ADVERTISEMENT

ಹುಣಸಗಿ | ಮುಂಗಾರು ಬಿತ್ತನೆ: ಶೇ 70ರಷ್ಟು ಪೂರ್ಣ

ಹುಣಸಗಿ ತಾಲ್ಲೂಕಿನ ಮಳೆಯಾಶ್ರಿತ ಭೂಮಿ

ಭೀಮಶೇನರಾವ ಕುಲಕರ್ಣಿ
Published 23 ಜೂನ್ 2024, 5:20 IST
Last Updated 23 ಜೂನ್ 2024, 5:20 IST
ಹುಣಸಗಿ ತಾಲ್ಲೂಕಿನ ಮಾರಲಬಾವಿ ಗ್ರಾಮದಲ್ಲಿ ಬಿತ್ತನೆ ಕಾರ್ಯದಲ್ಲಿ ನಿರತರಾಗಿರುವ ರೈತರು
ಹುಣಸಗಿ ತಾಲ್ಲೂಕಿನ ಮಾರಲಬಾವಿ ಗ್ರಾಮದಲ್ಲಿ ಬಿತ್ತನೆ ಕಾರ್ಯದಲ್ಲಿ ನಿರತರಾಗಿರುವ ರೈತರು   

ಹುಣಸಗಿ: ತಾಲ್ಲೂಕಿನ ಉತ್ತಮ ಮಳೆ ಸುರಿದಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಭರದಿಂದ ನಡೆದಿದ್ದು, ಶೇ 70ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ತಾಲ್ಲೂಕಿನ ಶ್ರೀನಿವಾಸಪುರ, ಮಂಜಲಾಪುರ, ಗುಂಡಲಗೇರಾ ಸೇರಿದಂತೆ ಇತರ ಗ್ರಾಮಗಳಲ್ಲಿ ಹತ್ತಿ ಹಾಗೂ ತೊಗರಿ ಬಿತ್ತನೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ ಕಳೆದ ವಾರ ಸುರಿದ ಮಳೆಗೆ ಕೆಲ ರೈತರು ಬಿತ್ತನೆ ಮಾಡುತ್ತಿದ್ದಾರೆ ಎಂದು ಮಂಜಲಾಪುರಹಳ್ಳಿ ಗ್ರಾಮದ ರೈತ ಪರಮಣ್ಣ ನೀಲಗಲ್ಲ, ಮಾರಲಬಾವಿ ಗ್ರಾಮದ ಸಂಜೀವಪ್ಪ ಕಲ್ಯಾಣಿ ತಿಳಿಸಿದರು.

ಮುಂಗಾರು ಆರಂಭಕ್ಕೂ ಮುನ್ನವೇ ಮಳೆಯಾಗಿತ್ತು. ಜತೆಗೆ ಕೃಷಿ ಇಲಾಖೆಯಿಂದ ಬೇಗನೆ ಬಿತ್ತನೆ ಬೀಜ ವಿತರಿಸಲಾಯಿತು. ಹೀಗಾಗಿ ನಿಗದಿತ ಸಮಯಕ್ಕೆ ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಿದ್ದೇವೆ ಎಂದು ಮಾರಲಬಾವಿ ಗ್ರಾಮದ ಹಣಮಂತ್ರಾಯ ನಾಯಕೋಡಿ ಪಾಂಡು ಸುಬೇದಾರ, ವಿಠ್ಠಪ್ಪ ಸುಬೇದಾರ, ಮಡಿವಾಳಪ್ಪ ಮತ್ತಿತರ ರೈತರು ಸಂತಸ ವ್ಯಕ್ತ ಪಡಿಸಿದರು.

ADVERTISEMENT

ಗುಂಡಲಗೇರಾ ಗ್ರಾಮದ ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆ ಹೆಚ್ಚು ಅನುಕೂಲವಾಗಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ಹತ್ತಿ ಹಾಗೂ 6 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೇವೆ ಎಂದು ರೈತ ಪರಮಣ್ಣ ಹಳಿಮನಿ ಹಾಗೂ ಜೈನುದ್ಧೀನ್ ಜಮಾದಾರ ವಿವರಿಸಿದರು.

ಈ ಬಾರಿ ಬಹುತೇಕ ರೈತರು ತೊಗರಿ ಬಿತ್ತನೆಗೆ ಟ್ರ್ಯಾಕ್ಟರ್‌ ಮೊರೆ ಹೋಗಿದ್ದ, ಹತ್ತಿ ಮಾತ್ರ ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಬೋದ ಸಾಲಿನಲ್ಲಿ ಬಿತ್ತನೆ (ಊರುವುದು) ಮಾಡಿದ್ದಾಗಿ ರೈತರು ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಹೋಬಳಿ ವ್ಯಾಪ್ತಿಯಲ್ಲಿ ಶೇ 70ರಷ್ಟು ತೊಗರಿ ಹಾಗೂ ಹತ್ತಿ ಬಿತ್ತನೆ ಪೂರ್ಣಗೊಂಡಿದೆ. 170 ಕ್ವಿಂಟಲ್‌ಗೂ ಅಧಿಕ ತೊಗರಿ ಬಿತ್ತನೆ ಬೀಜ ವಿತರಿಸಲಾಗಿದೆ.
ರಾಮನಗೌಡ ಪಾಟೀಲ, ಕೃಷಿ ಅಧಿಕಾರಿ ಕೊಡೇಕಲ್ಲ

