ADVERTISEMENT

ಯಾದಗಿರಿ: ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮದಲ್ಲೇ ಗಲೀಜು

ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಪಂಗಳಿಗೆ ₹ 5 ಲಕ್ಷ ಪ್ರೋತ್ಸಾಹ ಧನ

ಬಿ.ಜಿ.ಪ್ರವೀಣಕುಮಾರ
Published 21 ಅಕ್ಟೋಬರ್ 2024, 5:35 IST
Last Updated 21 ಅಕ್ಟೋಬರ್ 2024, 5:35 IST
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ರಸ್ತೆ ಮೇಲೆ ಚರಂಡಿ ನೀರು ಪಾಚಿಗಟ್ಟಿ ಹರಿಯುತ್ತಿರುವುದು
ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ್
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ರಸ್ತೆ ಮೇಲೆ ಚರಂಡಿ ನೀರು ಪಾಚಿಗಟ್ಟಿ ಹರಿಯುತ್ತಿರುವುದು ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ್   

ಯಾದಗಿರಿ: ಜಿಲ್ಲೆಯ ಆರು ಪಂಚಾಯಿತಿಗಳಿಗೆ 2023–24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. 

ರಸ್ತೆ, ಚರಂಡಿ, ಶುದ್ಧ ನೀರು, ಸ್ವಚ್ಛತೆ, ದಾಖಲು ನಿರ್ವಹಣೆ, ತೆರಿಗೆ ಸಂಗ್ರಹ, ಬೀದಿ ದೀಪ ನಿರ್ವಹಣೆ ಹೀಗೆ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗುತ್ತಿದೆ.

ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013–14ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡು ₹ 5 ಲಕ್ಷ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ.

ADVERTISEMENT

ಆಯ್ಕೆಯಾದ ಗ್ರಾಮಗಳು ಕೇವಲ ಪ್ರಶಸ್ತಿಗಾಗಿ ಆಯ್ಕೆಯಾಗುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈಚೆಗೆ ಸುರಿದ ಧಾರಾಕಾರ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ಗಲೀಜು ಹರಿದಾಡುವುದು ನೋಡಿದರೆ ಎಲ್ಲಿ ಗಾಂಧಿ ಗ್ರಾಮ ಎನ್ನುವಂತಾಗಿದೆ.

ಕಳಪೆ ಜೆಜೆಎಂ ಕಾಮಗಾರಿ: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗ್ರಾಮಗಳಲ್ಲೂ ಜಲ ಜೀವನ ಮಿಷನ್‌ (ಜೆಜೆಎಂ) ಕಾಮಗಾರಿ ಅಪೂರ್ಣವಾಗಿದ್ದು, ರಸ್ತೆಗಳು ಹಾಳಾಗಿವೆ. ಅಲ್ಲದೇ ಯಾವ ಗ್ರಾಮದಲ್ಲೂ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ‘ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳು ಕಳೆದರೂ ನೀರು ಸಿಕ್ಕಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಅತಿ ಹೆಚ್ಚು ಅಂಕ ಪ‍ಡೆದ ಗ್ರಾಮಗಳು ಆಯ್ಕೆ: 2023–24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅತಿ ಹೆಚ್ಚು ಅಂಕ ಗಳಿಸಿದ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಿ ಸಭೆಯ ನಡಾವಳಿಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಿಸಲಾಗುತ್ತದೆ. ನೋಡಲ್‌ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪೂರಕ ದಾಖಲೆಗಳನ್ನು ಮತ್ತು ಸಾಧಿಸಿರುವ ಪ್ರಗತಿ ವರದಿ ಕುರಿತು ಪರಿಶೀಲನೆ ಮಾಡಿ ಪ್ರಸ್ತಾವನೆಗಳನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಗಳನ್ನು ಜಿಲ್ಲಾಮಟ್ಟದ ಆಯ್ಕೆಯಲ್ಲಿ ಪರಿಶೀಲನೆ ಮಾಡಿ ಅತಿ ಹೆಚ್ಚು ಅಂಕ ಪಡೆದ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯಿತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮ ಪಂಚಾಯಿತಿ ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. 23 ಸದಸ್ಯರನ್ನು ಹೊಂದಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಿಕುಣಿ, ಹತ್ತಿಕುಣಿ ಕ್ಯಾಂಪ್‌, ರಾನುನಾಯಕ್ ತಾಂಡಾ, ಸೌದಾಗರ್, ದುಗನೂರು ಹಳ್ಳಿ, ಭವಾನೀರ್ ಹಳ್ಳಿ, ಸಮಣಾಪುರ, ಸಮಣಾಪುರ ಡಿ ತಾಂಡಾ, ಸಮಣಾಪುರ ಎಸ್ ತಾಂಡಾ, ಗೋಪಿನಾಯಕ್ ತಾಂಡಾ, ಬಚಾವಾರ, ಬಚಾವಾರ ಹೊಸ ತಾಂಡಾ, ಬಚಾವಾರ ಹಳ್ಳಿ ತಾಂಡಾ ಬರುತ್ತವೆ.

