ವಡಗೇರಾ: ನೂತನ ತಾಲ್ಲೂಕು ಕೇಂದ್ರವಾಗಿ ಏಳು ವರ್ಷಗಳೇ ಕಳೆಯುತ್ತಾ ಬಂದರೂ, ಇಲ್ಲಿಯವರೆಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸುವ ಕೇಂದ್ರಗಳು, ತಾಂತ್ರಿಕ ಕಾಲೇಜುಗಳು ಗಗನ ಕುಸುಮವಾಗಿವೆ.
ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 65 ಹಳ್ಳಿಗಳು, 4 ತಾಂಡಾಗಳು ಬರುತ್ತವೆ. 2024ರ ಮತದಾರರ ಪಟ್ಟಿ ಪ್ರಕಾರ 1,97,452 ಮತದಾರರು ಇದ್ದಾರೆ.
ವಡಗೇರಾ ತಾಲ್ಲೂಕಿನಲ್ಲಿ ಸುಮಾರು 10 ಸರ್ಕಾರಿ ಪ್ರೌಢಶಾಲೆಗಳು, 2 ವಸತಿ ಶಾಲೆಗಳು, 2 ಖಾಸಗಿ ಶಾಲೆಗಳು ಇವೆ. ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಈ ಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉತ್ತೀರ್ಣರಾಗುತ್ತಾರೆ.
ಆದರೆ 10ನೇ ತರಗತಿಯ ನಂತರ ಐಟಿಐ, ಡಿಪ್ಲಮೊ, ಅರೇ ವೈದ್ಯಕೀಯ ಹಾಗೂ ಇನ್ನಿತರ ಕೌಶಲ್ಯ ಅಭಿವೃದ್ಧಿ ಪಡಿಸುವ ಕಾಲೇಜುಗಳು ಇಲ್ಲದಿರುವದರಿಂದ ಈ ಭಾಗದ ಮಕ್ಕಳು ದೂರದ ಯಾದಗಿರಿ ಇಲ್ಲವೇ ಶಹಾಪೂರಕ್ಕೆ ಹೋಗಿ ತಾಂತ್ರಿಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ.
ವಡಗೇರಾ ಪಟ್ಟಣದಲ್ಲಿ ಹಾಗೂ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೌಶಲ್ಯ ಕೇಂದ್ರಗಳು ಇಲ್ಲದಿರುವದರಿಂದ ಬಡವರ ಮಕ್ಕಳು ದುಬಾರಿ ಶುಲ್ಕ ಭರಿಸಲು ಆಗದೆ ಇರುವುದರಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಸರ್ಕಾರವು ವಡಗೇರಾ ತಾಲ್ಲೂಕನ್ನು ಅತೀ ಹಿಂದುಳಿದ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೂ ವಡಗೇರಾ ಪಟ್ಟಣದಲ್ಲಿ ಒಂದೇ ಒಂದು ಕೌಶಲ್ಯ ಕೇಂದ್ರವನ್ನು ಸರ್ಕಾರ ಸ್ಥಾಪನೆ ಮಾಡಿಲ್ಲ.
ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಲು ಹಾಗೂ ಆರ್ಥಿಕವಾಗಿ ಸದೃಢರಾಗುವಂತಹ ಕೌಶಲ್ಯ ಕೇಂದ್ರಗಳು ತಾಲ್ಲೂಕಿನ ವ್ಯಾಪ್ತಿಯಲ್ಲಿ ಇಲ್ಲದಿರುವದರಿಂದ ಈ ಭಾಗದ ಅನೇಕ ಗ್ರಾಮಗಳ ಗ್ರಾಮಸ್ಥರು ತಮ್ಮ ಕುಟುಂಬ ಸಮೇತವಾಗಿ ದೂರದ ಬೆಂಗಳೂರು, ಮುಂಬೈ, ಹೈದರಾಬಾದ್ ಹಾಗೂ ಇನ್ನಿತರ ಕಡೆ ಗುಳೆ ಹೋಗುತಿದ್ದಾರೆ.
‘ಈ ಭಾಗದಲ್ಲಿ ನಿರುದ್ಯೋಗ, ಬಡತನ ತಪ್ಪಿಸಬೇಕಾದರೆ ಕೌಶಲ್ಯ ಅಭಿವೃದ್ಧಿ ಪಡಿಸುವ ಕೇಂದ್ರಗಳು, ತಾಂತ್ರಿಕ ಕಾಲೇಜುಗಳು ಹಾಗೂ ಇನ್ನಿತರ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕು’ ಎಂಬುದು ಸಾರ್ವಜನಿಕರ ಆಶಯವಾಗಿದೆ.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಈ ಭಾಗದಲ್ಲಿ ತಾಂತ್ರಿಕ ಹಾಗೂ ಕೌಶಲ್ಯ ಅಭಿವೃದ್ಧಿ ಪಡಿಸುವ ಕೇಂದ್ರಗಳನ್ನು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ನಾಗರೀಕರ ಒತ್ತಾಸೆಯಾಗಿದೆ.
ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ತಾಂತ್ರಿಕ ಕಾಲೇಜುಗಳು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ಸರ್ಕಾರ ಕ್ರಮ ಕೈಗೊಂಡಾಗ ಮಾತ್ರ ಈ ಭಾಗದ ಜನರು ಆರ್ಥಿಕವಾಗಿ ಸದೃಢರಾಗುತ್ತಾರೆ
-ಅಶೋಕ ಸಾಹು ಕರಣಗಿ ವಡಗೇರಾ ಗ್ರಾ.ಪಂ. ಅಧ್ಯಕ್ಷ
ವಡಗೇರಾ ಪಟ್ಟಣದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪನೆ ಮಾಡಿದರೆ ಯುವಕರು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿ ಹೊಂದುವುದರ ಜತೆಗೆ ಗುಳೆ ಹೋಗುವದನ್ನು ತಪ್ಪಿಸಬಹುದು
-ಶರಣು ಇಟಗಿ ಕರವೇ ಕಲ್ಯಾಣ ಕರ್ನಾಟಕ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.