ಯಾದಗಿರಿ: ಮುದನೂರು ಬಾವಿಯಲ್ಲಿನ ವಾಲ್ವ್ ಗೆ ಕೀಟನಾಶಕ ಬೆರೆಸಿರುವ ಪ್ರಕರಣ ಘಟಿಸಿ ಮೂರು ದಿನಕಳೆದರೂ ಡಿವೈಎಸ್‌ಪಿ ತೇತೃತ್ವದ ವಿಶೇಷ ಪೊಲೀಸ್ ತನಿಖಾ ತಂಡ ಅವರಿವರ ವಿಚಾರಣೆಯಲ್ಲೇ ಕಾಲ ತಳ್ಳುತ್ತಿದೆ.
ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಸಂಭವನೀಯ ದುರಂತ ಮಾತ್ರ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಒಂದು ವೇಳೆ ಸಂಭವಿಸಿದ್ದರೆ ಮನೆಗೆ ಮೂರು ಹೆಣಗಳು ಉರುಳಿ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಪ್ರಕರಣಕ್ಕೂ ದೊಡ್ಡ ದುರಂತವಾಗುತ್ತಿತ್ತು ಎಂದೇ ಜನರು ಆತಂಕ ತೋಡಿಕೊಂಡಿದ್ದರು. ಅದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ತೆಗೆದುಕೊಂಡು ಪ್ರರಕಣದ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದ್ದರು. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಅವರು ವಿಶೇಷ ತನಿಖಾ ತಂಡ ರಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದರು.
ಸುರಪುರದ ಡಿವೈಎಸ್‌ಪಿ ಶಿವನಗೌಡ ಪಾಟೀಲ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸರ ತನಿಖಾ ತಂಡ ರಚನೆಯಾಗಿ ವಿಚಾರಣೆ ತೀವ್ರಗೊಳಿಸಿತ್ತು. ಆದರೆ, ಆರೋಪಿಗಳ ಬಗ್ಗೆ ಸುಳಿವು ಮಾತ್ರ ಸಿಕ್ಕಿಲ್ಲ.
ಜ.10ರಂದು ಘಟನೆ ನಡೆದಿತ್ತು. ಅಸ್ವಸ್ಥರಲ್ಲಿ ವೃದ್ಧೆ ಹೊನ್ನಮ್ಮ ಮೃತಪಟ್ಟಿದ್ದರು. ಜ.11ರಂದು ತೆಗ್ಗಳ್ಳಿ, ಶಾಖಾಪುರ ಗ್ರಾಮದಲ್ಲಿ ಅಸ್ವಸ್ಥರ ಸಂಖ್ಯೆ 17ಕ್ಕೆ ಏರಿಕೆಯಾಗಿತ್ತು. ಕೆಲವರ ಸ್ಥಿತಿ ಗಂಭೀರವಾಗಿದ್ದರಿಂದ ಶಹಾಪುರದ ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಜ.12ರಂದು ಶಹಾಪುರದ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಒಟ್ಟು11 ಮಂದಿ ಅಸ್ವಸ್ಥರು ಮನೆಗೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.