ಹತ್ತಿಕುಣಿಯಲ್ಲಿ ಮಾತ್ರ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸುತ್ತಿದೆ. ಉಳಿದೆಡೆ ದುರಸ್ತಿಗೆ ಬಂದಿವೆ. ಅಲ್ಲದೇ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲೇ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ಸಿಸಿ ರಸ್ತೆ, ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ಬೀದಿ ದೀಪಗಳ ನಿರ್ವಹಣೆ ಇಲ್ಲ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌

ಗುರುಮಠಕಲ್ ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕ
ಜಿಲ್ಲೆಯ ಆರು ಗ್ರಾಮ ಪಂಚಾಯಿತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸೌಲಭ್ಯ ಕೊರತೆಯಾಗಿದ್ದರೆ ಈ ಬಗ್ಗೆ ಪರಿಶೀಲಿಸಿ ನಿರ್ವಹಣೆಗೆ ಸೂಚಿಸಲಾಗುವುದು
ಲವೀಶ್‌ ಒರ್ಡಿಯಾ ಜಿಲ್ಲಾ ಪಂಚಾಯಿತಿ ಸಿಇಒ
ಹತ್ತಿಕುಣಿ ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿ ಕಳುಹಿಸಲಾಗಿದೆ. ಮಾರ್ಗಸೂಚಿ ಅನ್ವಯ ಪ್ರಶಸ್ತಿ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು
ನಿಂಗಣ್ಣ ಕಣಮೇಶ್ವರ ಪಿಡಿಒ ಹತ್ತಿಕುಣಿ
ನರೇಗಾ ಕೆಲಸ ಸ್ವಚ್ಛತೆ ನೀರು ಬಳಕೆ ಗ್ರಂಥಾಲಯಗಳು ಹೀಗೆ ಹಲವಾರು ವಿಷಯಗಳ ಪರಿಶೀಲನೆಯ ನಂತರ ನಮ್ಮ ತಾಲ್ಲೂಕಿನ ಕೊಂಕಲ್ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾಗಿದೆ
ಅಂಬ್ರೀಶ ಪಾಟೀಲ ಇಒ ಗುರುಮಠಕಲ್‌
ತಡಿಬಿಡಿ ಗ್ರಾಮದ ಕೆಲವೊಂದು ಕಡೆ ಸಿ.ಸಿ ರಸ್ತೆಗಳು ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ಹಿರಿಯರಿಗೆ ಹಾಗೂ ಮಕ್ಕಳಿಗೆ ನಡೆದಾಡಲು ತೊಂದರೆಯಾಗುತ್ತಿದೆ
ರವಿಕುಮಾರ ದೇವರಮನಿ ವಿಷ್ಣು ಸೇನಾ ಜಿಲ್ಲಾ ಘಟಕದ ಅಧ್ಯಕ್ಷ
ಸಿಎಂ ನೆಚ್ಚಿನ ಗ್ರಾಮಕ್ಕೆ ಗಾಂಧಿ ಪುರಸ್ಕಾರ
