ADVERTISEMENT

ಯಾದಗಿರಿ | ತಿಂಗಳಾದರೂ ಸಮವಸ್ತ್ರವೂ ಇಲ್ಲ, ಪುಸ್ತಕವೂ ಇಲ್ಲ

ಜಿಲ್ಲೆಯಲ್ಲಿವೆ 929 ಪ್ರಾಥಮಿಕ, 141 ಪ್ರೌಢಶಾಲೆಗಳು, ಗೋದಾಮಿನಲ್ಲಿ ಸಮವಸ್ತ್ರ

ಬಿ.ಜಿ.ಪ್ರವೀಣಕುಮಾರ
Published 8 ಜುಲೈ 2024, 5:49 IST
Last Updated 8 ಜುಲೈ 2024, 5:49 IST
ಯಾದಗಿರಿ ನಗರದ ಸ್ಟೇಷನ್‌ ಬಜಾರ್‌ ಉರ್ದು ಶಾಲೆಯಲ್ಲಿ ಪಾಠ ಆಲಿಸುತ್ತಿರುವ ಮಕ್ಕಳು
ಯಾದಗಿರಿ ನಗರದ ಸ್ಟೇಷನ್‌ ಬಜಾರ್‌ ಉರ್ದು ಶಾಲೆಯಲ್ಲಿ ಪಾಠ ಆಲಿಸುತ್ತಿರುವ ಮಕ್ಕಳು   

ಯಾದಗಿರಿ: ಪ್ರಸಕ್ತ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ಒಂದೂವರೆ ತಿಂಗಳು ಆಗುತ್ತಾ ಬಂದಿದೆ. ಆದರೆ, ಶಾಲೆಗಳಿಗೆ ಸಮರ್ಪಕವಾಗಿ ಪಠ್ಯ‍‍‍ಪುಸ್ತಕ ಮತ್ತು ಸಮವಸ್ತ್ರ ತಲುಪಿಲ್ಲ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಪ್ರಭಾವ ಬೀರಿದೆ.

ಜಿಲ್ಲೆಯಲ್ಲಿ 929 ಪ್ರಾಥಮಿಕ, 141 ಪ್ರೌಢಶಾಲೆಗಳಿದ್ದು, ಕೊರತೆಗಳ ಮಧ್ಯೆಯೂ ಮೇ 29ರಂದು ಶಾಲಾರಂಭವಾಗಿತ್ತು. ಅಂದಿನಿಂದ ಜಿಲ್ಲೆಗೆ ಪಠ್ಯಪುಸ್ತಕ, ಸಮವಸ್ತ್ರ ಸಿಕ್ಕಿಲ್ಲ.

ಕ್ಲಸ್ಟರ್ ಮೂಲಕ ಕೆಲ ಶಾಲೆಗಳಿಗೆ ಒಂದು ಜೊತೆ ಮಕ್ಕಳಿಗೆ ಹಳೆಯ ಸಮವಸ್ತ್ರದ ಬಟ್ಟೆ ವಿತರಿಸಲಾಗಿದೆ. ಇನ್ನೂ ಸಂಪೂರ್ಣವಾಗಿ ಎಲ್ಲಾ ಶಾಲೆಗಳಿಗೆ ತಲುಪಿಲ್ಲ. ಆದರೆ, ಇನ್ನೊಂದು ಜೊತೆ ಸಮವಸ್ತ್ರ ಬಾರದೆ ಗೋದಾಮಿನಲ್ಲಿ ಉಳಿದುಕೊಂಡಿವೆ.

ADVERTISEMENT

ಒಂದು ಜೊತೆ ಸಮವಸ್ತ್ರವನ್ನೇ ಮಕ್ಕಳು ದಿನಾಲು ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಬಟ್ಟೆ ತೊಳೆಯುವುದು ಯಾವಾಗ ಎಂದು ಪ್ರಶ್ನಿಸುತ್ತಾರೆ ಶಾಲಾ ಮಕ್ಕಳ ಪಾಲಕರು.

ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿನ ನಮ್ಮ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ವಿತರಿಸಿಲ್ಲ. ನಾಳೆ ಬರುತ್ತವೆ ಎನ್ನುತ್ತಲೇ ಈಗ ತಿಂಗಳು ಕಳೆದು ಹೋಗಿದೆ ಎನ್ನುತ್ತಾರೆ ಶಾಲಾ ಮಗುವಿನ ಪಾಲಕರು ಒಬ್ಬರು.

