ADVERTISEMENT

ಕೆಂಭಾವಿ | ನಾಲ್ಕು ಆಸ್ಪತ್ರೆಗಳಿಗೆ ಒಬ್ಬರೇ ಆಡಳಿತ ವೈದ್ಯಾಧಿಕಾರಿ!

ಕೆಂಭಾವಿ: ಒಬ್ಬರಿಗೆ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಸಮುದಾಯ ಆರೋಗ್ಯ ಕೇಂದ್ರದ ಹೊಣೆ

ಪವನ ಕುಲಕರ್ಣಿ
Published 14 ಜುಲೈ 2024, 6:52 IST
Last Updated 14 ಜುಲೈ 2024, 6:52 IST
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರ
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರ   

ಕೆಂಭಾವಿ: ಒಂದು ಆಸ್ಪತ್ರೆಗೆ ನಾಲ್ಕು ಜನ ವೈದ್ಯರು ಇರುವುದು ಸಾಮಾನ್ಯ ವಿಚಾರ. ಆದರೆ, ಕೆಂಭಾವಿ ವಲಯದ ನಾಲ್ಕು ಆಸ್ಪತ್ರೆಗಳಿಗೆ ವೈದ್ಯರೊಬ್ಬರೇ ಆಡಳಿತ ವೈದ್ಯಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಯಾಳಗಿ, ಮಲ್ಲಾ (ಬಿ) ಹಾಗೂ ಗುತ್ತಿಬಸವೇಶ್ವರ ಹಾಗೂ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾಗಿ ಡಾ.ಗಿರೀಶ್ ಕುಲಕರ್ಣಿ ಅವರು ಕಳೆದ ನಾಲ್ಕೈದು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ವೈದ್ಯರ ರೋಗಿಗಳ ಚಿಕಿತ್ಸೆಗೆ ಪರದಾಟ ಉಂಟಾಗಿದೆ.

ಯಾಳಗಿ, ಮಲ್ಲಾ (ಬಿ) ಹಾಗೂ ಗುತ್ತಿಬಸವೇಶ್ವರ ಆಸ್ಪತ್ರೆಗಳಲ್ಲಿ ಕಾಯಂ ವೈದ್ಯರು ಇಲ್ಲದ ಪರಿಣಾಮ ಗುತ್ತಿಗೆ ಆಧಾರದ ಮೇಲೆ ಆಯುಷ್ ವೈದ್ಯರ ಮೂಲಕ ಆಸ್ಪತ್ರೆ ನಡೆಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಥವಾ ಸಂಜೆಯ ನಂತರ ಬರುವ ರೋಗಿಗಳು ಕೆಂಭಾವಿ ಅಥವಾ ಬೇರೆಡೆ ಹೋಗುವುದು ಅನಿವಾರ್ಯವಾಗಿದೆ. ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಎಂಬಿಬಿಎಸ್‌, ಒಬ್ಬ ಆಯುಷ್‌ ವೈದ್ಯರಿದ್ದಾರೆ. ತಜ್ಞ, ಸ್ತ್ರೀ ಹಾಗೂ ಪ್ರಸೂತಿ ತಜ್ಞ ವೈದ್ಯ, ಇಎನ್‌ಟಿ, ಹಾಗೂ ಇತರೆ ಸಿಬ್ಬಂದಿ ಸೇರಿ 12 ಹುದ್ದೆಗಳು ಮಂಜೂರಾತಿ ಆಗಿದ್ದು, ಹಣಕಾಸು ಇಲಾಖೆ ಅನುಮೋದನೆ ಸಿಗದ ಕಾರಣ ನೇಮಕಕ್ಕೆ ತಡೆಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆರೋಗ್ಯ ಕೇಂದ್ರಕ್ಕೆ ಸೌಲಭ್ಯ ನೀಡಲು ಆಗ್ರಹ: ಕೆಂಭಾವಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾಗಿ 30 ವರ್ಷ ಕಳೆದಿವೆ. ಆದರೆ ಜನರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಚಿಕಿತ್ಸೆ ಮಾತ್ರ ಸಿಗುತ್ತಿಲ್ಲ. ಸರ್ಕಾರ ಸಮುದಾಯ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಎಂದು ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಒತ್ತಾಯ ಕೇಳಿ ಬಂದಿದೆ. 