ಕಳೆದ ಎರಡು ವಾರಗಳ ಹಿಂದೆ ನಮ್ಮ ಗ್ರಾಮದಲ್ಲಿ ಅಲ್ಪ ಮಳೆಗಾಗಿತ್ತು. ಮತ್ತೆ ಮಳೆಯಾಗುವ ಭರವಸೆಯಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಬಿತ್ತಿದ ಬಳಿಕ ಮತ್ತೆ ಮಳೆಯಾಗಿದ್ದರಿಂದಾಗಿ ನಮ್ಮ ಭರವಸೆ ಇಮ್ಮಡಿಯಾಗಿದೆ ಎಂದು ಕೋಳಿಹಾಳ ತಾಂಡಾ ರೈತ ಪೂರಪ್ಪ ಚವ್ಹಾಣ ತಿಳಿಸಿದರು.

12 ಎಕರೆ ಹತ್ತಿ ಹಾಗೂ ತೊಗರಿ 20 ಎಕರೆ ತೊಗರಿ ಬಿತ್ತನೆ ಮಾಡಿ, ಸುಮಾರು 15 ದಿನವಾಗಿದೆ. ಶುಕ್ರವಾರ ಮಳೆಯಾಗಿದ್ದರಿಂದ ಇನ್ನೂ ಹೆಚ್ಚು ಅನುಕೂಲವಾದಂತಾಗಿದೆ ಎಂದು ರಾಜನಕೋಳುರು ಗ್ರಾಮದ ರೈತರಾದ ಯಂಕನಗೌಡ ವಠಾರ, ರಾಮನಗೌಡ ಪಾಟೀಲ, ಬಾಪುಗೌಡ ಕನಕರಡ್ಡಿ ಸಂತಸ ವ್ಯಕ್ತ ಪಡಿಸಿದರು.

ಮೆಣಸಿನಕಾಯಿ ಬೆಳೆ ಕುಸಿತ: ಕಳೆದ ವರ್ಷ ಬಹುತೇಕ ರೈತರು ಹತ್ತಿಯ ಜೊತೆಗೆ ಬ್ಯಾಡಗಿ ಹಾಗೂ ಗುಂಟೂರು ಮೆಣಸಿಕಾಯಿ ಕೂಡ ಹಾಕಿಕೊಂಡಿದ್ದರು. ಮೆಣಸಿಕಾಯಿಗೆ ಎಕರೆಗೆ ಒಂದು ವರ್ಷಕ್ಕೆ ಒಂದು ಲಕ್ಷದವರೆಗೆ ಖರ್ಚು ಮಾಡಲಾಗಿತ್ತು. ಆದರೆ ಇಳುವರಿ ಬಂದರೂ ಬೆಲೆ ಕುಸಿತದಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈ ಬಾರಿ ತಾಲ್ಲೂಕಿನಲ್ಲಿ ಮೆಣಸಿಕಾಯಿ ಬೆಳೆಯಲು ಬಹುತೇಕ ರೈತರು ಹಿಂದೆಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹುಣಸಗಿ ತಾಲ್ಲೂಕಿನಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ನೀರು ಆಧಾರಿತ ಕೃಷಿ ಇದ್ದರೂ ಕೂಡ ಹುಣಸಗಿ ಹೋಬಳಿ ವ್ಯಾಪ್ತಿಯ ಗುಂಡಲಗೇರಾ, ಶ್ರೀನಿವಾಸಪುರ ಹಾಗೂ ಕೊಡೇಕಲ್ಲ ಹೊಬಳಿ ವ್ಯಾಪ್ತಿಯಲ್ಲಿ ರಾಜನಕೋಳೂರು, ಕೊಡೇಕಲ್ಲ, ಮದಲಿಂಗನಾಳ, ಬಪ್ಪರಗಿ, ಹೊರಟ್ಟಿ ಸೇರಿದಂತೆ ಹೆಚ್ಚು ಪ್ರದೇಶವು ಮಳೆಯಾಶ್ರಿತ ಕೃಷಿ ಭೂಮಿಯನ್ನು ಹೊಂದಿದೆ.

ತಾಲ್ಲೂಕಿನ ಕೊಡೇಕಲ್ಲ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸುಮಾರು 170 ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜ ವಿತರಿಸಲಾಗಿದೆ. 18 ಸಾವಿರ ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಬಹುತೇಕ ಈ ವಾರದಲ್ಲಿ ಬಿತ್ತನೆ ಶೇ 70ರಷ್ಟು ಪೂರ್ಣಗೊಂಡಿದೆ. ಈ ಬಾರಿ ಬಹುತೇಕ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ ಎಂದು ರಾಮನಗೌಡ ಪಾಟೀಲ ವಿವರಿಸಿದರು.

ಹುಣಸಗಿ ತಾಲ್ಲೂಕಿನ ಕೋಳಿಹಾಳ ತಾಂಡಾದಲ್ಲಿ ತೊಗರಿ ಬಿತ್ತನೆ ಮಾಡುತ್ತಿರುವ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.