ADVERTISEMENT

ವಡಗೇರಾ | ಜನ-ಜಾನುವಾರುಗಳಿಗೂ ಒಂದೇ ಕಟ್ಟಡ!

ಐಕೂರ ಗ್ರಾಮ ಪಂಚಾಯಿತಿ ಕಚೇರಿಗೆ ಸ್ವಂತ ಕಟ್ಟಡದ ಕೊರತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:35 IST
Last Updated 10 ಜುಲೈ 2024, 6:35 IST
ವಡಗೇರಾ ತಾಲ್ಲೂಕಿನ ಐಕೂರ ಗ್ರಾಮ ಪಂಚಾಯಿತಿಯು ಪಶು ಆಸ್ಪತ್ರೆಯ ಕಟ್ಟಡದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವದು
ವಡಗೇರಾ ತಾಲ್ಲೂಕಿನ ಐಕೂರ ಗ್ರಾಮ ಪಂಚಾಯಿತಿಯು ಪಶು ಆಸ್ಪತ್ರೆಯ ಕಟ್ಟಡದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವದು   

ವಡಗೇರಾ: ತಾಲ್ಲೂಕಿನ ಐಕೂರ ಗ್ರಾಮ ಪಂಚಾಯಿತಿ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಕಳೆದ ನಾಲ್ಕು ವರ್ಷಗಳಿಂದ ಪಶು ಆಸ್ಪತ್ರೆಯ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.

2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ವಡಗೇರಾ ತಾಲ್ಲೂಕಿನ ತುಮಕೂರ ಹಾಗೂ ಐಕೂರ ಗ್ರಾಮಗಳನ್ನು ನೂತನ ಗ್ರಾಮ ಪಂಚಾಯಿತಿಗಳೆಂದು ಘೋಷಣೆ ಮಾಡಿದ್ದು,  ಕಳೆದ ಸುಮಾರು 8 ವರ್ಷಗಳಿಂದ ಐಕೂರ ಗ್ರಾಮ ಪಂಚಾಯಿತಿಯು ಪಂಚಾಯಿತಿ ಕೇಂದ್ರ ಸ್ಥಾನವನ್ನು ಪಡೆದಿದೆ. ಈ ಪಂಚಾಯಿತಿಯು  16 ಸದಸ್ಯರನ್ನು ಒಳಗೊಂಡಿದೆ. ಇದರ ವ್ಯಾಪ್ತಿಯಲ್ಲಿ ಹಂಚನಾಳ, ಬಸಂತಪೂರ, ಮುನಮುಟಗಿ ಹಾಗೂ ಐಕೂರ ಗ್ರಾಮಗಳು ಬರುತ್ತವೆ.

ಈ ಹಿಂದೆ ಗ್ರಾಮದ ಒಳಭಾಗದಲ್ಲಿ ಗ್ರಾಮ ಪಂಚಾಯಿತಿ ಕಚೇರಿಯನ್ನು ಆರಂಭಿಸಲಾಗಿತ್ತು. ಅಲ್ಲಿ ಒಂದು ಕೋಣೆ  ಹಾಗೂ ಕಟ್ಟಡ ಚಿಕ್ಕದಿರುವ ಕಾರಣ ನಾಲ್ಕು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಗ್ರಾಮದ ಪಶು ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ಪಶು ಆಸ್ಪತ್ರೆಯ ಕಟ್ಟಡದಲ್ಲಿ ಪಂಚಾಯಿತಿಯ ಕಾರ್ಯ ಚಟುವಟಿಕೆ ನಡೆದಿದೆ.

ADVERTISEMENT

ಈ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿಯ ನಾಮಫಲಕವನ್ನೇ ಹಾಕಿಲ್ಲ. ಕೇವಲ ಪಶು ಆಸ್ಪತ್ರೆಯ ನಾಮಫಲಕ ಅಷ್ಟೆ ರಾರಾಜಿಸುತ್ತಿದೆ. ಹೊಸದಾಗಿ ಯಾರಾದರೂ ಪಂಚಾಯಿತಿಗೆ ಬಂದರೆ ಅವರು ಗ್ರಾಮವೆಲ್ಲ ಸುತ್ತಿ ಕೊನೆಗೆ ಪಂಚಾಯಿತಿ ಎಲ್ಲಿ ಎಂದು ಗ್ರಾಮಸ್ಥರಿಗೆ ಕೇಳುತ್ತಿದ್ದಾರೆ.

ಒಂದೇ ಕಟ್ಟಡದಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪಂಚಾಯಿತಿ ಕಚೇರಿಗೆ ಬಂದಾಗ ಹಾಗೂ ರೈತರು ತಮ್ಮ ಜಾನುವಾರುಗಳನ್ನು ಪಶು ಆಸ್ಪತ್ರೆಯ ಕಟ್ಟಡಕ್ಕೆ ಕರೆತಂದಾಗ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಪಂಚಾಯಿತಿಯ ಸದಸ್ಯರ ಸಭೆ ನಡೆಯುವಾಗ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆದ ಸಂದರ್ಭದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಹಿಡಿದುಕೊಂಡು ಪಶು ಆಸ್ಪತ್ರೆಗೆ ಬರುತ್ತಾರೆ. ಇದರಿಂದ ಸಭೆಯನ್ನು ನಡೆಸುವಾಗ ಬಹಳಷ್ಟು ಕಿರಿಕಿರಿಯಾಗುತ್ತದೆ ಎಂದು ಗ್ರಾಮ ಪಂಚಾಯಿತಿಯ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಪಶು ಆಸ್ಪತ್ರೆಯಲ್ಲಿ ಇರುವ ಪಂಚಾಯಿತಿ ಕಚೇರಿಯನ್ನು ನೂತನ ಕಟ್ಟಡ ನಿರ್ಮಾಣ ಆಗುವವರೆಗೆ ಬಾಡಿಗೆ ಕಟ್ಟಡದಲ್ಲಿ ಪಂಚಾಯಿತಿ ಕಚೇರಿಯನ್ನು ಆರಂಭಿಸಲು ಕ್ರಮ  ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಐಕೂರ ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡದ ಸಮಸ್ಯೆ ಇದೆ. ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಟೆಂಡರ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದ ಬಳಿಕ ಕಟ್ಟಡದ ಕಾಮಗಾರಿ ಆರಂಭವಾಗಲಿದೆ.
ದೇವಕಿ ಕವಾಲ್ದಾರ, ಐಕೂರ ಗ್ರಾ.ಪಂ.ಅಧ್ಯಕ್ಷೆ
ಪಶು ಆಸ್ಪತ್ರೆಯ ಕಟ್ಟಡದಲ್ಲಿರುವ ಐಕೂರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಕೂಡಲೇ ಬಾಡಿಗೆಗೆ ಕಟ್ಟಡವನ್ನು ಪಡೆದು ಅಲ್ಲಿ ಪಂಚಾಯಿತಿಯ ಕಚೇರಿಯನ್ನು ಆರಂಭಿಸಬೇಕು.
ಹಣಮಂತ ಪೂಜಾರಿ, ಹಂಚನಾಳ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.