‘ಹಲವು ದಿನದ ಹಿಂದೆ ಇನ್ನೊಂದು ಜತೆ ಸಮವಸ್ತ್ರದ ಬಟ್ಟೆ ಬಂದಿವೆ. ಆದರೆ, ಗುಣಮಟ್ಟ ಪರಿಶೀಲಿಸುವ ಗೋದಾಮಿನಲ್ಲಿ ಉಳಿದುಕೊಂಡಿವೆ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿ ಒಬ್ಬರು.

‘ಇನ್ನೊಂದು ರಗಳೆ ಎಂದರೆ ಮಕ್ಕಳಿಗೆ ಸಮವಸ್ತ್ರದ ಜತೆಗೆ ಶೂ ವಿತರಣೆಯಾಗಿಲ್ಲ. ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಶೂ ಖರೀದಿಸಲು ಆಯಾ ಶಾಲಾ ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಖಾತೆಗೆ ಹಣ ಸಂದಾಯ ಮಾಡುತ್ತಾರೆ. ನಂತರ ಮಕ್ಕಳ ಖಾತೆಗೆ ಹಣ ಸಂದಾಯ ಮಾಡಬೇಕು. ಆದರೆ, ಇಂದಿಗೂ ಶಾಲೆಯ ಮುಖ್ಯ ಶಿಕ್ಷಕ ಖಾತೆಗೆ ಹಣ ಸಂದಾಯವಾಗಿಲ್ಲ. ಅಧಿಕಾರಿಗಳು ನಮಗೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಶಾಲಾ ಮಕ್ಕಳ ಪಾಲಕರ ಆರೋಪವಾಗಿದೆ.

ಸರ್ಕಾರದಿಂದ ಈಗಾಗಲೇ ಸಮವಸ್ತ್ರ ಬಂದಿದೆ. ಯಾದಗಿರಿ ನಗರದ ಗೋದಾಮಿನಲ್ಲಿ ಇರಿಸಲಾಗಿದೆ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಈವರೆಗೂ ಸಮವಸ್ತ್ರ ಹಂಚಿಕೆಗೆ ಯಾರೊಬ್ಬರಿಗೂ ವಹಿಸದ ಕಾರಣ ವಿತರಣೆ ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ಶಹಾಪುರ ತಾಲ್ಲೂಕಿನಲ್ಲಿ 54,218 ವಿದ್ಯಾರ್ಥಿಗಳು, ಸುರಪುರ 68,770, ಯಾದಗಿರಿ 51,115 ಸೇರಿದಂತೆ 1,74,103 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಸುರಪುರ ವಲಯಕ್ಕೆ ಸಮವಸ್ತ್ರ ಬಂದಿಲ್ಲ.

‘ಮೊದಲೇ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶೈಕ್ಷಣಿಕ ಪ್ರಗತಿಯಲ್ಲಿ ಹಿಂದೆ ಉಳಿದಿದೆ. ಇನ್ನು ಪಠ್ಯಪುಸ್ತಕವೇ ಇಲ್ಲದಿದ್ದರೆ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹೇಗೆ ಸಾಧ್ಯ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಬಿರಾದಾರ ಹಾಗೂ ಬಸವರಾಜ ಚನ್ನೂರ ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸಿ ಕೊಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿಮನಿ, ವೆಂಕಟೇಶ ಅರಳಿಗಿಡದ ಒತ್ತಾಯಿಸಿದ್ದಾರೆ.

‘ಕಾಯಂ ಬಿಇಒ ನೇಮಿಸಿ’

