ADVERTISEMENT

ನಾರಾಯಣಪುರ: ಪ್ರಥಮ ಪಿಯುಗೆ ಅರ್ಧದಷ್ಟು ಪ್ರವೇಶಾತಿ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:30 IST
Last Updated 27 ಜೂನ್ 2024, 5:30 IST
ನಾರಾಯಣಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡ
ನಾರಾಯಣಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡ    

ನಾರಾಯಣಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆ ಎದ್ದು ಕಾಣುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಿಯು ಪ್ರಥಮ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಅರ್ಧದಷ್ಟು ಕುಸಿದಿದೆ.

‘ಕಳೆದ ವರ್ಷ (2023) ಪಿಯು ಪ್ರಥಮ ವರ್ಷಕ್ಕೆ 123 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ದ್ವಿತೀಯ ಪಿಯುಗೆ 95 ವಿದ್ಯಾರ್ಥಿಗಳ ನೋಂದಾಯಿಸಿದ್ದರು. ಈ ವರ್ಷ (2024) ಪಿಯು ಪ್ರಥಮ ವರ್ಷಕ್ಕೆ 64 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ದ್ವಿತೀಯ ಪಿಯುನಲ್ಲಿ 89 ವಿದ್ಯಾರ್ಥಿಗಳಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಎಂದು ಜಿ.ಎಂ.ಗಾಣಗೇರ ಮಾಹಿತಿ ನೀಡುತ್ತಾರೆ.

ಪಿಯು ಪ್ರವೇಶ ಕೊರತೆಗೆ ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ನಾರಾಯಣಪುರ ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿನ ಪ್ರೌಢಶಾಲೆಗಳಲ್ಲಿ ಕಡಿಮೆ ಫಲಿತಾಂಶ ಲಭಿಸಿದ್ದು ಕಾರಣ ಎನ್ನಲಾಗುತ್ತಿದೆ.

ADVERTISEMENT

ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜು ಸುಸಜ್ಜಿತ ಕಟ್ಟಡ ಹೊಂದಿದೆ. ಹೊಸದಾಗಿ 8 ಕೊಠಡಿ ನಿರ್ಮಿಸಲಾಗಿದ್ದು, ವಿಶಾಲವಾದ ಮೈದಾನವಿದೆ. ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ ಸೌಲಭ್ಯವಿದೆ. ವಿಷಯವಾರು ಎಲ್ಲಾ ಉಪನ್ಯಾಸಕರಿದ್ದಾರೆ ಎಂದು ಕಾಲೇಜು ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಲೇಜಿನಲ್ಲಿ ಡೆಸ್ಕ್‌ಗಳ ಕೊರತೆ ಇದ್ದು ಶೀಘ್ರವೇ ಶಿಕ್ಷಣ ಇಲಾಖೆ ಗಮನಿಸಿ ವಿದ್ಯಾರ್ಥಿಗಳಿಗೆ ಡೆಸ್ಕ್‌ಗಳ ವ್ಯವಸ್ಥೆ ಕಲ್ಪಿಸಬೇಕು
ಚಿದಂಬರ ದೇಸಾಯಿ ಕಾಲೇಜು ಅಭಿವೃದ್ದಿ ಮಂಡಳಿ ಉಪಾಧ್ಯಕ್ಷ
ನಾರಾಯಣಪುರ ಸುತ್ತಮುತ್ತಲಿನ ಹಳ್ಳಿಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲ. ಆದ್ದರಿಂದ ಬಸ್ ಸೌಕರ್ಯ ಕಲ್ಪಿಸಬೇಕು
ಶರಣಪ್ಪ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.