ADVERTISEMENT

ಶಹಾಪುರ: ಆಹಾರದಲ್ಲಿ ಏರುಪೇರು 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:52 IST
Last Updated 14 ಜೂನ್ 2024, 16:52 IST
   

ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಪ್ರಾಥಮಿಕ ಶಾಲೆ ಹಾಗೂ ಒಂದು ಪ್ರೌಢಶಾಲೆಯ ಮಕ್ಕಳು ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಅದರಲ್ಲಿ 100 ಮಕ್ಕಳಿಗೆ ತಾಲ್ಲೂಕಿನ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ ನಾಲ್ವರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಶಹಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.

‘ಊಟ ಮಾಡಿದ ಮೂರು ಗಂಟೆಯ ನಂತರ ಕೆಲ ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡಿತು. ನಂತರ ತಲೆ ಸುತ್ತುವುದು, ವಾಕರಿಕೆ ಬಂದಂತೆ ಆಗುವುದು. ಭೇದಿಯು ಶುರುವಾಗಿದೆ. ಆಹಾರದಲ್ಲಿ ವ್ಯತ್ಯಾಸವಾಗಿರಬಹುದು. ನಿಖರವಾಗಿ ಏನು ಹೇಳಲು ಸದ್ಯಕ್ಕೆ ಬರುವುದಿಲ್ಲ’ ಎಂದು ತಾಲ್ಲೂಕು ಟಿಎಚ್‌ಒ ಡಾ.ರಮೇಶ ಗುತ್ತೆದಾರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಡಾ.ರಾಜೇಶ್ವರಿ ಗುತ್ತೆದಾರ ತಿಳಿಸಿದರು.

‘ಶುಕ್ರವಾರ ಎಂದಿನಂತೆ ಖಾಸಗಿ ಸಂಸ್ಥೆಯು ಮಧ್ಯಾಹ್ನ ಬಿಸಿಯೂಟವನ್ನು ಐದು ಶಾಲೆಗಳಿಗೆ ಸರಬರಾಜು ಮಾಡಲಾಗಿತ್ತು. ಮಕ್ಕಳು ಮಧ್ಯಾಹ್ನದ ಬಿಸಿಯೂಟವಾದ ಅನ್ನ ಸಾಂಬಾರ್‌ ಸೇವಿಸಿದ್ದಾರೆ. ಸುಮಾರು ಒಂದು ಗಂಟೆಯ ನಂತರ ಕೆಲ ಮಕ್ಕಳಿಗೆ ತಲೆ ಸುತ್ತುವಿಕೆ ಹಾಗೂ ವಾಂತಿ ಬಂದಂತೆ ಆಗಲು ಶುರವಾಗಿದೆ. ಆಗ ಮಕ್ಕಳು ಶಾಲೆಯ ಶಿಕ್ಷಕರಿಗೆ ತಿಳಿಸಿದಾಗ ಒಂದಿಬ್ಬರಿಗೆ ಆಗುತ್ತಿರಬಹುದು ಎಂದು ಸುಮ್ಮನಾಗಿದ್ದಾರೆ. ನಂತರ ವಾಂತಿ ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಂಡಾಗ ಶಿಕ್ಷಕರು ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸುಮಾರು 80 ಮಕ್ಕಳು ಆರಾಮ ಆಗಿದ್ದಾರೆ’ ಎಂದು ಮಕ್ಕಳ ಪಾಲಕರು ಒಬ್ಬರು ತಿಳಿಸಿದರು.

ADVERTISEMENT

ಹೆಚ್ಚಿನ ಮಕ್ಕಳು ಆಹಾರ ಸೇವನೆ ಮಾಡಿದ್ದರಿಂದ ಸರ್ಕಾರಿ ಅಸ್ಪತ್ರೆಯ ಜತೆಗೆ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಮಕ್ಕಳ ಪಾಲಕರ ಆತಂಕ ಮಡುಗಟ್ಟಿದೆ. ಆರೋಗ್ಯ ಕೇಂದ್ರದ ಮುಂದೆ ಹೆಚ್ಚಿನ ಜನ ಜಮಾವಣೆಯಾಗಿದ್ದರು. ಪೊಲೀಸರು ಜನತೆಯನ್ನು ಚದುರಿಸಲು ಹರಸಾಹಸ ಪಟ್ಟರು.