ಶಹಾಪುರ: ಯಾದಗಿರಿ ಜಿಲ್ಲೆ ಈಗಾಗಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಕೊನೆ ಸ್ಥಾನಕ್ಕೆ ಇಳಿದಿದೆ. ಶಿಕ್ಷಕರ ಕೊರತೆ ಹಾಗೂ ಇನ್ನಿತರ ಕಾರಣಗಳು ಅದರಲ್ಲಿ ಅಡಗಿವೆ. ಇವೆಲ್ಲದರ ನಡುವೆ ಎರಡು ತಿಂಗಳ ಹಿಂದೆ ಸೇವಾ ನಿವೃತ್ತಿ ಹೊಂದಿದ ಶಿಬಾ ಜಲಿಯನ್ ಅವರ ಸ್ಥಾನಕ್ಕೆ ಹೆಚ್ಚುವರಿ ಬಿಇಒ ಹುದ್ದೆಯನ್ನು ಕಲಬುರಗಿಯ ಜಾಹೇದ್‌ ಬೇಗಂ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಕಚೇರಿಗೆ ಬರುವುದು ವಾರದಲ್ಲಿ ಮೂರು ದಿನ ಮಾತ್ರ ಎಂಬ ಆರೋಪ ಶಿಕ್ಷಕರಿಂದ ಕೇಳಿ ಬರುತ್ತಲಿದೆ. ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೇ ಶಾಲೆಗೆ ಚಕ್ಕರ್‌ ಹೊಡೆಯುತ್ತಿರುವಾಗ ಇನ್ನೂ ಮೇಲಧಿಕಾರಿ ವಾರದಲ್ಲಿ ಮೂರು ದಿನ ಬಂದರೆ ಏನು ಗತಿ? ಶಿಕ್ಷಕರು ಶಾಲೆಗೆ ಬರದಿದ್ದಾಗ ಯಾರನ್ನು ಕೇಳಬೇಕು ಎಂದು ಪ್ರಶ್ನಿಸುತ್ತಾರೆ ಶಾಲಾ ಮಕ್ಕಳ ಪಾಲಕರು. ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಬಿಇಒ ಹುದ್ದೆಗೆ ಅಗತ್ಯವಿರುವ ಅರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಕ್ಕಳ ಪಾಲಕರು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಸಿಗದ ಸಮವಸ್ತ್ರ

ಗುರುಮಠಕಲ್‌: ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಶಾಲೆ ಆರಂಭಗೊಂಡು ತಿಂಗಳ ಮೇಲಾದರೂ ಇನ್ನೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಲಭಿಸಿಲ್ಲ. ತಾಲ್ಲೂಕಿನಲ್ಲಿ 32 ಸರ್ಕಾರಿ ಕಿರಿಯ ಪ್ರಾಥಮಿಕ 76 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ 19 ಸರ್ಕಾರಿ ಪ್ರೌಢ ಶಾಲೆಗಳಿವೆ. ಅಜಲಾಪುರ ಕೊಂಕಲ್‌ ಮಾಧ್ವಾರ ಅನಪುರ ಎಲ್ಹೇರಿ ಕಂದಕೂರ ಕ್ಲಸ್ಟರ್ ವ್ಯಾಪ್ತಿಯಲ್ಲಿ ಈಗಾಗಲೇ ಪುಸ್ತಕಗಳ ವಿತರಣೆಯಾಗಿದೆ. ಗಾಜರಕೋಟ ಚಪೆಟ್ಲಾ ಗುರುಮಠಕಲ್ ಪುಟಪಾಕ್‌ ಕ್ಲಸ್ಟರ್‌ಗಳ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಶೇ 50ರಷ್ಟು ಪುಸ್ತಕ ವಿತರಣೆಯಾಗಿದೆ. ಸೋಮವಾರ (ಜುಲೈ 8) ಮತ್ತು ಮಂಗಳವಾರ (ಜುಲೈ 9) ವೇಳೆಗೆ ಎರಡನೇ ಹಂತದ ವಿತರಣೆ ಮಾಡುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಪುಸ್ತಕಗಳ ವಿತರಣೆಯ ಜತೆಗೆ ವರ್ಕ್‌ಬುಕ್‌ ಕೂಡ ವಿತರಣೆಯೂ ಮಂಗಳವಾರಕ್ಕೆ ಶೇ 100ರಷ್ಟು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇನ್ನೂ ತಾಲ್ಲೂಕಿನ ಬಹುತೇಕ ಎಲ್ಲಾ ವಲಯಗಳಲ್ಲಿಯೂ ಕೆಲ ಶಾಲಾ ಕೋಣೆಗಳು ಬಳಕೆಗೆ ಯೋಗ್ಯವಿಲ್ಲ. ಅಂಥದಲ್ಲಿ ಮಕ್ಕಳನ್ನು ಬೇರೆ ತರಗತಿಯ ಕೋಣೆಗಳಲ್ಲಿ ಕೂಡಿಸಲಾಗುತ್ತಿದೆ. ಅಂಥ ಶಾಲೆಗಳಲ್ಲಿ ದುರಸ್ತಿ ಕಾರ್ಯವನ್ನು ಆದ್ಯತೆಯಲ್ಲಿ ಮಾಡಿದರೆ ಚೆನ್ನ ಎನ್ನುವುದು ಸಂಜು ಅಳೆಗಾರ ಅವರ ಕೋರಿಕೆ.

ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆ

ಹುಣಸಗಿ: ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಆರಂಭವಾಗಿ ತಿಂಗಳು ಗತಿಸಿದರೂ ಇನ್ನೂ ಮಕ್ಕಳಿಗೆ ಸರಿಯಾಗಿ ಪಠ್ಯಪುಸ್ತಕ ಸರಬರಾಜು ಆಗಿಲ್ಲ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯ ಹೆಚ್ಚಾಗಿದೆ ಎನ್ನುವ ಆರೋಪಗಳು ತಾಲ್ಲೂಕಿನ ಪಾಲಕರಿಂದ ಕೇಳಿ ಬರುತ್ತಿವೆ. ಈ ಹಿಂದೆ ಜೂನ್‌ನಲ್ಲಿ ಶಾಲಾ ಆರಂಭದ ದಿನವೇ ಮಕ್ಕಳಿಗೆ ಆಯಾ ತರಗತಿಯ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲಾಗುತ್ತಿತ್ತು. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ತಿಂಗಳಾದರೂ ಪಠ್ಯಪುಸ್ತಕ ಬಂದಿಲ್ಲ. ಇನ್ನೂ ತಾಲ್ಲೂಕಿನ ಯಾವುದೇ ಶಾಲೆಗೂ ಸಮವಸ್ತ್ರ ಹಾಗೂ ಮಕ್ಕಳಿಗೆ ಶೂ ವಿತರಣೆಯಾಗಿಲ್ಲ ಎಂದು ತಿಳಿದು ಬಂದಿದೆ. ‘ಹುಣಸಗಿ ವ್ಯಾಪ್ತಿಯಲ್ಲಿ 1ರಿಂದ 4ನೇ ತರಗತಿ ಮಕ್ಕಳಿಗೆ ಶೇ 50ರಷ್ಟು ಪುಸ್ತಕ ನೀಡಲಾಗಿದೆ. ಇನ್ನೂ 6ರಿಂದ 10ನೇ ತರಗತಿಯವರೆಗೆ ಶೇ 60ರಷ್ಟು ಶಾಲೆಗಳಿಗೆ ನೀಡಲಾಗಿದ್ದು ಇನ್ನುಳಿದ ಶಾಲೆಗಳಿಗೆ ಮಂಗಳವಾರ ಎಲ್ಲ ಪುಸ್ತಕಗಳನ್ನು ನೀಡಲಾಗುತ್ತದೆ’ ಎಂದು ಹುಣಸಗಿ ಬಿಆರ್‌ಸಿ ಬಂಗಾರೆಪ್ಪ ಮಾಹಿತಿ ನೀಡಿದರು. ‘ಕೊಡೇಕಲ್ಲ ವಲಯದಲ್ಲಿ 2 3 4 5ನೇ ತರಗತಿಗೆ ಕನ್ನಡ 2 3ನೇ ತರಗತಿಗೆ ಗಣಿತ 78 9ನೇ ತರಗತಿಗೆ ವಿಜ್ಞಾನ ಹಿಂದಿ ಸಮಾಜ ವಿಷಯದ ಪುಸ್ತಕಗಳು ಮಕ್ಕಳಿಗೆ ನೀಡಬೇಕಿದೆ. ಬಂದ ತಕ್ಷಣವೇ ವಿತರಣೆ ಮಾಡಲಾಗುವುದು’ ಎಂದು ಬಿಆರ್‌ಸಿ ರಫೀಕ್ ಮಳ್ಳಿಕರ್ ಹೇಳಿದರು.

