ADVERTISEMENT

ಬಸವಸಾಗರ ಜಲಾಶಯ: ಐಸಿಸಿ ಸಭೆಯತ್ತ ರೈತರ ಚಿತ್ತ

ಅಚ್ಚುಕಟ್ಟು ಪ್ರದೇಶದ ರೈತರನ್ನು ಐಸಿಸಿಗೆ ಸದಸ್ಯರನ್ನಾಗಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 5:52 IST
Last Updated 8 ಜುಲೈ 2024, 5:52 IST
<div class="paragraphs"><p>ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ</p></div>

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ

   

ಹುಣಸಗಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕಳೆದ ಒಂದು ವಾರದಿಂದ ಆಲಮಟ್ಟಿಯ ಲಾಲ್ ಬಹಾದ್ದೂರ್‌ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

ಇದರಿಂದಾಗಿ ನಾರಾಯಣಪುರ ಬಸವಸಾಗರ ಮತ್ತು ಆಲಮಟ್ಟಿ ಜಲಾಶಯದ ಅಡಿಯಲ್ಲಿ ಬರುವ ಕಾಲುವೆಗಳಿಗೆ ಯಾವ ದಿನಾಂಕದಿಂದ ನೀರು ಹರಿಸಲಾಗುತ್ತದೆ ಎಂದು ರೈತರು ಚಿತ್ತ ಹರಿಸಿದ್ದಾರೆ.

ADVERTISEMENT

ಈಗಾಗಲೇ ಜೂನ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಬಂದಿದ್ದರಿಂದಾಗಿ ಕಾಲುವೆ ಭಾಗದ ರೈತರು ಕೂಡ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿಕೊಂಡಿದ್ದಾರೆ. ಇನ್ನು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಭತ್ತ ಬೆಳೆಗಾರರು. ಆದ್ದರಿಂದ ಭತ್ತ ನಾಟಿ ಮಾಡಲು ನೀರಿಗಾಗಿ ಕಾಯುತ್ತಿದ್ದಾರೆ.

ಹುಣಸಗಿ ತಾಲ್ಲೂಕಿನಲ್ಲಿ ಅಂದಾಜು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದ್ದು, ಇನ್ನು ಜಿಲ್ಲೆ ಸೇರಿದಂತೆ ನೆರೆಯ ವಿಜಯಪುರ ಜಿಲ್ಲೆಯಲ್ಲಿಯೂ ಕೆಲ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಆದ್ದರಿಂದ ಭತ್ತ ನಾಟಿ ಮಾಡುವಂತಾಗಲು ಮುಖ್ಯವಾಗಿ ಪಟ್ಲರ್ ಹೊಡೆಯಲು ನೀರು ಅಗತ್ಯ. ಆದ್ದರಿಂದ ಕಾಲುವೆ ನೀರಿನ ದಾರಿ ಕಾಯುವಂತಾಗಿದೆ ಎಂದು ರೈತರು ತಿಳಿಸಿದರು.

ಕಳೆದ ಹಿಂಗಾರು ಹಂಗಾಮಿನಲ್ಲಿ ನೀರಿನ ಕೊರತೆಯಿಂದಾಗಿ ಒಂದು ಪೀಕ್ ಹೊಲ ಖಾಲಿ ಇತ್ತು. ಸಾಕಷ್ಟು ಬಿಸಿಲು ಕೂಡ ಇದ್ದರಿಂದಾಗಿ ಎರಡು ಬಾರಿ ಟಿಲ್ಲರ್ ಹೊಡೆದು ಹೊಲ ಹಗದಗೊಳಿಸಲಾಗಿದೆ. ಇನ್ನು ನೀರು ಬಂದ ತಕ್ಷಣ ಪಟ್ಲರ್ ಹಾಗೂ ಬಲ್ಲ ಹೊಡೆದು ಸಮತಟ್ಟುಗೊಳಿಸಿ ಭತ್ತ ನಾಟಿ ಮಾಡಲಾಗುವದು ಎಂದು ಗುಳಬಾಳ ಗ್ರಾಮದ ಪ್ರಗತಿಪರ ರೈತ ಸೋಮಣ್ಣ ಮೇಟಿ ಹಾಗೂ ವಜ್ಜಲ ಗ್ರಾಮದ ಮಲ್ಲನಗೌಡ ಅಮಲಿಹಾಳ, ಪರಮೇಶ ಗಿಂಡಿ ತಿಳಿಸಿದರು.