ಸುರಪುರ‌: ಚುನಾವಣೆ ಪ್ರಚಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಭಾಗಿಯಾಗಿದ್ದ ತಾಲ್ಲೂಕಿನ ದೇವತಕಲ್ ಗ್ರಾಮ ಪ್ರಸ್ತುತ ಸಾಲಿನ ಮಹಾತ್ಮ ಗಾಂಧಿ ಪುರಸ್ಕಾರಕ್ಕೆ ಪಾತ್ರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಸದಾನಂದಗೌಡ ಬಸವರಾಜ ಬೊಮ್ಮಾಯಿ ಹಲವು ಸಚಿವರು ಈ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸಹಜವಾಗಿ ಗ್ರಾಮಕ್ಕೆ ಹೆಚ್ಚಿನ ಅನುದಾನ ಹರಿದು ಬಂದಿದೆ. ಗ್ರಾಮದಲ್ಲಿ ಸಿ.ಸಿ ರಸ್ತೆ ಚರಂಡಿ ಕುಡಿಯುವ ನೀರು ಬೀದಿದೀಪ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗಿದೆ. ಪ್ರಶಸ್ತಿಗೆ ಮಾನದಂಡವಾಗಿದ್ದ 500 ಅಂಕಗಳ ಪೈಕಿ 250 ಅಂಕ ಪಡೆಯುವುದರ ಮೂಲಕ ಅರ್ಜಿ ಹಾಕಿದ್ದ ತಾಲ್ಲೂಕಿನ ಇತರ ಗ್ರಾಮಗಳನ್ನು ಹಿಂದಿಕ್ಕಿದೆ. ‘ಗಾಂಧಿ ಗ್ರಾಮ ಪ್ರಶಸ್ತಿಯ ಜೊತೆಗೆ ಸಿಗುವ ₹ 5 ಲಕ್ಷ ಹಣವನ್ನು ನೈರ್ಮಲೀಕರಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಪಿಡಿಒ ರಾಜು ಮೇಟಿ ಹೇಳಿದ್ದಾರೆ. ಪುರಸ್ಕಾರ ಸಿಕ್ಕಿರುವುದು ನಮಗೆ ತಂದಿದೆ‘ ಎಂದು ಗ್ರಾಮದ ಮುಖಂಡ ಪಾರಪ್ಪ ತಳವಾರ ಹೇಳುತ್ತಾರೆ. ಸಾರ್ವಜನಿಕ ಶೌಚಾಲಯ ಇಲ್ಲದೆ ಮಹಿಳೆಯರು ಪರದಾಡುವಂತಾಗಿದೆ. ಕೆಲ ಬಡಾವಣೆಗಳಲ್ಲಿ ಸ್ವಚ್ಛತೆ ಇಲ್ಲ. ಬೆಟ್ಟದ ಮೇಲಿರುವ ಬಡಾವಣೆಗೆ ಇನ್ನಷ್ಟು ಸೌಲಭ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಕೊಂಕಲ್‌ ಗ್ರಾಮಸ್ಥರಲ್ಲಿವೆ ಹಲವು ನಿರೀಕ್ಷೆಗಳು
ಗುರುಮಠಕಲ್‌: ತಾಲ್ಲೂಕಿನ ಕೊಂಕಲ್‌ ಗ್ರಾಮ ಪಂಚಾಯಿತಿಯು 2024–25ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ಗ್ರಾಮಸ್ಥರಲ್ಲಿ ಹಲವು ನಿರೀಕ್ಷೆಗಳು ಗರಿಗೆದರಿವೆ. ಕೊಂಕಲ್ ದೇವನಹಳ್ಳಿ (ಅಮ್ಮಪಲ್ಲಿ) ಮತ್ತು ನಂದೆಪಲ್ಲಿ ಜತೆಗೆ ಪಾಡುಪಲ್ಲಿ (ಉಪಗ್ರಾಮ) ಗ್ರಾಮಗಳನ್ನು ಒಳಗೊಂಡಿರುವ ಕೊಂಕಲ್ ಗ್ರಾಮ ಪಂಚಾಯಿತಿಯು 16 ಜನರ ಸದಸ್ಯ ಬಲವನ್ನು ಹೊಂದಿದೆ. ಈ ಗ್ರಾಮವು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಸಂಸದರಾಗಿದ್ದಾಗ (2014) ಆಯ್ಕೆ ಮಾಡಿಕೊಂಡಿದ್ದ ‘ಸಂಸದರ ಆದರ್ಶ ಗ್ರಾಮ’ವೂ ಹೌದು. ತಾಲ್ಲೂಕಿನಲ್ಲೇ ಕಸ (ತ್ಯಾಜ್ಯ) ನಿರ್ವಹಣಾ ಘಟಕ ಮತ್ತು ಕ್ರೀಡಾಂಗಣ ಹೊಂದಿರುವ ಏಕೈಕ ಪಂಚಾಯಿತಿ ಎನ್ನುವ ಹೆಗ್ಗಳಿಕೆಯ ನಡುವೆಯೂ ಕೆಲ ಸಮಸ್ಯೆಗಳ ಪರಿಹಾರಕ್ಕೆ ಕಾಯುತ್ತಿರುವುದೂ ಇದ್ದೇಇದೆ. ‘ಗ್ರಾಮದಲ್ಲಿ ಪಾಳು ಬಿದ್ದಿರುವ ಸರ್ಕಾರಿ ಕಟ್ಟಡಗಳು ಮತ್ತು ನಿವೇಶನಗಳನ್ನು ದುರಸ್ತಿಗೊಳಿಸುವ ಬದಲು ಹಾಳುಗೆಡವಿದರೆ ಲಾಭವೇನು’ ಎನ್ನುವುದು ಸಾಮಾಜಿಕ ಕಾರ್ಯಕರ್ತ ಉದಯಕುಮಾರ ಅವರ ಪ್ರಶ್ನೆ. 
ಶೇಕಡ 90ರಷ್ಟು ತೆರಿಗೆ ಸಂಗ್ರಹ
ಹುಣಸಗಿ: ತಾಲ್ಲೂಕಿನ ಹೆಬ್ಬಾಳ ಬಿ ಗ್ರಾಮ ಪಂಚಾಯಿತಿ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಕಳೆದ ವರ್ಷ ಈ ಗ್ರಾಮ ಪಂಚಾಯಿತಿ ಶೇಕಡ 90ಕ್ಕೂ ಹೆಚ್ಚು ಕರವಸೂಲಿ ಮಾಡಿದ್ದು ಜೊತೆಗೆ ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ಹಾಗೂ ಅದರ ನಿರ್ವಹಣೆ ಸುಸ್ಥಿತಿಯಲ್ಲಿ ನಡೆದಿದ್ದರಿಂದ ಹಾಗೂ ಇಲಾಖೆ ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದರಿಂದ ನಮ್ಮ ಪಂಚಾಯಿತಿಗೆ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ ಎಂದು ಅಧ್ಯಕ್ಷೆ ಯಮುನಾ ಶಿವಣ್ಣ ಹಾಗೂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ್ ಕೋರಿ ತಿಳಿಸಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಶೇಕಡ 90ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸಗಳನ್ನು ನೀಡಲಾಗಿದೆ. ಇದರಿಂದಾಗಿ ಗುಳೆ ಹೋಗುವುದು ತಪ್ಪಿದಂತಾಗಿದೆ ಎಂದರು‌. ಕಲ್ಲದೇವನಹಳ್ಳಿ ಹಾಗೂ ಹೆಬ್ಬಾಳ ಕೆ. ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಅವುಗಳ ದುರಸ್ತಿಗೆ ಮುಂದಾಗಬೇಕಿದೆ ಎಂದು ಹೆಬ್ಬಾಳ ಕೆ. ಗ್ರಾಮದ ಯುವಕ ನಿಂಗು ಪಾಟೀಲ ಮಾನಪ್ಪ ಹುಣಸಿಹೊಳೆ ರವಿ ದಾಸರ ಅಸಮಾಧಾನ ವ್ಯಕ್ತಪಡಿಸಿದರು. ‘ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಇನ್ನೂ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು’ ಸದಸ್ಯ ತಾರಾನಾಥ ಚವಾಣ್‌ ಆಗ್ರಹಿಸಿದ್ದಾರೆ.
ಸಗರ ಗ್ರಾ.ಪಂ.ಗೆ ಗಾಂಧಿ ಪುರಸ್ಕಾರದ ಗರಿ