ಸಿಗದ ಪುಸ್ತಕ ಸಮವಸ್ತ್ರ

ವಡಗೇರಾ: ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ಪ್ರಾಥಮಿಕ ಹಾಗೂ ಪೌಢ ಶಾಲಾ ಮಕ್ಕಳಿಗೆ ಸಂಪೂರ್ಣವಾಗಿ ಪುಸ್ತಕಗಳು ಸಿಕ್ಕಿಲ್ಲ. ತಾಲ್ಲೂಕಿನ ಬಹುತೇಕ ಶಾಲೆಗಳ ಪರಿಸ್ಥಿತಿ ಇದೆ ಆಗಿದೆ. ವಡಗೇರಾ ಪಟ್ಟಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 5 ನೇ ತರಗತಿ ಕನ್ನಡ 6 ನೇ ತರಗತಿ ಸಮಾಜ ವಿಜ್ಞಾನ 8 ನೇ ತರಗತಿ ವಿಜ್ಞಾನ ಪುಸ್ತಕಗಳು ಸರಬರಾಜು ಆಗಿಲ್ಲ. ಇನ್ನೂ ನಲಿ–ಕಲಿ (1ರಿಂದ3) ನೇ ತರಗತಿ ಯಾವ ಪುಸ್ತಕಗಳು ಬಂದಿಲ್ಲ. ನಲಿ- ಕಲಿಯ ಆಂಗ್ಲ ಭಾಷೆಯ ವರ್ಕ್‌ಬುಕ್ ಮಾತ್ರ ಸರಬರಾಜು ಆಗಿದೆ. ಇನ್ನೂ ಪಟ್ಟಣದಲ್ಲಿ ಇರುವ ಪೌಢಶಾಲೆಯಲ್ಲಿಯೂ ಪುಸ್ತಕಗಳ ಕೊರತೆ ಇದೆ. 9 ನೇ ತರಗತಿಯ ಕನ್ನಡ ಪಾರ್ಟ್‌ 2 ಹಿಂದಿ ಪಾರ್ಟ್‌ 1 ವಿಜ್ಞಾನ ಪಾರ್ಟ್‌ 1 ದೈಹಿಕ ಶಿಕ್ಷಣ ಪಾರ್ಟ್‌ 1ಮತ್ತು 2 ಬಂದಿಲ್ಲ. ಹತ್ತನೇ ತರಗತಿಯ ಕನ್ನಡ ಪಾರ್ಟ್‌ 1 ಮತ್ತು 2 ವಿಜ್ಞಾನ ಪಾರ್ಟ್‌ 2 ದೈಹಿಕ ಶಿಕ್ಷಣ1 ಮತ್ತು 2 ಬಂದಿಲ್ಲ.

ವಿತರಣೆಯಾಗದ ಸಮವಸ್ತ್ರ

ಸುರಪುರ: ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ಮಕ್ಕಳಿಗೆ ಇದುವರೆಗೂ ಸಮವಸ್ತ್ರ ವಿತರಣೆಯಾಗಿಲ್ಲ. ಸುರಪುರ ಮತ್ತು ಹುಣಸಗಿ ತಾಲ್ಲೂಕು ಸೇರಿ 386 ಪ್ರಾಥಮಿಕ 48 ಪ್ರೌಢಶಾಲೆಗಳು ಇವೆ. ಒಟ್ಟು 68716 ಮಕ್ಕಳ ದಾಖಲಾತಿ ಇದೆ. ಈಗಾಗಲೇ 50301 ಸಮವಸ್ತ್ರಗಳು ಸರಬರಾಜು ಆಗಿವೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿನಿಯರ ಸಮವಸ್ತ್ರ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮವಸ್ತ್ರ ಕಳಪೆ ಮಟ್ಟದ್ದಾಗಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗುಣಮಟ್ಟ ಪರೀಕ್ಷೆಯ ಅಧಿಕಾರಿಗಳು ಕೆಲವು ಸಮವಸ್ತ್ರಗಳ ಸ್ಯಾಂಪಲ್ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಅವರು ಅನುಮತಿ ನೀಡುವವರೆಗೆ ವಿತರಣೆ ಬೇಡ ಎಂದಿದ್ದಾರೆ. ಬೇಡಿಕೆಯಂತೆ ಪಠ್ಯ ಪುಸ್ತಕಗಳು ಸರಬರಾಜು ಆಗಿವೆ. ಈಗಾಗಲೇ ಶೇ 80 ರಷ್ಟು ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆಯಾಗಿವೆ. ಉಳಿದ ಶಾಲೆಗಳಿಗೆ ಎರಡು ಮೂರು ದಿನಗಳಲ್ಲಿ ಪೂರೈಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮವಸ್ತ್ರ ವಿತರಣೆ ಮಾಹಿತಿ (ತಾಲ್ಲೂಕು;ವಿತರಣೆ)

ಶಹಾಪುರ;54218

ಸುರಪುರ;0

ಯಾದಗಿರಿ;51115

(ಆಧಾರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ)

ಯಾರು ಏನಂತಾರೆ?