ಅಧಿಕಾರಿಗಳ ದೌಡು: ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿರುವ ಸುದ್ದಿ ತಿಳಿದ ತಕ್ಷಣ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸುಶೀಲಾ ಬಿ., ಜಿಪಂ ಸಿಇಒ ಗರಿಮಾ ಪಂವಾರ್‌, ಡಿಡಿಪಿಐ ಮಂಜುನಾಥ, ಬಿಸಿಯೂಟದ ಅಧಿಕಾರಿಗಳು ಹಾಗೂ ವೈದ್ಯರ ತಂಡ ಆಗಮಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳು ತಾಕೀತು ಮಾಡಿದರು.

ಶಾಸಕರು ದೌಡು: ಸುದ್ದಿ ತಿಳಿದ ತಕ್ಷಣ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದರು. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಸರಿಯಾದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

ಗ್ರಾಮದಲ್ಲಿ ಐದು ಶಾಲೆಗಳು

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್‌ ನಗರ,  ಮಹಾಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೆ ಅಗಸಿ ಹಾಗೂ ಸರ್ಕಾರಿ ಪ್ರೌಢಶಾಲೆ ಇದೆ. ಹೀಗೆ ಒಟ್ಟು ಐದು ಶಾಲೆಯಗಳ ಮಕ್ಕಳು ಸೇರಿ ಸುಮಾರು 1,800ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಎನ್‌ಜಿಒ ಪ್ರಭಾವಿ ವ್ಯಕ್ತಿಯಲ್ಲಿ ಹಿಡಿತ

ಶಹಾಪುರ: ಮಧ್ಯಾಹ್ನ ಬಿಸಿಯೂಟ ವಿತರಿಸುವ ಖಾಸಗಿ ಸಂಸ್ಥೆ (ಎನ್‌ಜಿಒ) ಜಿಲ್ಲಾ ಉಸ್ತುವಾರಿ ಸಚಿವರ ಕುಟುಂಬದ ಸದಸ್ಯರು ಒಬ್ಬರು ಹಲವಾರು ವರ್ಷದಿಂದ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತು. ಆಹಾರ ವಿತರಿಸಿದ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ದೂರು ದಾಖಲಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಜಮಾಯಿಸಿದ ಜನತೆಯಿಂದ ಕೂಗಾಡಿದರು.

ಮಧ್ಯಾಹ್ನ ಬಿಸಿಯೂಟ ಮಾಡಿದ ಮಕ್ಕಳು ಸಂಜೆ ಆರು ಗಂಟೆಯ ನಂತರ ವಾಂತಿ ಶುರವಾಗಿದೆ. ಇದು ಆಹಾರದಲ್ಲಿ ವ್ಯತ್ಯಾಸ ಅಗಿರಬಹುದು. ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಿದೆ. ಯಾರು ಆತಂಕಪಡುವ ಅಗತ್ಯವಿಲ್ಲ. ಎಲ್ಲಾ ಮಕ್ಕಳು ಗುಣಮುಖರಾಗಿದ್ದಾರೆ
-ಡಾ.ರಮೇಶ ಗುತ್ತೆದಾರ, ಟಿಎಚ್‌ಒ, ಶಹಾಪುರ
ಬಿಸಿಯೂಟ ಸೇವಿಸಿ ವಾಂತಿ ಭೇದಿಯಿಂದ ಬಳಲುತ್ತಿರುವ ಮಕ್ಕಳು ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 100 ಮಕ್ಕಳಿಗೆ ಚಿಕಿತ್ಸೆ ನೀಡಿದೆ. ಇನ್ನೂ ಮಕ್ಕಳು ಬರುತ್ತಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಸಮಸ್ಯೆ ಇಲ್ಲ
-ಡಾ.ರಾಜೇಶ್ವರಿ ಗುತ್ತೆದಾರ, ಸಮುದಾಯ ಆರೋಗ್ಯ ಕೇಂದ್ರ ಅಧಿಕಾರ, ದೋರನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.