ADVERTISEMENT

ಸಮರ್ಪಕ ಅನುಷ್ಠಾನವಾಗದ ಉದ್ಯೋಗ ಖಾತ್ರಿ: ಹೋರಾಟದ ನಂತರ ಕಾರ್ಮಿಕರಿಗೆ ಕೆಲಸ!

ಅಶೋಕ ಸಾಲವಾಡಗಿ
Published 25 ಜುಲೈ 2024, 6:17 IST
Last Updated 25 ಜುಲೈ 2024, 6:17 IST
ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಆರಂಭಿಸುವ ಮೊದಲು ಕಾರ್ಮಿಕರು ಸಲಕರಣೆಗಳಿಗೆ ಪೂಜೆ ಸಲ್ಲಿಸಿದರು
ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಆರಂಭಿಸುವ ಮೊದಲು ಕಾರ್ಮಿಕರು ಸಲಕರಣೆಗಳಿಗೆ ಪೂಜೆ ಸಲ್ಲಿಸಿದರು   

ಸುರಪುರ: ಹಲಗೆ, ಬ್ಯಾಂಡ್ ಶಬ್ದ. ಸಲಕೆ, ಇತರ ಸಲಕರಣೆಗಳೊಂದಿಗೆ ಮೆರವಣಿಗೆ ನಡೆಸಿದ ಕಾರ್ಮಿಕರು.  ಇದೇನು ಎಂದು ಆಶ್ಚರ್ಯ ಎಂಬುದು ಗ್ರಾಮಸ್ಥರು. ಇದು ದೇವಿಕೇರಾ ಗ್ರಾಮದಲ್ಲಿ ಸೋಮವಾರ ಕಂಡು ಬಂದ ದೃಶ್ಯ.

ಗ್ರಾಮದ ಹತ್ತಿರದ ಬೆಟ್ಟ ಪ್ರದೇಶದಲ್ಲಿರುವ ದಾವಲ ಮಲಿಕ್ ದರ್ಗಾದ ಹತ್ತಿರ ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರು ಉತ್ಸಾಹದಿಂದ ಕೆಲಸ ಮಾಡಿ ಗ್ರಾಮ ಪಂಚಾಯಿತಿ ತಮಗೆ ವಹಿಸಿದ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿದರು.

ಇಲ್ಲಿ ನರೇಗಾ ಯೋಜನೆ ಆರಂಭವಾದಾಗಿನಿಂದ ಗ್ರಾಮದ ಕಾರ್ಮಿಕರಿಗೆ ಸಮರ್ಪಕ ಕೆಲಸ ದೊರೆತಿರಲಿಲ್ಲ. ಹೀಗಾಗಿ ಬಹುತೇಕ ಕಾರ್ಮಿಕರು ದೂರದ ಮಹಾನಗರಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಜಾಂಬವ ಯುವ ಸೇನೆಯ ಮುಖಂಡರು ಹಾಗೂ ಅಧಿಕಾರಿಗಳ ಜಾಗೃತಿಯಿಂದ ಸಮಸ್ಯೆ ತಾರ್ಕಿಕ ಅಂತ್ಯ ಕಂಡಿದೆ.

ADVERTISEMENT

ನರೇಗಾ ಬಗ್ಗೆ ಅಧಿಕಾರಿಗಳು ಗ್ರಾಮದಲ್ಲಿ ಡಂಗೂರ ಸಾರಿ ಜಾಗ್ರತೆ ಮೂಡಿಸಿದ್ದರು. ಕಾರ್ಮಿಕರ ಮನೆ ಮನೆಗೆ ತೆರಳಿ ಫಾರ್ಮ್‌ ನಂಬರ್‌ 6 ತುಂಬಿಸಿಕೊಂಡಿದ್ದರು. ಈಗ 100ಕ್ಕೂ ಹೆಚ್ಚು ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ.

‘ಗ್ರಾಮದಲ್ಲಿ ನಡೆಯುವ ಟೆಂಡರ್ ಕಾಮಗಾರಿಗಳಿಗೆ ಗ್ರಾಮದ ಕಾರ್ಮಿಕರು ಬರುತ್ತಿದ್ದರು. ಆದರೆ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಯಾರೂ ಅಭಿರುಚಿ ತೋರಿಸುತ್ತಿರಲಿಲ್ಲ. ನರೇಗಾ ನಿಯಮದಂತೆ ಫಾರ್ಮ್ 6 ತುಂಬಿಕೊಡಲು ಯಾರೂ ಮುಂದೆ ಬರುತ್ತಿರಲಿಲ್ಲ’ ಎಂದು ನರೇಗಾದ ಸಹಾಯಕ ನಿರ್ದೇಶಕ ರವಿಚಂದ್ರರೆಡ್ಡಿ ಹೇಳುತ್ತಾರೆ.

‘ರಾಜಕೀಯ ಮುಖಂಡರು, ಬಲಾಢ್ಯರು ಯಂತ್ರೋಪಕರಣಗಳಿಂದ ನರೇಗಾ ಕಾಮಗಾರಿ ನಿರ್ವಹಿಸಿ ಕಾರ್ಮಿಕರಿಗೆ ₹500 ನೀಡಿ ಹೆಬ್ಬಟ್ಟು ಒತ್ತಿಸಿಕೊಂಡು ಅವರ ಖಾತೆಯಿಂದ ಹಣ ಪಡೆಯುತ್ತಿದ್ದರು’ ಎಂಬುದು ಜಾಂಬವ ಯುವ ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಹೈಯಾಳಪ್ಪ ಬಿಲ್ಲವ್ ಅವರ ಆರೋಪ.

ಹೈಯ್ಯಾಳಪ್ಪ ಬಿಲ್ಲವ್
ದೇವಿಕೇರಾ ಗ್ರಾಮದಂತೆ ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಲ್ಲಿ ನರೇಗಾದಲ್ಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಈ ಬಗ್ಗೆ ಜಾಂಬವ ಯುವ ಸೇನೆ ಹೋರಾಟ ರೂಪಿಸುತ್ತಿದೆ
ಹೈಯ್ಯಾಳಪ್ಪ ಬಿಲ್ಲವ್ ಜಾಂಬವ ಯುವ ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ
ನರೇಗಾ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಅಲ್ಪ ಸ್ವಲ್ಪ ಜಮೀನು ಹೊಂದಿರುವ ನಮ್ಮಂತ ಕೆಲ ಕಾರ್ಮಿಕರು ಹೊಟ್ಟೆಪಾಡಿಗೆ ಗುಳೆ ಹೋಗಬೇಕಾಗುತ್ತಿತ್ತು.
ಹಣಮಂತ ನರೇಗಾ ಕಾರ್ಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.