ಸುರಪುರ ಬ್ಲಾಕ್‌ಗೆ ಸಂಬಂಧಿಸಿದಂತೆ ಖಾದಿ ಮತ್ತು ಕೈಮಗ್ಗದಿಂದ ಸಮವಸ್ತ್ರ ಬಂದಿದ್ದು ಅದನ್ನು ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ಫಲಿತಾಂಶ ಬರುವವರೆಗೆ ವಿತರಣೆ ಮಾಡುವಂತಿಲ್ಲ - ಮಂಜುನಾಥ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ

ಗುಣಮಟ್ಟದ ಪರೀಕ್ಷೆ ನಡೆಯುತ್ತಿರುವುದರಿಂದ ಸಮವಸ್ತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಅಧಿಕಾರಿಗಳ ಆದೇಶ ದೊರೆತ ತಕ್ಷಣ ಮಕ್ಕಳಿಗೆ ಪೂರೈಸಲಾಗುವುದು - ಶಿವಪುತ್ರ, ಇಸಿಒ ಸುರಪುರ

ಸುರಪುರ ತಾಲ್ಲೂಕಿನ ರುಕ್ಮಾಪುರ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸಲಾಗಿದೆ. ಬೋಧನೆ ಸಮರ್ಪಕವಾಗಿ ನಡೆಯುತ್ತಿದೆ - ಶಿವಕುಮಾರ ಕಮತಗಿ, ಸಿಆರ್‌ಪಿ ರುಕ್ಮಾಪುರ

ಕಳೆದ ಸಾಲಿನ ಬಟ್ಟೆ ಹರಿದುಹೋಗಿವೆ. ಇನ್ನೂ ಸಮವಸ್ತ್ರ ಕೊಟ್ಟಿಲ್ಲ. ಹರಿದ ಬಟ್ಟೆಗಳನ್ನೇ ಹೊಲೆದು ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೇನೆ - ಮಲ್ಲಮ್ಮ ಬಡಿಗೇರ, ವಿದ್ಯಾರ್ಥಿ ಸುರಪುರ

ಈಗಾಗಲೇ ಶಾಲಾ ಸಮವಸ್ತ್ರದ ಬಟ್ಟೆಗಳು ಬಂದಿವೆ. ಶೂಗಳು ಬಂದಿಲ್ಲ. ಪರಿಶಿಷ್ಟ ಪಂಗಡ ಹಾಗೂ ಉಳಿದ ಸಮುದಾಯದ ಮಕ್ಕಳಿಗೆ ಶೂ ಖರೀದಿಸಲು ಅನುದಾನ ಬಂದಿಲ್ಲ - ಅಯ್ಯಣ್ಣ, ಮುಖ್ಯ ಶಿಕ್ಷಕ ಸರ್ಕಾರಿ ಪ್ರೌಢಶಾಲೆ ವಡಗೇರಾ

ಇನ್ನೂ ಕೆಲವೊಂದು ಜನರಿಗೆ ಪುಸ್ತಕ ಸಿಕ್ಕಿಲ್ಲ. ಮಂಗಳವಾರ ಉಳಿದವರಿಗೆ ಪುಸ್ತಕಗಳನ್ನು ಕೊಡುತ್ತಾರಂತೆ –ಶ್ವೇತಾ (ಹೆಸರು ಬದಲಿಸಿದೆ), 8ನೇ ತರಗತಿ ವಿದ್ಯಾರ್ಥಿನಿ

ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಗೆಂದು ಈಗಾಗಲೇ ಬಟ್ಟೆ ಬಂದಿದ್ದರೂ ಮಕ್ಕಳಿಗೆ ಸಮವಸ್ತ್ರ ವಿತರಣೆಗೆ ನೀಡುತ್ತಿಲ್ಲ ಎನ್ನುವ ಮಾತು ಕೇಳುತ್ತಿವೆ. ಸಂಬಂಧಿತರು ಶೀಘ್ರ ಕ್ರಮವಹಿಸಿ – ಭೀಮರಾಯ, ಎಲ್ಹೇರಿ ಪೋಷಕ

ಸರ್ಕಾರಿ ಶಾಲೆಗಳಿಗೆ ಕ್ಲಸ್ಟರ್ ಮೂಲಕ ಸಮವಸ್ತ್ರ ಹಂಚಿಕೆ ಮಾಡಿದೆ. ಮಕ್ಕಳು ಶೂ ಖರೀದಿಸಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರ ಖಾತೆಗೆ ಹಣ ಜಮಾ ಮಾಡಿದೆ - ರೇಣುಕಾ ಪಾಟೀಲ, ಬಿಆರ್‌ಸಿ ಶಹಾಪುರ

ಪೂಕರ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌

ಸುರಪುರ ತಾಲ್ಲೂಕಿನ ರುಕ್ಮಾಪುರದ ಸರ್ಕಾರಿ ಮಾದರಿಯ ಶಾಲೆಯ ಶಿಕ್ಷಕರಿಗೆ ಪಠ್ಯಪುಸ್ತಕ ನೀಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.