ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ದಸರಾ ಹಬ್ಬದ ಅಂಗವಾಗಿ ನಡೆಯುವ ನವರಾತ್ರಿ ಉತ್ಸವದಲ್ಲಿ ಧಾರ್ಮಿಕ ಭಾವನೆಗಳ ಆಸಕ್ತರಿಗೆ ರಸದೌತಣ ನೀಡುತ್ತದೆ. ಕೆಲ ಮಠ ಹಾಗೂ ಮಂದಿರದಲ್ಲಿ ಹಲವಾರು ವರ್ಷದಿಂದ ಮನುಕುಲದ ಒಳತಿಗಾಗಿ ಸಾಕಷ್ಟು ಚಿಂತನ ಮಂಥನಗಳು ನಡೆಯುತ್ತವೆ. ನವರಾತ್ರಿಯ ಉತ್ಸವದ ಅಂಗವಾಗಿ ವಿಶಿಷ್ಟವಾಗಿ ಪೂಜೆ, ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ನಡೆದಿವೆ.
ನವರಾತ್ರಿ ಅಂಗವಾಗಿ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ದುರ್ಗಾದೇವಿ, ಅಂಬಾ ಭವಾನಿ, ತುಳಜಾ ಭವಾನಿ, ಭಗುಳಾಂಬಿಕೆ, ಮಹಾಲಕ್ಷ್ಮಿ, ಚಾಮುಂಡೇಶ್ವರಿ ದೇವಿಗೆ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ. 9 ದಿನಗಳ ಕಾಲ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಯಾದಗಿರಿ ನಗರದ ವಿವಿಧೆಡೆ ದಸರಾ ಹಬ್ಬದ ಅಂಗವಾಗಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸ್ಟೇಷನ್ ಏರಿಯಾ, ಡಾ.ಬಾಬು ಜಗಜೀವನ ರಾಂ ನಗರ, ಶಹಾಪುರಪೇಟ, ಬೋವಿವಾಡ ನಗರ, ಆತ್ಮಲಿಂಗ ದೇವಸ್ಥಾನದ ಮಲ್ಲಿನಾಥ ಆಶ್ರಮ, ಕೋಟೆ ಬಳಿ ಸೇರಿದಂತೆ ವಿವಿಧೆಡೆ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ರೈಲ್ವೆ ಸ್ಟೇಷನ್ ಏರಿಯಾದ ಶಿವಾಜಿನಗರದ ಬಳಿ ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ಹಿಂದೂ ಸೇವಾ ಸಮಿತಿ ವತಿಯಿಂದ ದಸರಾ ಆಚರಿಸಲಾಗುತ್ತಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ರೈಲ್ವೆ ನಿಲ್ದಾಣ ಹಾಗೂ ದೇವಸ್ಥಾನದ ವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಬಹು ಆಕರ್ಷವಾಗಿ ದೀಪಾಲಂಕಾರ ಗಮನ ಸೆಳೆಯುತ್ತದೆ.
ಭುವನೇಶ್ವರಿ ಬೆಟ್ಟ: ನಗರದ ಕೋಟೆ ಪ್ರದೇಶದಲ್ಲಿ ಭುವನೇಶ್ವರಿ ದೇವಿ ಬೆಟ್ಟದಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಪೂಜೆ ಕೈಂಕರ್ಯಗಳು ನೆರವೇರಿದವು.
ಶರಣ ನಗರ: ನಗರದ ಶರಣ ನಗರದಲ್ಲಿ ಜೈ ಭವಾನಿ ತರುಣ ಸಂಘದ ವತಿಯಿಂದ ನವರಾತ್ರಿ ಉತ್ಸವ ನಿಮಿತ್ತ ಜೈ ಜಿನೇಂದ್ರ ಗೆಳೆಯರ ಬಳಗ ದಿಂದ ಉತ್ಸವ ಹಮ್ಮಿಕೊಳ್ಳಲಾಗಿದೆ.
