತು, ಅಂಬೇಡ್ಕರ್‌ ಅವರ ಸಮಾನತೆಯ ಕನಸು ಮತ್ತು ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಕನಸನ್ನು ನನಸು ಮಾಡಿದ ಕೊಪ್ಪಳ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಸಿ. ಚಂದ್ರಶೇಖರ ಅವರಿಗೆ ಈ ರಾಜ್ಯದ ಕೆಳ ವರ್ಗದ ಜನ ಹೃತ್ಪೂರ್ವಕ ಅಭಿನಂದನೆ ಹೇಳುತ್ತಾ ಈ ತೀರ್ಪುನ್ನು ಸ್ವಾಗತಿಸುತ್ತೇವೆ’ ಎಂದರು.

ADVERTISEMENT

ಮುಖಂಡರಾದ ಮಾನಪ್ಪ ಕಟ್ಟಿಮನಿ, ಮಾನು ಗುರಿಕಾರ, ಚಂದ್ರಶೇಖರ ಹಸನಾಪುರ, ಮಾನಪ್ಪ ಬಿಜಾಸಪೂರ, ರಾಮಣ್ಣ ಶೆಳ್ಳಗಿ, ಬಸವರಾಜ ಶೆಳ್ಳಗಿ, ಮಾನಪ್ಪ ಶೆಳ್ಳಗಿ, ಹಣಮಂತ ದೊರೆ ಬಿಜಾಸಪೂರ, ದೇವಿಂದ್ರಪ್ಪ ಬಾದ್ಯಾಪುರ, ನಿಂಗಪ್ಪ ಕಟಗಿ ಶಹಾಪುರ, ಮೂರ್ತಿ ಬೊಮ್ಮನಳ್ಳಿ, ಮರೆಪ್ಪ ಕಾಂಗ್ರೆಸ್, ವೀರಭದ್ರಪ್ಪ ತಳವಾರಗೇರಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.