ವಲಯದ 34 ಗ್ರಾಮಗಳಿಗೆ ಈ ಸಮುದಾಯ ಕೇಂದ್ರವೇ ದೊಡ್ಡ ಆಸ್ಪತ್ರೆ ಆಗಿದ್ದು, ಈ ಆಸ್ಪತ್ರೆಗೆ ಸರ್ಜನ್ ಸೇರಿ ಪರಿಣತ ಹೊಂದಿದ ವೈದ್ಯಾಧಿಕಾರಿಗಳ ಆವಶ್ಯಕತೆಯಿದೆ. ಪ್ರತಿ ತಿಂಗಳು ಶಸ್ತ್ರಚಿಕಿತ್ಸೆ ಶಿಬಿರ ನಡೆಸಬೇಕು. ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು. ಶವಾಗಾರ ಸೌಲಭ್ಯ ಒದಗಿಸಬೇಕು. ಆರೋಗ್ಯ ಕೇಂದ್ರಕ್ಕೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಕೆಂಭಾವಿ ಆಸ್ಪತ್ರೆಗೆ ಬೇಕಿದೆ ತಜ್ಞ ವೈದ್ಯರ ನೇಮಕ ವೈದ್ಯರ ಕೊರತೆಯಿಂದಾಗಿ ಇತರೆ ಸಿಬ್ಬಂದಿಗೆ ಹೆಚ್ಚಿದ ಒತ್ತಡ ಕಳೆದ ವರ್ಷ ಉತ್ತಮ ಆಸ್ಪತ್ರೆವೆಂದು ಪ್ರಶಸ್ತಿ ಪಡೆದಿದ್ದ ಕೆಂಭಾವಿ ಸಿಎಚ್‌ಸಿ

ಕೆಂಭಾವಿ ವಲಯದಲ್ಲಿ ವೈದ್ಯರ ಕೊರತೆಯಿದ್ದು ವೈದ್ಯರನ್ನು ಕೊರತೆ ನೀಗಿಸುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
ಡಾ.ಆರ್.ವಿ.ನಾಯಕ ತಾಲ್ಲೂಕು ವೈದ್ಯಾಧಿಕಾರಿ
ಸಮುದಾಯ ಆರೋಗ್ಯ ಕೇಂದ್ರಕ್ಕೆ ಹುದ್ದೆಗಳನ್ನು ಸೃಷ್ಟಿಸಿ ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಆರ್ಥಿಕ ಇಲಾಖೆ ಅನುಮೋದನೆ ನೀಡಲಿದ್ದು ಹುದ್ದೆಗಳನ್ನು ತುಂಬಿಕೊಳ್ಳಲಾಗುತ್ತದೆ.
ಶರಣಬಸಪ್ಪಗೌಡ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ನಿತ್ಯ 500 ಒಪಿಡಿ;

ತಿಂಗಳಿಗೆ 100ಕ್ಕೂ ಹೆಚ್ಚು ಹೆರಿಗೆ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿತ್ಯ 500 ಹೆಚ್ಚು ಹೊರ ರೋಗಿಗಳ ದಾಖಲಾತಿಯಿದ್ದು ತಿಂಗಳಲ್ಲಿ 100ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿವೆ. ಆದರೆ ಇಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರಿಲ್ಲದ ಕಾರಣ ನರ್ಸ್‌ಗಳೇ ಸಹಜ ಹೆರಿಗೆಗಳನ್ನು ಮಾಡಿಸುತ್ತಿದ್ದು ಸಿಸೇರಿಯನ್‌ ಆಗುವ ಸಾಧ್ಯತೆ ಕಂಡು ಬಂದಲ್ಲಿ ಜಿಲ್ಲಾ ಹಾಗೂ ಇತರೆ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಸುಸಜ್ಜಿತವಾದ ಕಟ್ಟಡ ಹೊಂದಿರುವ ಆಸ್ಪತ್ರೆಯು 1994ರಲ್ಲಿ  ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದೆ. ಮೂರು ದಶಕಗಳ ನಂತರ ಹಲವು ಹುದ್ದೆಗಳಿಗೆ ಮಂಜೂರಾತಿ ಸಿಕ್ಕಿದ್ದರೂ ಆರ್ಥಿಕ ಇಲಾಖೆ ಅನುಮೋದನೆ ಸಿಗದ ಕಾರಣ ವೈದ್ಯರ ಕೊರತೆಯನ್ನು ಎದುರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.