ಕಳೆದ 26 ವರ್ಷಗಳಿಂದ ಜೈ ಭವಾನಿ ತರುಣ ಸಂಘದ ಯುವಕರು ನವರಾತ್ರಿ ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಣೆ ಮಾಡುತ್ತಿದ್ದಾರೆ. ಅಂಭಾ ಭವಾನಿ ದೇವಿಯ ಸುಮಾರು 22 ಕೆ.ಜಿ ಬೆಳ್ಳಿ ಮೂರ್ತಿ ಅತ್ಯಂತ ಆಕರ್ಷಣೀಯವಾಗಿದೆ. ಪ್ರತಿಷ್ಠಾಪನೆ ದಿನ ನಗರದಲ್ಲಿ ಮೆರವಣಿಗೆ ನಡೆಯಿತು.
ವಿಜಯ ದಶಮಿ ದಿನ ಸಂಜೆ ಅಂಬಾ ಭವಾನಿ ದೇವಸ್ಥಾನದಿಂದ ಹೊರಡುವ ಸಾವಿರಾರು ಭಕ್ತರ ಮಧ್ಯೆ ಮೆರವಣಿಗೆ ಸಂಭ್ರಮದಿಂದ ಬನ್ನಿ ಮಂಟಪದವ ರೆಗೆ ಸಾಗುತ್ತದೆ. ಈ ವೇಳೆ ಜಂಬೂ ಸವಾರಿ ನಡೆಯಲಿದೆ. ಅದೇ ದಿನ ರಾತ್ರಿ ಸಾವಿರಾರು ಯುವಕರು ಯಾದಗಿರಿ ಯಿಂದ ಶ್ರೀಕ್ಷೇತ್ರ ತುಳಜಾಪುರಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ.
ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ
ದಸರಾದಲ್ಲಿ ಪ್ರಮುಖವಾಗಿ ಆಕರ್ಷಣೆ ಮಾಡುವಂತಹದ್ದು ದಾಂಡಿಯಾ ನೃತ್ಯ. ದೇವಿ ಪ್ರತಿಷ್ಠಾಪಿಸಿದ ದಿನದಿಂದ 9 ದಿನಗಳ ಕಾಲ ರಾತ್ರಿ 9 ಗಂಟೆಯಿಂದ 12ರ ತನಕ ನೃತ್ಯ ಮನಮೋಹಕವಾಗಿ ನಡೆಸಲಾಗುತ್ತಿದೆ. ಇದನ್ನು ನೋಡಲು ಜನರು ಕಿಕ್ಕಿರಿದು ತುಂಬಿರುತ್ತಾರೆ.
ನಗರದ ಸ್ಟೇಷನ್ ಏರಿಯಾದ ಶಿವಾಜಿನಗರದ ಬಳಿ ಪ್ರತಿಷ್ಠಾಪಿಸಿರುವ ದೇವಿಗೆ ಪ್ರತಿದಿನ ಎರಡು ಬಾರಿ ಸೀರೆ ಉಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ದೇವಿಗೆ ಉಡಿಸಿದ ಸೀರೆಯನ್ನು ಬಡ ಮಹಿಳೆಯರಿಗೆ ಹಾಗೂ ವೃದ್ಧರಿಗೆ ದಾನ ಮಾಡುತ್ತಾರೆ.
ಅಂಬಾಭವಾನಿ ದೇವಿ ಮೂರ್ತಿ 5 ಅಡಿ ಎತ್ತರವಿದೆ. ಮೂರ್ತಿ ಪ್ರತಿಷ್ಠಾಪಿಸುವ ಮುನ್ನ ಭೀಮಾನದಿಗೆ ತೆರಳಿ ಅಲ್ಲಿ ಗಂಗಾಸ್ನಾನ ಪೂಜೆ ನೆರವೇರಿಸಲಾಗುತ್ತದೆ. ಆ ನಂತರ ಮತ್ತೆ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಗರದಲ್ಲಿ ಜರುಗುವ ದೊಡ್ಡ ಹಬ್ಬ ಇದಾಗಿದೆ.
