ಯಾದಗಿರಿ: ಎಣ್ಣೆಕಾಳು ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಗೆ ರಾಷ್ಟ್ರೀಯ ಮಟ್ಟದಲ್ಲಿ ನೋಡಲ್ ಬೆಳೆ ಅಭಿವೃದ್ಧಿಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಮರೇಶ ವೈ.ಎಸ್. ಹೇಳಿದರು.
ಸುರಪುರ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಖಿಲ ಭಾರತ ಸೂರ್ಯಕಾಂತಿ ಪ್ರಾಯೋಜನೆ, ಮುಖ್ಯ ಕೃಷಿ ಸಂಶೋಧನಾ ಕೇಂದ್ರ ರಾಯಚೂರು ಸಹಭಾಗಿತ್ವದಲ್ಲಿ ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಮತ್ತು ಗ್ರಾಮೀಣ ಮಟ್ಟದ ಮಣ್ಣು ಪರೀಕ್ಷಾ ಕೇಂದ್ರದ ನಿರ್ವಾಹಕರಿಗೆ ಮತ್ತು ಟಾಟಾ ಕಲಿಕೆ ಕ್ಷೇತ್ರ ಅಧಿಕಾರಿಗಳಿಗೆ ಎಣ್ಣೆಕಾಳು ಬೆಳೆಗಳ ಸುಧಾರಿತ ತಾಂತ್ರಿಕತೆಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಬೇಡಿಕೆ ಕೇವಲ ಶೇ 30 ನಷ್ಟು ಉತ್ಪಾದಿಸಲು ಭಾರತಕ್ಕೆ ಸಾಧ್ಯವಾಗುತ್ತದೆ. ಆದರೆ, ಖಾದ್ಯತೈಲದ ಅವಶ್ಯಕತೆಗಳನ್ನು ಪೂರೈಸಲು ದೇಶವು ವರ್ಷಕ್ಕೆ ₹70 ಸಾವಿರ ಕೋಟಿಗಳನ್ನು ಆಮದು ಮಾಡಿಕೊಳ್ಳಲು ಖರ್ಚು ಮಾಡುತ್ತಿದೆ. ದೇಶದ ಪ್ರಮುಖ ಎಣ್ಣೆಗಳು ಬೆಳೆಗಳು (ಸೂರ್ಯಕಾಂತಿ, ಸೋಯಾಬೀನ್, ನೆಲಗಡಲೆ, ಸಾಸಿವೆ, ಎಳ್ಳು, ಇತ್ಯಾದಿ) ಉತ್ಪಾದನೆಯ ಸ್ಥಿತಿಯ ಬಗ್ಗೆ ವಿವರಿಸಿದರು.
ರಾಯಚೂರು ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ವಿಕಾಸ್ ಕುಲಕರ್ಣಿ, ವಿಶ್ವ ಜನಸಂಖ್ಯೆಯು ಹೆಚ್ಚಾದಂತೆ, ಉತ್ತಮ-ಗುಣಮಟ್ಟದ ಬೀಜದ ಎಣ್ಣೆಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಎಳ್ಳು ಎಣ್ಣೆಯಲ್ಲಿ ಪಾಲಿ ಅನ್ಸಾಚುರೆಟೆಡ್ ಕೊಬ್ಬಿನಾಮ್ಲಗಳ ಉಪಸ್ಥಿತಿಯು ಎಳ್ಳನ್ನು ಅದರ ಅತ್ಯುತ್ತಮ ಆರೋಗ್ಯದ ಪರಿಣಾಮಗಳಿಂದಾಗಿ ಪ್ರಮುಖ ಎಣ್ಣೆ ಬೀಜದ ಬೆಳೆಯನ್ನಾಗಿ ಮಾಡುತ್ತದೆ. ಎಣ್ಣೆಕಾಳು ಬೆಳೆಗಳ ಮಹತ್ವ, ಸೂರ್ಯಕಾಂತಿ ಬೆಳೆಯ ಬೀಜೋತ್ಪಾದನೆಯಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಿಸಿದರು.
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ವಿಜ್ಞಾನಿ ಡಾ. ಅರುಣಕುಮಾರ ಮಾತನಾಡಿ, ಸಾಸಿವೆ ಎಣ್ಣೆಕಾಳು ಬೆಳೆಯ, ಬೇಸಾಯ ಕ್ರಮಗಳು, ಬೀಜೋತ್ಪಾದನೆಯ ಮತ್ತು ಈ ಪ್ರದೇಶಕ್ಕೆ ಸೂಕ್ತವಾದ ಹೈಬ್ರೀಡ್ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ಕೀಟಶಾಸ್ತ್ರದ ಡಾ.ವಿಜಯಕುಮಾರ ಘಂಟಿ ಮಾತನಾಡಿ, ಶೇಂಗಾ ಬೆಳೆಯಲ್ಲಿ ಬರುವ ಕೀಟಗಳ ಜೀವನ ಚಕ್ರ, ಹಾನಿಯ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣಾ ಕ್ರಮಗಳನ್ನು ಹೇಳಿದರು.
ಕೃಷಿ ಕೇಂದ್ರದ ಹಸನ್ ಮುಲ್ಲಾ, ರೈತ ಉತ್ಪಾದಕರ ಸಂಸ್ಥೆಯ, ರಚನೆ, ಕಾರ್ಯವೈಖರಿ, ಪ್ರಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು. ಸಂತೋಷ ಫುಡ್ ಫಾರ್ಮರ್ ಫ್ರ್ಯಾಂಚೈಸ್ ಕಂಪನಿಯಿಂದ ದೊರೆಯುವ ಯಂತ್ರೋಪಕರಣಗಳ ಸ್ಥಾಪನೆ ಮತ್ತು ತರಬೇತಿ, ಮಾರುಕಟ್ಟೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಟಾಟಾ ಕಲಿಕೆ ಟ್ರಸ್ಟ್ ಅರುಣಕುಮಾರ, ಮುಖ್ಯ ಕೃಷಿ ಸಂಶೋಧನಾ ಕೇಂದ್ರ ಡಾ. ಉಮೇಶ (ಬೇಸಾಯಶಾಸ್ತ್ರ), ಎಣ್ಣೆಕಾಳು ಬೆಳೆಗಳ ಬೇಸಾಯ ಕ್ರಮಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸತೀಶಕುಮಾರ ಕಾಳೆ, ಡಾ. ಕೊಟ್ರೇಶ ಪ್ರಸಾದ, ಡಾ. ಗುರುಪ್ರಸಾದ ಎಚ್ ಹಾಗೂ ಕೃಷಿ ಇಲಾಖೆಯ, ಆತ್ಮ ಸಿಬ್ಬಂದಿ, ಟಾಟಾ ಕಲಿಕೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.