ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ 100ಕ್ಕಿಂತ ಹೆಚ್ಚು ರೇಷ್ಮೆ ಬೆಳೆಗಾರರಿದ್ದು, ತಾವು ಬೆಳೆಸಿರುವ ಗೂಡು ಮಾರಾಟ ಮಾಡಲು ದೂರದ ಮಾರುಕಟ್ಟೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದ ಕಾರಣ ಸಾವಿರಾರು ರೂಪಾಯಿ ಖರ್ಚು ಮಾಡಿ ದಕ್ಷಿಣ ಕರ್ನಾಟಕದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಇದೆ.
ಯಾದಗಿರಿ, ಸುರಪುರ, ಹುಣಸಗಿ, ಗುರುಠಮಕಲ್, ವಡಗೇರಾ ತಾಲ್ಲೂಕಿನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರಿದ್ದರೆ, ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಬೆಳೆಗಾರರಿದ್ದಾರೆ.
21 ದಿನಗಳ ರೇಷ್ಮೆ ಹುಳು ಆರೈಕೆ ಮಾಡಿ ಗೂಡು ಕಟ್ಟಿದ ನಂತರ ದೂರದ ರಾಮನಗರ, ಕೋಲಾರ, ಶಿಡ್ಲಘಟ್ಟ ಮತ್ತಿತರ ಕಡೆಗೆ ಗೂಡು ತೆಗೆದುಕೊಂಡು ಹೋಗಬೇಕಿದೆ. 10ರಿಂದ 12 ಗಂಟೆ ಪ್ರಯಾಣ ಮಾಡಬೇಕಿದ್ದು, ವಾಹನ ಬಾಡಿಗೆಗೆ ಸುಮಾರು ₹15–20 ಸಾವಿರ ಖರ್ಚು ಮಾಡಬೇಕು. ಗೂಡಿಗೆ ಕಾವು ಜಾಸ್ತಿಯಾಗಿ ಉತ್ತಮ ದರ ಸಿಗುವುದಿಲ್ಲ ಎನ್ನುವುದು ಬೆಳೆಗಾರರ ಆತಂಕವಾಗಿದೆ.
ಸ್ಥಳೀಯ ಮಟ್ಟದಲ್ಲಿ ರೇಷ್ಮೆ ಮಾರುಕಟ್ಟೆಗಳಿದ್ದರೂ ದರ ಕಡಿಮೆ ಇರುವುದರಿಂದ ಅಲ್ಲಿಗೆ ತೆರಳಿದರೂ ಯಾವುದೇ ಲಾಭವಾಗುವುದಿಲ್ಲ ಎನ್ನುವುದು ಬೆಳೆಗಾರರು ಹೇಳುವ ಮಾತಾಗಿದೆ. ಅಲ್ಲದೇ ಹಣ ಗೂಡು ನೀಡಿದ ನಂತರ ತಕ್ಷಣವೇ ನೀಡುವುದಿಲ್ಲ. ಹೀಗಾಗಿ ಇಲ್ಲಿ ಯಾವುದೇ ಲಾಭವಿಲ್ಲ ಎನ್ನುತ್ತಾರೆ ಗೋಪಾಲ ಕೃಷ್ಣಪ್ಪ ರಾಠೋಡ್.
‘ಕಲಬುರಗಿ, ಜೇವರ್ಗಿ, ಹುಮಾನಬಾದ್, ವಿಜಯಪುರ, ಲಿಂಗಸಗೂರಿನಲ್ಲಿ ಸಣ್ಣಮಟ್ಟದ ಮಾರುಕಟ್ಟೆಗಳಿವೆ. ಇವುಗಳನ್ನು ಪುನಶ್ಚೇತನಗೊಳಿಸಬೇಕು. ಆದರೆ, ರೀಲರ್ಸ್‌ಗಳ ಕೊರತೆ ಇದೆ. ಜೊತೆಗೆ ಹಣವನ್ನು ಒಂದು ತಿಂಗಳು ನಂತರ ನೀಡುತ್ತಾರೆ. ಅಲ್ಲದೇ ಬೇಕಾಬಿಟ್ಟಿ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ದೂರವಾದರೂ ಸರಿ ರಾಮನಗರ, ಕನಕಪುರಕ್ಕೆ ತೆರಳುತ್ತೇವೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ನಮಗೆ ಸಹಾಯ ಹಸ್ತ ಚಾಚಬೇಕು’ ಎಂದು ಅವರು ಒತ್ತಾಯಿಸುತ್ತಾರೆ.
ರೇಷ್ಮೆ ಗೂಡುಕಟ್ಟದ ಬಗ್ಗೆ ಬೆಳೆಗಾರರು ಮಾಹಿತಿ ನೀಡಲಿ. ಜಿಲ್ಲೆಯಾದ್ಯಂತ ಬೆಳೆಗಾರರು ಇದ್ದರೆ ಮಾರುಕಟ್ಟೆ ಇರುತ್ತಿತ್ತು. ಕೆಲವರು ಇರುವುದರಿಂದ ಮಾರುಕಟ್ಟೆ ಸ್ಥಾಪನೆ ಆಗಿಲ್ಲ- ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಸ್ಥಳೀಯವಾಗಿ ಮಾರುಕಟ್ಟೆ ಇದ್ದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಅಲ್ಲದೇ ಅಧಿಕಾರಿಗಳು ಬೆಳೆಗಾರರಿಗೆ ಕಾರ್ಯಾಗಾರಗಳನ್ನು ಮಾಡಬೇಕುಅನಿತಾ ಗೋವಿಂದ ಚವಾಣ್, ರೇಷ್ಮೆ ಬೆಳೆಗಾರರು
ರೇಷ್ಮೆ ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಸ್ಥಳೀಯವಾಗಿ ಖರೀದಿ ಮಾಡಿದರೆ ಅನುಕೂಲವಾಗುತ್ತದೆ- ಕಿಶನ್ ರಾಥೋಡ್, ರೇಷ್ಮೆ ಬೆಳೆಗಾರ
ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಇದ್ದರೂ ನಾವು ಎಷ್ಟೇ ಖರ್ಚಾದರೂ ದೂರದ ಪ್ರದೇಶಗಳಲ್ಲಿ ಹೋಗಿ ಮಾರಾಟ ಮಾಡುತ್ತೇವೆ. ಸರಿಯಾದ ಬೆಲೆ ಸಿಕ್ಕರೆ ಸ್ಥಳೀಯವಾಗಿ ಮಾರಾಟ ಮಾಡಬಹುದು- ವಾಸುದೇವ ಪುಲ್‌ಸಿಂಗ್, ರೇಷ್ಮೆ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.