ಅಲ್ಲದೇ ನಗರದ ವಿವಿಧೆಡೆ ದಾಂಡಿಯಾ ನೃತ್ಯ ಪ್ರದರ್ಶನವಿದ್ದು, ಅನೇಕ ಯುವತಿಯರು ನೃತ್ಯದಲ್ಲಿ ಪಾಲ್ಗೊಂಡು ದೇವಿಯನ್ನು ಆರಾಧಿಸುತ್ತಿದ್ದಾರೆ. ಆಯುಧ ಪೂಜೆ ದಿನ ಹಿಂದೂ ಸೇವಾ ಸಮಿತಿ ವತಿಯಿಂದ ಧರ್ಮ ಸಭೆ ಆಯೋಜಿಸಲಾಗುತ್ತದೆ. ಆ ದಿನ ಅಬ್ಬೆತುಮಕೂರಿನ ಗಂಗಾಧರ ಸ್ವಾಮೀಜಿಯಿಂದ ಪ್ರವಚನ ನಡೆಸಲಾಗುತ್ತದೆ.
ಶಹಾಪುರ: ನಗರದ ಕುಂಬಾರಗೇರಿ ಮಠದ ಸೂಗೂರೇಶ್ವರ ಶಿವಾಚಾರ್ಯರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳೆದ 25 ವರ್ಷದಿಂದ ಚಾಚೂ ತಪ್ಪದೆ ನವರಾತ್ರಿಯ ಉತ್ಸವದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ ಗೋಷ್ಠಿಗಳನ್ನು ನಡೆಸಲಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದರ ಜತೆಗೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬರಲಾಗುತ್ತಿದೆ.
ಅದರಂತೆ ನಗರದ ವಿದ್ಯಾನಗರದ ಬಡಾವಣೆಯಲ್ಲಿ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ 27 ವರ್ಷದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಸಮುದಾಯದ ಮಹಿಳೆಯರು ರಾತ್ರಿ ಗರ್ಭಾ ನೃತ್ಯವನ್ನು ಮಾಡುವುದರ ಮೂಲಕ ಗಮನ ಸೆಳೆಯುತ್ತಾರೆ. ನವರಾತ್ರಿಯ ಅಂಗವಾಗಿ ದೇವತಿಗೆ ವಿಶೇಷ ಪೂಜೆ ಅಲಂಕಾರವನ್ನು ಮಾಡಲಾಗುತ್ತದೆ ಎನ್ನುತ್ತಾರೆ ಸಮುದಾಯದ ಮುಖಂಡ ತುಳಜಾರಾಮ ಬಾಸುತ್ಕರ.
ನವರಾತ್ರಿ ಅಂಗವಾಗಿ ಮಹಿಳೆಯರು ಬೆಳಿಗ್ಗೆ ಬನ್ನಿ ಮಂಟಪಕ್ಕೆ ತೆರಳಿ 9 ದಿನಗಳ ಕಾಲ ಪೂಜೆ ಸಲ್ಲಿಸಲು ತಂಡೋಪತಂಡವಾಗಿ ತೆರಳುತ್ತಾರೆ.
ಸುರಪುರ: ನವರಾತ್ರಿ ಬಂತೆಂದರೆ ನಗರ ಸಂಭ್ರಮಿಸುತ್ತದೆ. ಸುರಪುರದ ಕನ್ನಡ ಸಾಹಿತ್ಯ ಸಂಘ ಮತ್ತು ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ ಕ್ರಮವಾಗಿ 83 ಮತ್ತು 82ನೇ ನಾಡಹಬ್ಬ ಆಚರಿಸುತ್ತಿವೆ.
ಸುರಪುರದ ಸಂಘ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನ ಸಹಯೋಗದಲ್ಲಿ ಅ 3ರಂದು ಆಯೋಜಿಸಿದ್ದ ನಾಡದೇವತೆ ಮೆರವಣಿಗೆಯಲ್ಲಿ 11ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಗಮನ ಸೆಳೆದವು.
