ಶಹಾಪುರ: ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ತಾಲ್ಲೂಕಿನ ಸಗರ ಗ್ರಾಮದ ನಿವಾಸಿ ಮೈಲಾರಪ್ಪ ಸಗರ (84) ಸೋಮವಾರ ನಿಧನರಾದರು.
ಅವರಿಗೆ 7 ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಸೋಮವಾರ ಸಂಜೆ 7ಕ್ಕೆ ಸ್ವಗ್ರಾಮ ಸಗರದಲ್ಲಿ ನೆರವೇರಿತು.
2014ರಲ್ಲಿ ಸರ್ಕಾರ ಅವರಿಗೆ ‘ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ’ ನೀಡಿ ಗೌರವಿಸಿತ್ತು.
ಗೋಕಾಕ ಚಳುವಳಿ ಸಂದರ್ಭದಲ್ಲಿ ಶಹಾಪುರ ನಗರಕ್ಕೆ ಡಾ.ರಾಜುಕುಮಾರ ಆಗಮಿಸಿದ್ದಾಗ ವೇದಿಕೆ ಹತ್ತಿ ತನ್ನ ಕಂಚಿನ ಕಂಠದ ಮೂಲಕ ಮೈಲಾರಪ್ಪ ಸಗರ ಅವರು ‘ಸ್ವಾಗತವು ನಿಮಗೆ ಸ್ವಾಗತ’ ಎಂದು ಹಾಡಿದಾಗ ಇಡೀ ಸಭೆ ಮಂತ್ರ ಮುಗ್ಧವಾಗಿತ್ತು. ರಾಜಕುಮಾರ ಅವರನ್ನು ಅಪ್ಪಿಕೊಂಡು ಮೆಚ್ಚುಗೆ ಸೂಚಿಸಿದ್ದರು.
ರೈತ ಸಂಘದ ಪ್ರೊ.ನಂಜುಡಸ್ವಾಮಿ ತಾವು ಹೋದಡೆಯಲ್ಲ ಅವರನ್ನು ಕರೆದುಕೊಂಡು ಹೋಗಿ ರೈತಗೀತೆ ಹಾಡಿಸುತ್ತಿದ್ದರು. ರೈತರ ನೋವು ನಲಿವುಗಳನ್ನು ಎಳೆ ಎಳೆಯಾಗಿ ಹಾಡಿ ರೈತ ಸಮುದಾಯವನ್ನು ಜಾಗೃತಗೊಳಿಸಿದರು ಎಂದು ಸ್ಮರಿಸುತ್ತಾರೆ ರೈತ ಮುಖಂಡ ಶರಣಪ್ಪ ಸಲಾದಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.