ರೈತ ಪ್ರತಿನಿಧಿಗಳನ್ನು ನೇಮಿಸಲಿ: ‘ರಾಜ್ಯ ಸರ್ಕಾರ ನಮ್ಮದು ರೈತರ ಪರ ಎಂದು ಹೇಳುತ್ತದೆ. ಆದರೆ ನೀರಾವರಿ ಸಲಹಾ ಸಮಿತಿ ಸಭೆಗಳಲ್ಲಿ ರೈತ ಪ್ರತಿನಿಧಿಗಳನ್ನು ನೇಮಕ ಮಾಡುತ್ತಿಲ್ಲ. ಇದರಿಂದಾಗಿ ಕೇವಲ ಅಧಿಕಾರಿಗಳು ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಶಾಸಕರು (ಜನಪ್ರತಿನಿಧಿಗಳು) ಮಾತ್ರ ಸಭೆ ನಡೆಸಿ ನೀರು ಹರಿಸುವ ದಿನಾಂಕ ಹಾಗೂ ಇತರ ವಿಷಯಗಳನ್ನು ಚರ್ಚೆ ಮಾಡುತ್ತಾರೆ. ಆದರೆ ರೈತರ ಪ್ರತಿನಿಧಿಗಳು ಈ ಸಭೆಯಲ್ಲಿ ಇದ್ದಲ್ಲಿ ರೈತರ ಪರ ಕಾಳಜಿಯೊಂದಿಗೆ ವಿಷಯ ಮಂಡನೆ ಮಾಡಲು ಸಾಧ್ಯವಾಗುತ್ತದೆ’ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಮುಖ ಮಲ್ಲಿಕಾರ್ಜುನ ಸತ್ಯಂಪೇಟೆ ಅಭಿಪ್ರಾಯ ವ್ಯಕ್ತಪಡಿಸಿದರು.

‘ಅಚ್ಚುಕಟ್ಟು ಪ್ರದೇಶ ಬುದ್ಧಿಜೀವಿಗಳು, ರೈತ ಸಂಘದ ಪ್ರಮುಖರು ಹಾಗೂ ರೈತಪ್ರಮುಖರು ಈ ಸಭೆಯಲ್ಲಿ ಇರುವಂತಾದರೆ ಸಭೆಗೂ ಗೌರವ ಹೆಚ್ಚಾಗುತ್ತದೆ’ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಮಹಿಳಾ ಪ್ರಮುಖರಾದ ಮಹಾದೇವಿ ಬೇನಾಳಮಠ ಹೇಳಿದರು.

‘ಕಳೆದ ಎರಡು ದಶಕಗಳ ಹಿಂದೆ ಅಚ್ಚುಕಟ್ಟು ಪ್ರದೇಶ ರೈತ ಮುಖಂಡರಾದ ಹುಣಸಗಿಯ ನಾಗಣ್ಣ ಸಾಹು ದಂಡಿನ್ ಹಾಗೂ ಎಂ.ಆರ್.ಖಾಜಿ ಅವರು ನೀರಾವರಿ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ರೈತರ ಸಮಸ್ಯೆಯನ್ನು ಸಭೆಯ ಗಮನಕ್ಕೆ ತರುತ್ತಿದ್ದರು. ರೈತ ಪ್ರತಿನಿಧಿಗಳ ಜೊತೆಗೆ ನೀರು ಬಳಕೆದಾರರ ಸಂಘಗಳ ಒಕ್ಕೂಟದ ಅಧ್ಯಕ್ಷರನ್ನು ಕೂಡ ನಿಯೋಜಿಸುವಂತೆ’ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಪ್ರಮುಖ ರಾಘವೇಂದ್ರ ಕಾಮನಟಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಲಾಶಯದಲ್ಲಿನ ನೀರಿನ ಸಂಗ್ರಹ

ಗರಿಷ್ಠ ಮಟ್ಟ 492.25 ಮೀ (33 ಟಿಎಂಸಿ ಅಡಿ) ನೀರಿನ ಸಂಗ್ರಹ ಸಾಮರ್ಥ್ಯದ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ 489.20 ಮೀ (21 ಟಿಎಂಸಿ ಅಡಿ) ನೀರಿನ ಸಂಗ್ರಹವಿದೆ. ನೀರಿನ ಒಳಹರಿವು 200 ಕ್ಯುಸೆಕ್ ಇದ್ದು 95 ಕ್ಯುಸೆಕ್‌ ಹೊರಹರಿವು ಇದೆ. ಇನ್ನು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ 519 ಮೀ (123 ಟಿಎಂಸಿ ಅಡಿ) ನೀರು ಸಂಗ್ರಹ ಸಾಮರ್ಥ್ಯವಿದ್ದು ಭಾನುವಾರ 514.58 ಮೀ (59.395 ಟಿಎಂಸಿ ಅಡಿ) ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ದಿನ ಕೇವಲ 19 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿತ್ತು. ಭಾನುವಾರ 59 ಸಾವಿರ ಕ್ಯುಸೆಕ್ ನೀರು ಒಳಹರಿವು ಇದೆ ಎಂದು ಕೆಬಿಜೆಎನ್ಎಲ್ ಮೂಲಗಳಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.