ಗರುಡಾದ್ರಿ ಕಲಾ ಮಂದಿರದಲ್ಲಿ ಪ್ರತಿ ದಿನ 9 ದಿನಗಳವರೆಗೆ ಸಂಜೆ ವಿವಿಧ ಶಾಲೆ, ಸಂಘಗಳಿಂದ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ರಂಗಂಪೇಟೆಯ ಸಂಘದಲ್ಲಿ 5 ದಿನಗಳವರೆಗೆ ಸಾಹಿತಿ, ಚಿಂತಕರು, ನಗೆ ಕಲಾವಿದರಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ, ಪ್ರತಿಭಾವಂತರಿಗೆ ಗೌರವ ನಡೆಯುತ್ತದೆ.
ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪ್ರತಿ ದಿನ ವಿಶೇಷ ಪೂಜೆ, ನಂದಾದೀಪ, ವಿಜಯದಶಮಿಯ ದಿನ ಪಲ್ಲಕ್ಕಿ ಉತ್ಸವ, ಶಮಿವೃಕ್ಷ ಪೂಜೆ ನಡೆಯುತ್ತದೆ. ದೇವರು ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿದ ನಂತರವಷ್ಟೇ ಬನ್ನಿ ವಿನಿಮಯ ನಡೆಯುತ್ತದೆ. ರಂಗಂಪೇಟೆಯ ಅಂಬಾಭವಾನಿ ದೇವಸ್ಥಾನದಲ್ಲಿ ದೇವಿ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ದಿನ ಪೂಜೆ, ಭಜನೆ, ಆಯೋಜಿಸಲಾಗಿದೆ. ಗಡ್ಡದ ಅವರ ಮನೆಯಲ್ಲಿ ದುರ್ಗಾಷ್ಟಮಿ ವಿಶಿಷ್ಟವಾಗಿ ನಡೆಯುತ್ತದೆ. ಸೋಮವಂಶ ಆರ್ಯ ಕ್ಷತ್ರಿಯ ಸಮಾಜದವರು ಹಳೆ ಬಸ್‌ನಿಲ್ದಾಣದ ಹತ್ತಿರ ದೇವಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಗಳಲ್ಲಿ ಮಹಾನವಮಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಪ್ರಯೊಂದು ಗ್ರಾಮ ದೇವತೆ ದೇವಸ್ಥಾನಗಳಲ್ಲಿ ಘಟಸ್ಥಾಪನೆ ಮಾಡಿ ನಂದಾದೀಪ ಬೆಳಗಿಸ ಲಾಗುತ್ತದೆ. ಕೊಡೇಕಲ್ಲ ಹಾಗೂ ಕನ್ನೇಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಶ್ರೀದೇವಿಯ ಮಹಾತ್ಮೆಯನ್ನು ತಿಳಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಶ್ರೀದೇವಿ ಪುರಾಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ದಶಮಿ ದಿನದಂದು ಪುರಾಣ ಸಮಾಪ್ತಿಯಾಗಲಿದೆ.
ನವಮಿ ದಿನದಂದು ಗ್ರಾಮೀಣ ಭಾಗದ ಮನೆಗಳಲ್ಲಿ ಶ್ರಿದೇವಿ ಪೂಜೆಯ ಜೊತೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಪೂಜೆ ಸಲ್ಲಿಸುವುದು ವಾಡಿಕೆ ಇದೆ. ವಜ್ಜಲ ಗ್ರಾಮದಲ್ಲಿ ವಿಜಯ ದಶಮಿಯಂದು ಆಯುಧಗಳ ಪೂಜೆ ಸಂದರ್ಭದಲ್ಲಿ ಆಯುಧಗಳೊಂದಿಗೆ ಕುಲಕರ್ಣಿ ಅವರ ಮನೆಯಿಂದ ಪೆನ್ನು ತೆಗೆದುಕೊಂಡು ಹೋಗಿ ಶಮಿ ವೃಕ್ಷದ ಬಳಿ ಇಟ್ಟು ಪೂಜೆ ಸಲ್ಲಿಸುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.