ಸುರಪುರ: ನಾರಾಯಣಪುರ ಜಲಾಶಯದಿಂದ 10 ದಿನದಿಂದ ಕೃಷ್ಣಾ ನದಿಗೆ ನಿರಂತರ ನೀರು ಬಿಡಲಾಗುತ್ತಿದೆ. ಗುರುವಾರ 3.25 ಕ್ಯುಸೆಕ್ ನೀರು ಹರಿಬಿಡಲಾಗಿತ್ತು. ಒಳಹರಿವು 3.35 ಕ್ಯೂಸೆಕ್ ಇತ್ತು. ಒಳಹರಿವಿನ ಪ್ರಮಾಣ ಕಡಿಮೆಯಾಗದ ಪರಿಣಾಮ ನದಿ ತೀರದ ಪ್ರವಾಹ ಬಂದಿದೆ. ಬೆಳೆ ಹಾನಿಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಬಂಡೋಳಿ, ತಿಂಥಣಿ, ಸುಗೂರ, ಚೌಡೇಶ್ವರಿಹಾಳ, ಕುಪಗಲ್, ಹೆಮ್ಮಡಗಿ, ಕರ್ನಾಳ, ಹೆಮನೂರ, ದೇವಪುರ, ಶಾಂತಪುರ, ಹಾವಿನಾಳ ಇತರ ಗ್ರಾಮಗಳ ಜನರು ಪ್ರವಾಹದಿಂದ ಬೆಳೆ ನಾಶವಾಗಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನದಿ ತೀರದ ಕೆಲವು ಜಮೀನುಗಳಿಗೆ ನೀರು ನುಗ್ಗಿದೆ. ನಾಟಿ ಮಾಡಿದ ಭತ್ತ ಕೊಚ್ಚಿಕೊಂಡು ಹೋಗಿದೆ. ತಿಂಥಣಿ ಸೇತುವೆ ಕೆಳಗೆ ನೀರು ಭೋರ್ಗರೆಯುತ್ತಿದೆ. ತಿಂಥಣಿ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮುಳುಗಡೆಯಾಗಿದೆ. ಸಂಚಾರಕ್ಕೆ ಶಾಂತಪುರ ರಸ್ತೆ ಬಳಸುವಂತಾಗಿದೆ.
ನೈಸರ್ಗಿಕವಾಗಿ ತಾಲ್ಲೂಕು ಸುರಕ್ಷಿತವಾಗಿದೆ. 4 ಲಕ್ಷ ಕ್ಯುಸೆಕ್‍ವರೆಗೂ ನೀರು ಹರಿದರೆ ಯಾವುದೇ ತೊಂದರೆಯಾಗುವುದಿಲ್ಲ. ಕೇವಲ ನದಿ ಸನಿಹದ ಜಮೀನುಗಳಿಗೆ ಮಾತ್ರ ಹಾನಿಯಾಗುತ್ತದೆ. 4.5 ಕ್ಯುಸೆಕ್‍ಗಿಂತ ಹೆಚ್ಚು ನೀರು ಹರಿದರೆ ನದಿ ತೀರದ ಗ್ರಾಮಗಳ ಸನಿಹ ನೀರು ಬರುತ್ತದೆ.
ಮಾಸದ ಪ್ರವಾಹದ ಭೀಕರತೆ: 2009ರ ಅಕ್ಟೋಬರ್‌ನಲ್ಲಿ ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ಪ್ರವಾಹ ಉಂಟಾಗಿತ್ತು. ನದಿ ತೀರದ ಗ್ರಾಮಗಳ ಜನರ ಸ್ಥಿತಿ ಅಯೋಮಯವಾಗಿತ್ತು.
ಪ್ರವಾಹ ಪಿಡೀತರ ಸುರಕ್ಷತೆಗೆ ಅಂದಿನ ಸರ್ಕಾರ ‘ಆಸರೆ’ ಯೋಜನೆಯಡಿ ಬಂಡೋಳಿ, ಮತ್ತು ತಿಂಥಣಿ ಗ್ರಾಮಸ್ಥರಿಗೆ ಮನೆಗಳನ್ನು ನಿರ್ಮಿಸಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಂಥಣಿಯ ಮೌನೇಶ್ವರ ದೇವಸ್ಥಾನದಲ್ಲಿ ನಿರಾಶ್ರಿತರೊಂದಿಗೆ ದೀಪಾವಳಿ ಆಚರಿಸಿದ್ದರು.
2019ರಲ್ಲಿ ಮತ್ತೆ ಭೀಕರ ಪ್ರವಾಹ ಉಂಟಾಯಿತು. ದಾಖಲೆಯ 6.5 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಒಂದು ವಾರದವರೆಗೂ ಪ್ರವಾಹ ನಿರಂತರ ಕಾಡಿತ್ತು. ನಿರಾಶ್ರಿತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡಯುವಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.