ಶಹಾಪುರ: ತಾಲ್ಲೂಕಿನ ಸಗರ ಗ್ರಾಮ ಪಂಚಾಯಿತಿ ಪ್ರಸಕ್ತ ಬಾರಿ ಗಾಂಧಿ ಪುರಸ್ಕಾರದ ಗರಿಯನ್ನು ಮುಡಿಗೇರಿಸಿಕೊಂಡಿದೆ. ಆದರೆ ಸಾರ್ವಜನಿಕ ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದೆ. ಯಾವ ಮಾನದಂಡದ ಮೇಲೆ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಾರೆ ಎಂಬುವುದು ಅಧಿಕಾರಿಗಳಿಗೆ ಮಾತ್ರ ಗೊತ್ತು ಎನ್ನುವಂತೆ ಆಗಿದೆ ಎಂಬ ದೂರು ಕೇಳಿ ಬರುತ್ತಲಿದೆ. ಪಂಚಾಯಿತಿ 37 ಸದಸ್ಯರನ್ನು ಹೊಂದಿದೆ. ತಾಲ್ಲೂಕಿನಲ್ಲಿಯೇ ಅತಿ  ಹೆಚ್ಚು ಸದಸ್ಯರನ್ನು ಹೊಂದಿದೆ. ಹೀಗಾಗಿ ಪಟ್ಟಣ ಪಂಚಾಯಿತಿಗೆ ಮೇಲ್ದೆರ್ಜೇಗೇರಿಸುವಂತೆ ಒತ್ತಡ ಕೇಳಿ ಬರುತ್ತಲಿದೆ. ಐತಿಹಾಸಿಕ ಹಿನ್ನೆಯನ್ನು ಹೊಂದಿರುವ ಗ್ರಾಮವು ಸಾಕಷ್ಟು ಸಮಸ್ಯೆಗಳನ್ನು ಒಡಲಿನಲ್ಲಿ ತುಂಬಿಕೊಂಡಿದೆ. ನೀರಿನ ಲಭ್ಯತೆ ಇದೆ ನಿರ್ವಹಣೆಯಿಲ್ಲ. ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅನುಷ್ಠಾನಗೊಂಡರೂ ಮನೆ ಮನೆಗೆ ನೀರು ತಲುಪುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ತಡಬಿಡಿ: ಸುಸಜ್ಜಿತ ಶೌಚಾಲಯ ಬೇಕು
ವಡಗೇರಾ: ತಾಲ್ಲೂಕಿನ ತಡಬಿಡಿ ಗ್ರಾಮ ಪಂಚಾಯಿತಿ ಪರಿಸರ ಸಂರಕ್ಷಣೆ ಮಾಡಲು ಹಾಗೂ ಪ್ಲಾಸ್ಟಿಕ್ ಮುಕ್ತ ಪಂಚಾಯಿತಿಯನ್ನಾಗಿ ಮಾಡಲು ಒಂದು ಕೆ.ಜಿ ಪ್ಲಾಸ್ಟಿಕ್ ಕೊಟ್ಟರೆ ಒಂದು ಕೆಜಿ ಸಕ್ಕರೆ ಉಚಿತವಾಗಿ ಕೊಡುವ ವಿಶೇಷ ಯೋಜನೆ ಜಾರಿಗೆ ತಂದು ಇಲ್ಲಿಯವರೆಗೆ ಸುಮಾರು 80 ಕೆ.ಜಿ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಹುಂಡೆಕಲ್ ಹಾಗೂ ತಡಬಿಡಿ ಎರಡು ಗ್ರಾಮಗಳನ್ನು ಸೇರಿಸಿ ತಡಿಬಿಡಿ ಗ್ರಾಮವನ್ನು ಪಂಚಾಯಿತಿ ಕೇಂದ್ರವನ್ನಾಗಿ ಮಾಡಲಾಗಿದೆ. ಈ ಪುಟ್ಟ ಪಂಚಾಯಿತಿಯ ಜನಸಂಖ್ಯೆ 5834 ಇದೆ. ಹುಂಡೆಕಲ್ ಹಾಗೂ ತಡಿಬಿಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶೌಚಾಲಯ ಇಲ್ಲ. ಎರಡೂ ಗ್ರಾಮಗಳಲ್ಲಿ ಕೆಲವೊಂದು ಕಡೆ ಸಿ.ಸಿ ರಸ್ತೆ ಹಾಗೂ ಒಳಚರಂಡಿಗಳ ನಿರ್ಮಾಣವಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.